ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೂರ್ಣರಾತ್ರಿ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 22-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಗುರು ಸಮ್ಮಾನ’ ಸ್ವೀಕರಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಇವರು ಮಾತನಾಡುತ್ತಾ “ಸಂಸ್ಕಾರ, ಸಂಸ್ಕೃತಿ ಪಸರಿಸುವ ವಿಶಿಷ್ಟ ಕಲೆ ಯಕ್ಷಗಾನ. ಇದು ಹೇಗೆ ಸರಿ, ಅದೇಕೆ ಸರಿಯಲ್ಲ ಎಂದು ತರ್ಕಿಸುವ ಬುದ್ಧಿ ನಮಗೆ ಶಾಲಾ ಪಠ್ಯದಿಂದ ದೊರೆತಿದ್ದಲ್ಲ, ಬದಲಾಗಿ ತರ್ಕಶಕ್ತಿ, ಪದ ಭಂಡಾರ, ಪೌರಾಣಿಕ ಜ್ಞಾನ ಇವೆಲ್ಲ ಯಕ್ಷಗಾನದಿಂದ ದೊರೆತಿರುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಸೇತುರಾಂ ಎಸ್.ಎನ್., ಟಿ. ಶಿವಾನಂದ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಡಾ.ಬಾಬು ಗೋವಿಂದ ಪೂಜಾರಿ, ರಘುರಾಮ ಶೆಟ್ಟಿ ಎಳ್ಮುಡಿ, ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಅಶ್ವತ್ಥ ಹೆಗ್ಡೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ‘ಕೃಷ್ಣ ಸಂಧಾನ’ ಹಾಗೂ ‘ಕರ್ಣಾರ್ಜುನ’ ಎಂಬ ಅಖ್ಯಾನಗಳ ಯಕ್ಷಗಾನ ತಾಳಮದ್ದಳೆ ಜರುಗಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದು, ಇನ್ನೂರಕ್ಕೂ ಹೆಚ್ಚು ಪ್ರೇಕ್ಷಕರು ಬೆಳಗಿನ ಜಾವದ ತನಕ ಉಪಸ್ಥಿತರಿದ್ದರು. ಸಂಘಟಕ ನಾಗರಾಜ್ ಶೆಟ್ಟಿ ನೈಕಂಬ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸುರೇಶ ನಂದ್ರೊಳ್ಳಿ ವಂದಿಸಿ, ಸುನೀಲ್ ಹೊಲಾಡು ನಿರೂಪಿಸಿದರು.