ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನೃತ್ಯದ ಮೂಲಕ ಕಥೆ ಹೇಳುವ ‘ಐಸಿರಿ ಅಧ್ಯಾಯ-2’ ಉತ್ಸವಗಳ ಪರಂಪರೆ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025 ರಂದು ವಿ. ವಿ ಇಲ್ಲಿನ ಎಲ್. ಸಿ.ಆರ್. ಐ. ಸಭಾಂಗಣದಲ್ಲಿ ನಡೆಯಿತು.
ಸ್ಪರ್ಧೆ ಉದ್ಘಾಟಿಸಿದ ಖ್ಯಾತ ರಂಗ ಹಾಗೂ ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ “ಶಿಕ್ಷಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಯೋಜಿಸುವ ಮಹತ್ವ ಅರಿಯ ಬೇಕು. ಇಂತಹ ಉಪಕ್ರಮಗಳು ಕಲಿಕೆಯ ವಿಧಾನವನ್ನು ಯಾವ ರೀತಿ ಹೆಚ್ಚಿಸುತ್ತವೆ ಮತ್ತು ಮಹತ್ವಾಕಾಂಕ್ಷಿ ಯುವ ಕಲಾವಿದರಿಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತವೆ” ಎಂದರು.
ವಿಶ್ವವಿದ್ಯಾಲಯದ ಉಪಕುಲಪತಿ ಫಾ.ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಮಾತನಾಡಿ, ‘ಕರಾವಳಿಯ ಸಾಂಪ್ರದಾಯಿಕ ಭಾಷೆಗಳು ಮತ್ತು ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಹಾಗೂ ಅವುಗಳ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಬಲಪಡಿಸುವ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು,” ಎಂದರು.
ಇದೇ ಸಂದರ್ಭದಲ್ಲಿ ತುಳುನಾಡಿನ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವ ಅವಿರತ ಪ್ರಯತ್ನಗಳಿಗಾಗಿ ಬೆನೆಟ್ ಅಮ್ಮಣ್ಣ, ಹಬ್ಬಗಳು ಹಾಗೂ ಆಚರಣೆಗಳಿಗೆ ಸಾಂಪ್ರದಾಯಿಕ ಪಟಾಕಿಗಳನ್ನು ಒದಗಿಸುತ್ತಾ ತುಳುನಾಡಿನ ಸಾಂಸ್ಕೃತಿಕ ಪರಂಪರೆಗೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಅಬ್ದುಲ್ ಹಮೀದ್ ಮತ್ತು ಹಗಲು ವೇಳೆ ಲ್ಯಾಟರೈಟ್ ಕಲ್ಲಿನ ಉತ್ಪನನದಲ್ಲಿ ಕೆಲಸ ಮಾಡುವ ಹಾಗೂ ರಾತ್ರಿ ವೇಳೆ ಯಕ್ಷಗಾನ ಪ್ರದರ್ಶನ ನೀಡುವ ಕಲಾವಿದ ಉಮೇಶ್ ಸಾಲಿಯಾನ್ ಅವರಿಗೆ ಪ್ರತಿಷ್ಠಿತ ‘ಐಸಿರಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಯೋಜಕರಾದ ಅಕ್ಷಿತ್ ಕುಮಾರ್ ಮತ್ತು ಡಾ. ಸಂಧ್ಯಾ ಸಿರ್ಸಿಕರ್, ವಿದ್ಯಾರ್ಥಿ ಸಂಯೋಜಕರಾದ ಕೌಶಿಕ್ ಸುವರ್ಣ, ಹನ್ಸ್ ಎಸ್. ಅಮೀನ್, ಚಿರಾಗ್ ಬಜಾಲ್ ಮತ್ತು ಸ್ನೇಹಾ ಡಿಸೋಜ ಉಪಸ್ಥಿತರಿದ್ದರು.