ಮೈಸೂರು : ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಕಲಿಸು ಫೌಂಡೇಷನ್ ವತಿಯಿಂದ ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನಲ್ಲಿ ದಸರಾ ಆನೆ ಅರ್ಜುನನ ಎರಡನೇ ವರ್ಷದ ನೆನಪು ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಇವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 04 ಡಿಸೆಂಬರ್ 2025ರಂದು ಬೆಳಗ್ಗೆ 10-30ಕ್ಕೆ ನಡೆಯಲಿದೆ.
2023ರ ಡಿಸೆಂಬರ್ 4ರಂದು ಅರ್ಜುನ ಹಾಸನ ಜಿಲ್ಲೆಯ ಸಕ್ಷೇಶಪುರ ತಾಲೂಕಿನ ಯಸಳೂರಿನಲ್ಲಿ ಮದಗಜದೊಂದಿಗೆ ಹೋರಾಡುತ್ತಾ ದುರಂತ ಅಂತ್ಯ ಕಂಡ ದಿನ. ಕಳೆದ ವರ್ಷ ಕೂಡ ಕಲ್ಬರಲ್ ಅಸೋಸಿಯಷನ್ ಮೊದಲ ವರ್ಷದ ಕಾರ್ಯಕ್ರಮ ನಡೆಸಿತ್ತು. ಐತಿಚಂಡ ರಮೇಶ್ ಉತ್ತಪ್ಪ ಇವರ 40ನೇ ಕೃತಿ ಅರ್ಜುನ ಬಲಿಯಾದ ಘಟನೆಯ ತನಿಖಾ ವರದಿಯನ್ನು ಒಳಗೊಂಡ ‘ಸಾವಿನ ಸತ್ಯ’ ಹಾಗೂ ‘ದಸರಾ ಆನೆಗಳು- ಭೀಮ ಹಾಗೂ ಇತರರು’ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು.
ಈ ಕಾರ್ಯಕ್ರಮವನ್ನು ಮಾಜಿ ಸಂಸದ ಶ್ರೀ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದು, ಮಾಜಿ ಸಿಂಡಿಕೇಟ್ ಸದಸ್ಯ ಡಾ. ಈ.ಸಿ. ನಿಂಗರಾಜು ಗೌಡ, ಕಾಂಗ್ರೆಸ್ ಮುಖಂಡ ಡಾ. ಬಿ.ಜೆ. ವಿಜಯ ಕುಮಾರ್ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀ ಕೆ.ಬಿ. ಲಿಂಗರಾಜು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪಶು ವೈದ್ಯಾಧಿಕಾರಿ ಡಾ. ಮುಜೀಬ್ ಉರ್ ರೆಹಮಾನ್ ಹಾಗೂ ಅರ್ಜುನನ ಅಭಿಮಾನಿ ಶ್ರೀಮತಿ ಕೆ.ಆರ್. ಸತ್ಯಪ್ರಭಾ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಅರ್ಜುನನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಲ್ಚರ್ ಅಸೋಸಿಯೇಷನ್‌ನ ಅಧ್ಯಕ್ಷ ಎ.ಪಿ. ನಾಗೇಶ್ ಹಾಗೂ ಕಲಿಸು ಫೌಂಡೇಷನ್‌ನ ಸಹ ಸಂಸ್ಥಾಪಕ ಎಂ.ಎಂ. ನಿಖಿಲೇಶ್ ಕೋರಿದ್ದಾರೆ.


