ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಹಾಗೂ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು – ಜೊತೆಯಾಗಿ ಕನ್ನಡದ ಮಹತ್ವದ ಅನುವಾದಕಿ ಕೆ.ಎನ್. ವಿಜಯಲಕ್ಷ್ಮೀ ನೆನಪಿನ ಕಾವ್ಯ ಪ್ರಕಾರದ ಅನುವಾದ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಮೊದಲು ನೋಂದಣಿ ಮಾಡಿದ 25 ಆಸಕ್ತ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದೆ.
ಗ್ರೀಕ್ ಕವಯತ್ರಿ ಸ್ಯಾಪೋ ಒಳಗೊಂಡಂತೆ ಹಲವು ಮಹತ್ವದ ಕಾವ್ಯ ಮತ್ತು ನಾಟಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ.ಎನ್. ವಿಜಯಲಕ್ಷ್ಮಿ ಅವರ ನೆನಪಿನಲ್ಲಿ ಬೆಂಗಳೂರಿನ ಕನ್ನಡ ಭವನದ ‘ವರ್ಣ ಆರ್ಟ್ ಗ್ಯಾಲರಿ’ಯಲ್ಲಿ ದಿನಾಂಕ 25 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಮೂರು ದಿನಗಳ ಕಾಲ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ವಿಜೇತೆ ಡಾ. ಶಾಕೀರಾ ಖಾನುಂ ಇವರ ನಿರ್ದೇಶನದಲ್ಲಿ ಅನುವಾದ ಕಮ್ಮಟ ನಡೆಯಲಿದೆ. ಈ ಅನುವಾದ ಕಮ್ಮಟದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಅನುವಾದ ಕ್ಷೇತ್ರದಲ್ಲಿ ನುರಿತ ತಜ್ಞರು ಮೂರು ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಶಿಬಿರದ ನಿರ್ದೇಶಕರು : ಡಾ. ಶಾಕೀರಾ ಖಾನುಂ
ಶಿಬಿರದ ಸಂಚಾಲಕರು : ನಾವೆಂಕಿ – 9731747920 ಮತ್ತು ಸುರೇಶ್ ಸಿ.ಎಂ. – 9742067427
ವಿಜಯಲಕ್ಷ್ಮೀ ಕೆ.ಎನ್. (28-12-1948 12-07-2002) :
ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ವಿರಳ. ಅದರಲ್ಲೂ ಅನುವಾದ ಕ್ಷೇತ್ರಕ್ಕೆ ಮಹಿಳೆಯರು ಕಾಲಿರಿಸುವುದು ಇನ್ನೂ ದುಸ್ತರ. ಇಂತಹ ಕ್ಲಿಷ್ಟಕರ ಕ್ಷೇತ್ರದಲ್ಲಿ ಮಹತ್ವದ ಅನುವಾದಗಳ ಮೂಲಕ ಕನ್ನಡ ಸಂವೇದನೆಯನ್ನು ವಿಸ್ತರಿಸುವ ಕೆಲಸವನ್ನು ವಿಜಯಲಕ್ಷ್ಮೀ ಕೆ.ಎನ್. ಇವರು ನೆರವೇರಿಸಿದ್ದಾರೆ. ಕನ್ನಡಕ್ಕೆ ಅಪರಿಚಿತವಾಗಿದ್ದ ಚೀನೀ ಜಾನಪದ, ನಾಟಕ, ಕತೆ ಮತ್ತು ಕಾವ್ಯಗಳನ್ನು ಅನುವಾದಿಸುವ ಮೂಲಕ ಪಾಶ್ಚಾತ್ಯ ಕಥನ ಮಾದರಿ, ರಂಗಪ್ರಯೋಗ ಮತ್ತು ಅಪರೂಪದ ಕಾವ್ಯವನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ.
ಕ್ರಿಸ್ತ ಪೂರ್ವ ಕಾಲದ ಗ್ರೀಕ್ ಕವಯಿತ್ರಿ ಸ್ಯಾಫೋ ರಚಿಸಿರುವ ಕವಿತೆಗಳನ್ನು ‘ಸ್ಯಾವೋ ಕಾವ್ಯ’ ಹೆಸರಿನಲ್ಲಿ ಕನ್ನಡಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಲೆಸ್ಬಿಯನ್ ಆಗಿದ್ದ ಸ್ಯಾಫೋಳ ಕಾವ್ಯವನ್ನು ಅನುವಾದಿಸುವ ಮಹತ್ವದ ಕೆಲಸವನ್ನು ಇವರು ಯಶಸ್ವಿಯಾಗಿ ಮಾಡಿದರು. ಮಡಿವಂತಿಕೆಯ ಭಾರತೀಯ ಸಮಾಜದಲ್ಲಿ ಹೊಸ ಚಿಂತನೆಗಳ ಹರಿವಿಗೆ ಈ ಕೃತಿ ಕಾರಣವಾಗಿದೆ. ಈ ಸಂಕಲನದಲ್ಲಿರುವ ‘ಅಪ್ರೋದಿತೆ’ ಮತ್ತು ಇತರ ಕವಿತೆಗಳು ಮಹಿಳಾ ಸಂವೇದನೆಯ ಹೊಸತನಕ್ಕೆ ಉದಾಹರಣೆಯಾಗಿವೆ. ಅನುವಾದಕ್ಕೆ ಬೇಕಾದ ಭಾಷೆಯನ್ನು ಯಶಸ್ವಿಯಾಗಿ ದುಡಿಸಿಕೊಳ್ಳುವ ಕಲೆಗಾರಿಕೆ ಮತ್ತು ಭಾಷೆ ಮತ್ತು ಭಾವಗಳನ್ನು ವಿಶಿಷ್ಟವಾಗಿ ಬೆಸೆಯುವ ಸರಳ ಶೈಲಿಯಿಂದ ಈ ಸಂಕಲನದ ಕವಿತೆಗಳು ಓದುಗರನ್ನು ಆಕರ್ಷಿಸಿವೆ.
ಇನ್ನು ಅಮೆರಿಕದ ಕವಯಿತ್ರಿ, ಕಾದಂಬರಿಕಾರ್ತಿ ಮತ್ತು ಕತೆಗಾರ್ತಿ ಸಿಲ್ವಿಯಾ ಪ್ಲಾತ್ ಅವರ ಕೃತಿಗಳನ್ನು, ಮೆಕ್ಸಿಕಾದ ಕವಿ ಆಕ್ಟೇವಿಯಾ ಪಾಜ್ ಮತ್ತು ಸ್ಪೇನ್ ಕವಿ ಹಾಗೂ ನಾಟಕಕಾರ ಫೆಡ್ರಿಕೋ ಗಾರ್ಸಿಯಾ ಲೋರ್ಕಾನ ಮೂರು ಜಗತ್ಪಸಿದ್ಧ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಲಪಂಥೀಯರ ಗುಂಪು ದಾಳಿಗೆ 38ರ ಹರೆಯದಲ್ಲೇ ಬಲಿಯಾದ ಲೋರ್ಕಾನ ಬರವಣಿಗೆಗಳಲ್ಲಿ ಜನಪದ, ನಗರದ ಬರಡುತನ, ಹಳ್ಳಿಗಾಡಿನ ಜೀವಂತಿಕೆ, ವಿವಿಧ ವರ್ಗಗಳ ಸೋಗಲಾಡಿತನ, ಬದುಕಲು ಪಡುವ ಜನರ ಬವಣೆಗಳನ್ನು ಗುರುತಿಸಬಹುದು. ಚೈನೀ, ಗ್ರೀಕ್ ಸೇರಿದಂತೆ ಜಾಗತಿಕ ಸಂದರ್ಭದ ಸಂವೇದನೆಗಳನ್ನು ಕನ್ನಡದ ಸಂವೇದನೆಗೆ ಒಗ್ಗುವ ಹದವರಿತ ಭಾಷೆಯಲ್ಲಿ ಅನುವಾದಿಸಿರುವ ವಿಜಯಲಕ್ಷ್ಮೀಯವರ ಕ್ರಮ ಈ ಕ್ಷೇತ್ರಕ್ಕೆ ಒಂದು ಅನುಪಮ ಉದಾಹರಣೆಯಾಗಿದೆ. ಇವರ ಹೆಸರಿನಲ್ಲಿ ಪ್ರತಿ ವರ್ಷ ಅನುವಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.