ಮಡಿಕೇರಿ : 2025ನೇ ಸಾಲಿನ ಐತಿಹಾಸಿಕ ಮಡಿಕೇರಿ ದಸರಾ ಬಹುಭಾಷೆ ಕವಿಗೋಷ್ಠಿಗೆ ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ, ಕವಯತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಯತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ದಿನಾಂಕ 06 ಸೆಪ್ಟೆಂಬರ್ 2025ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ.
ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6ರಿಂದ 14 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಕವನ ಕಳುಹಿಸುವವರು ತರಗತಿ ಹಾಗೂ ಶಾಲೆಯ ವಿವರವನ್ನು ನಮೂದಿಸಬೇಕು. ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೇ ಕಳುಹಿಸಿಕೊಡಬೇಕು. ಮಾಹಿತಿಗಳಿಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ವ್ಯಾಟ್ಸಾಪ್-91130 69827, 97314 69871 ಮೂಲಕ ಕಳುಹಿಸಬಹುದು. ಕವನಗಳನ್ನು ಅಕ್ಷರಗಳು ತಪ್ಪಿಲ್ಲದಂತೆ ಟೈಪ್ ಮಾಡಿ ಕಳುಹಿಸಬೇಕು., ವಾಟ್ಸಾಪ್ ನಲ್ಲಿ ಕವನದ ಛಾಯ ಪ್ರತಿಯನ್ನು ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ., ವಾಟ್ಸಾಪ್ ಇಲ್ಲದಿರುವವರು ಅಂಚೆ ಮೂಲಕ ಈ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬಹುದು. ವಿಳಾಸ : ಅಧ್ಯಕ್ಷರು, ಬಹುಭಾಷೆ ಕವಿಗೋಷ್ಠಿ ಸಮಿತಿ, ಕೇರಾಫ್ ‘ಶಕ್ತಿ’ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-571201 (ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಬಹುಭಾಷೆ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು).
ಕವನಗಳ ನಿಬಂಧನೆಗಳು : ಯಾವುದೇ ಭಾಷೆಯಲ್ಲಿ ಸ್ವರಚಿತ, ಸಾಮಾಜಿಕ ಜಾಲ ತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗದ ಕವನಗಳನ್ನು ಮಾತ್ರ ಕಳುಹಿಸಬೇಕು. ಕವನಗಳು ಗರಿಷ್ಠ 20 ಸಾಲುಗಳನ್ನು ಮೀರಬಾರದು. ಯಾವುದೇ ಭಾಷೆಯ ಒಂದು ಕವನವನ್ನು ಮಾತ್ರ ಆಯ್ಕೆಗೆ ಕಳುಹಿಸಬೇಕು. ಎರಡೆರಡು ಭಾಷೆಗಳಲ್ಲಿ ಒಬ್ಬರೇ ಕವನಗಳನ್ನು ಕಳುಹಿಸಿದಲ್ಲಿ ಅವರ ಎಲ್ಲಾ ಕವನಗಳನ್ನು ತಿರಸ್ಕರಿಸಲಾಗುತ್ತದೆ, ಹೆಚ್ಚಿನ ಮಾಹಿತಿಗೆ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್-99454 11821, ಸದಸ್ಯರಾದ ಪಿ.ಎಂ. ರವಿ-99720 73295 ಇವರುಗಳನ್ನು ಸಂಪರ್ಕಿಸಬಹುದು. ಆಯ್ಕೆಯಾದ ಕವನಗಳ ವಾಚನಕ್ಕೆ ಬಹುಭಾಷೆ ಕವಿಗೋಷ್ಠಿಯಂದು ಅವಕಾಶ ಕಲ್ಪಿಸಲಾಗುತ್ತದೆ. ಗೋಷ್ಠಿಯಲ್ಲಿ ಕವಿಗಳು ಕಡ್ಡಾಯವಾಗಿ ಆಯ್ಕೆಯಾದ ಕವನವನ್ನು ವಾಚಿಸಬೇಕು. ಕವನಗಳನ್ನು ಹಾಡುವಂತಿಲ್ಲ ಮತ್ತು ಯಾವುದೇ ಪೀಠಿಕೆಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕವಿಗೋಷ್ಠಿ ನಡೆಯುವ ದಿನಾಂಕ ಹಾಗೂ ಸ್ಥಳವನ್ನು ನಂತರ ತಿಳಿಸಲಾಗುತ್ತದೆ ಎಂದು ಮಡಿಕೇರಿ ದಸರಾ ಬಹುಭಾಷೆ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್ ತಿಳಿಸಿದ್ದಾರೆ.