ಧಾರವಾಡ : ಕರ್ನಾಟಕ ಮಾಧ್ಯಮ ಅಕಾಡೆಮಿ 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಇವರು ತಿಳಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿದಿ ಪ್ರಶಸ್ತಿಗಳನ್ನು ಸ್ಥಾಪಿಸಿವೆ.
ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ‘ಅಭಿಮಾನಿ ಪ್ರಶಸ್ತಿ’, ಮೈಸೂರಿನ ‘ಮೈಸೂರು ದಿಗಂತ’ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ‘ಮೈಸೂರು ದಿಗಂತ ಪ್ರಶಸ್ತಿ’, ಬೆಂಗಳೂರಿನ ‘ಅಭಿಮನ್ಯು ಪತ್ರಿಕೆ’ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ, ಅಂಕಣ, ಸಂಪಾದಕೀಯ, ಪರಿಣಾಮಕಾರಿ ವರದಿಗೆ ‘ಅಭಿಮನ್ಯು ಪ್ರಶಸ್ತಿ’, ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ ‘ಪ್ರಜಾ ಸಂದೇಶ ದತ್ತಿ ಪ್ರಶಸ್ತಿ’ಗಳನ್ನು ಸ್ಥಾಪಿಸಿವೆ.
ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು ಬಹುಮಾನ ಒಳಗೊಂಡಿವೆ. ಈ ಪ್ರಶಸ್ತಿಗಳಿಗೆ ಆಸಕ್ತ ಪತ್ರಕರ್ತರು 01-01-2025ರಿಂದ 25-10-2025ರವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ-ವರದಿಯನ್ನು ಕಳುಹಿಸಬಹುದು. ಕನ್ನಡ ದೈನಿಕ-ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಿಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
ಲೇಖನ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ‘ಅಭಿಮಾನಿ ಪ್ರಶಸ್ತಿ-2025’, ‘ಮೈಸೂರು ದಿಗಂತ ಪ್ರಶಸ್ತಿ-2025’, ‘ಅಭಿಮನ್ಯು ಪ್ರಶಸ್ತಿ-2025’ ಹಾಗೂ ‘ಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2025’ ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ದಿನಾಂಕ 12 ನವೆಂಬರ್ 2025ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು.
