ಮಂಗಳೂರು : ಕಟೀಲು ದೇಗುಲದ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಪ್ರಕೃತಿ ವಿಸ್ಮಯ. ಕಟೀಲು ದೇಗುಲ ಹಾಗೂ ಮೂಲಸ್ಥಳವೆಂದು ನಂಬಲಾಗಿರುವ ಈ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಎರಡು ಪುಟ್ಟ ದ್ವೀಪಗಳು. ಇವೆರಡೂ ಅಧ್ಯಾತ್ಮದ ಧ್ಯಾನಾಸಕ್ತರಿಗೆ ವಿಶಿಷ್ಟ ಅನುಭವ ನೀಡಬಲ್ಲ ಆರಾಧನಾ ಕೇಂದ್ರಗಳು. ಬರವ ನೀಗಲು ಭುವಿಗೆ ಬಾರೆಂದು ಜಾಬಾಲಿ, ಕಾಮಧೇನುವಿನ ಮಗಳು ನಂದಿನಿಯಲ್ಲಿ ಪ್ರಾರ್ಥಿಸಿದಾಗ ಬರಲಾರೆ ಎಂದು ನಿರಾಕರಿಸಿ ಭುವಿಯನ್ನು ಜರೆದಾಗ, ಮುನಿದ ಮುನಿ ಜಾಬಾಲಿ ನದಿಯಾಗಿ ಹರಿ ಎಂದು ಶಪಿಸಿದ. ತಪ್ಪಿನರಿವಾಗಿ ನಂದಿನಿ ಜಗನ್ಮಾತೆ ದೇವಿಯ ಮೊರೆಹೋದಳು. ಋಷಿ ಶಾಪ ಹುಸಿಯಾಗದು. ನದಿಯಾಗಿ ಹರಿ. ನಿನ್ನ ಕಟಿ ಪ್ರದೇಶದಲ್ಲಿ ನಿನ್ನ ಮಗಳಾಗಿ ನೆಲೆಸುವೆ ಎಂದು ಹರಸಿದಳು. ಕನಕಗಿರಿಯಿಂದ ನದಿಯಾಗಿ ಹರಿದು ಬರವ ಕಳೆದು ಭುವಿಯ ಹಸಿರಾಗಿಸಿದಳು. ಉಸಿರಾದಳು. ದುರುಳ ಅರುಣಾಸುರನ ತರಿದು ಕಟೀಲಿನಲ್ಲಿ ನೆಲೆಯಾದ ಭ್ರಮರಾಂಬೆ ಭಕ್ತ ಜನರ ಹರಿಸಿದಳು. ಇದು ಪುರಾಣದ ಕತೆ.
ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ನದಿಯ ಉದ್ದ ಮೂವತ್ತೆರಡು ಮೈಲುಗಳು. ಜಲಾಯನದ ವ್ಯಾಪ್ತಿ 9112 ಹೆಕ್ಟೇರ್. ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ. ನದಿಗೆ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಆಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ. ಇದು ಜೀವನದಿಯ ವಿವರಣೆ.
ನದಿ ನಂದಿನಿಯ ಪಾವಿತ್ರ್ಯ, ಪ್ರಯೋಜನ ಹೀಗೆ ಯಾವುದೇ ಸಂಗತಿಗಳನ್ನು ಕಲ್ಪನೆಗಳನ್ನು ಚಿತ್ರಗಳಲ್ಲಿ ಮೂಡಿಸಿದರೆ ಹೇಗೆ?
ವರ ಬಲದಿಂದ ಕೊಬ್ಬಿ ದುರಹಂಕಾರದಿಂದ ಮೆರೆಯುತ್ತಿದ್ದ ದುರುಳ ಅರುಣಾಸುರನನ್ನು ಭ್ರಮರ ರೂಪದಿಂದ ಸಂಹರಿಸಿ, ಕಟೀಲಿನಲ್ಲಿ ನಂದಿನಿಯ ಮಗಳಾಗಿ ಹುಟ್ಟಿ, ಭ್ರಾಮರಿಯಾಗಿ ನೆಲೆಸಿ, ಕಟೀಲಮ್ಮನಾಗಿ ಭಕ್ತಜನಕಾಮಧೇನುವಾಗಿ, ಅಭಯಪ್ರದಾಯಿನಿಯಾಗಿ ಆರಾಧನೆಗೊಳ್ಳುತ್ತಿರುವಳು. ದುರ್ಗಾಪರಮೇಶ್ವರಿ ಭ್ರಮರರೂಪ ತಾಳಿರುವುದೂ ಒಂದರ್ಥದಲ್ಲಿ ಪ್ರಕೃತಿ ಆರಾಧನೆಯ ಸಂಕೇತ. ತುಳುನಾಡು ನಾಗಾರಾಧನೆಗೆ ಪ್ರಸಿದ್ಧವಾದುದು. ಕಟೀಲಿನ ಕುದ್ರು ಕೂಡ ಅನೇಕ ರೀತಿಯಲ್ಲಿ ನಾಗಾರಾಧನೆಗೆ ಸಾಕ್ಷಿಯಾಗಿ ನಿಂತಿದೆ. ನಾಗನ ವಾಸಕ್ಕೆ ಕಟ್ಟುವುದು ಚಿತ್ರಕೂಟ. ನಾಗಬನ ನಾಗಾರಾಧನೆ ಎಂದರೆ ಅದು ಪ್ರಕೃತಿ ಆರಾಧನೆ ತಾನೆ.
ಸಾಹಿತ್ಯ ಸೃಷ್ಟಿಗೆ ಪ್ರೇರಣೆ ಸ್ಫೂರ್ತಿ ಪ್ರಕೃತಿ. ನಂದಿನಿಯ ನಿನಾದದೊಂದಿಗೆ ಎರಡು ವೇದಿಕೆಗಳಲ್ಲಿ ಸಾಹಿತ್ಯ ಅರಳುವ ಸಮಯ; ಕಲಾಕಾರರ ಚಿತ್ರಗಳಲ್ಲಿ ಮೂಡುವ ಪ್ರಕೃತಿ; ಚಿತ್ತಾರವಾಗುವ ಬಗೆಯನ್ನು 2026 ಮಾರ್ಚ್ 1ರ ಭಾನುವಾರ ನಡೆಯುವ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಕಣ್ಣುಂಬಿಸಿಕೊಳ್ಳುವ ಆಸೆ, ಕಾತರ ಸಮ್ಮೇಳನಕ್ಕೆ ಬರುವ ಸುಮನಸರದ್ದು.
ಕಟೀಲು ಕ್ಷೇತ್ರ ಪುರಾಣ, ನಂದಿನಿ ನದಿ, ಅದರ ಪಾವಿತ್ರ್ಯ, ಕಟೀಲಿನಲ್ಲಿ ಪ್ರಕೃತಿ ಆರಾಧನೆಯ ಕಲ್ಪನೆ, ಭ್ರಾಮರಿಯ ಆರಾಧನೆ, ನಾಗಾರಾಧನೆ, ಕಟೀಲಿನಲ್ಲಿ ಯಕ್ಷಗಾನದ ಮೂಲಕ ನಡೆಯುತ್ತಿರುವ ಕಲಾರಾಧನೆ, ಹಸಿವು ನೀಗಿಸುವ ಅನ್ನದಾನ, ವಿದ್ಯಾದಾನ ಹೀಗೆ ಯಾವುದೇ ವಿಚಾರವಾಗಿ ಚಿತ್ರಗಳನ್ನು ಬಿಡಿಸಬಹುದು.
ಕ್ಯಾನ್ವಾಸ್ ಹಾಗೂ ಬಣ್ಣ ನೀಡಲಾಗುವುದು. ಬಿಡಿಸಿದ ಚಿತ್ರವನ್ನು ಕಟೀಲು ದೇವಿಯ ಪದತಲಕ್ಕೆ ಸಮರ್ಪಿಸಿ ಧನ್ಯರಾಗಬಹುದು. ಸೂಕ್ತ ಸ್ಥಳದಲ್ಲಿ ಈ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಚಿತ್ರಕಾರರಿಗೆ ದೇವಿಯ ಪ್ರಸಾದ ನೀಡಲಾಗುವುದು. ಈ ಸಮ್ಮೇಳನದ ಸಂದರ್ಭ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ ಇಟ್ಟಿರುವ ಹೆಸರು ‘ಚಿತ್ರಕೂಟ’. ಭಾಗವಹಿಸಲು ಇಷ್ಟಪಡುವವರು ದಿನಾಂಕ 25 ಫೆಬ್ರವರಿ 2026ರ ಒಳಗೆ ಹೆಸರು ತಿಳಿಸಬೇಕಾದ ಸಂಪರ್ಕ ಸ್ವಾತಿ ಕುಲಾಲ್ : 9686139426, ಲೋಲಾಕ್ಷ ಕಿನ್ನಿಗೋಳಿ : 9845362763.
