ಬೆಂಗಳೂರು : ಆತ್ಮಾಲಯ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥೆ ಡಾ.ಪದ್ಮಜ ಸುರೇಶ್‌ರವರ ನೇತೃತ್ವದಲ್ಲಿ ವಾರ್ಷಿಕವಾಗಿ ಪ್ರದಾನ ಮಾಡುವ 2023ರ ಶ್ರೀ ಶಾಂತ ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ತೆಂಕು ತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ, ಸಂಘಟಕ ಕೆ.ಎಚ್. ದಾಸಪ್ಪ ರೈ ಇವರಿಗೆ ದಿನಾಂಕ 09-12-2023ರಂದು ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮವು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕ ಯೂತ್ ಸೆಂಟ್ರಲ್ ಸಭಾಂಗಣದಲ್ಲಿ ಜರಗಿತು. ಈ ಪ್ರಶಸ್ತಿಯು ನಗದು ರೂ.30,000/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯರವರು ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಈ ಹಿಂದೆ ವಿದ್ವಾನ್ ಕುದುಮಾರ್ ವೆಂಕಟ್ರಮಣ, ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬ್ಳೆ ಶ್ರೀಧರ ರಾವ್ ಅವರು ಸಂಗೀತ ಹಾಗೂ ಯಕ್ಷಗಾನದ ಕ್ಷೇತ್ರಗಳ ಸಾಧನೆಗಾಗಿ ಈ ಪ್ರಶಸ್ತಿ ಪಡೆದಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರ ಮಂಗಲದ ಕುತ್ಯಾಳ ಹೊಸಮನೆಯ ಮೂಲ ಮನೆತನ ಕೆ.ಎಚ್. ದಾಸಪ್ಪ ರೈ ಅವರು ತುಳು ಯಕ್ಷರಂಗದಲ್ಲಿ ಇತಿಹಾಸ ನಿರ್ಮಿಸಿದ ‘ಕಾಡಮಲ್ಲಿಗೆ’ಯ ಮೈಂದ ಗುರಿಕಾರ ಪಾತ್ರದಲ್ಲಿ ಪ್ರಸಿದ್ಧರಾದವರು. ಮಹಿಷಾಸುರ ಸೇರಿದಂತೆ ಹಲವಾರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ ಖ್ಯಾತಿ ಇವರದ್ದಾಗಿದೆ. ತುಳು ಯಕ್ಷಗಾನಗಳಲ್ಲಿ ಸಾಮಾನ್ಯವಾಗಿ ಕಥಾನಾಯಕನ ಪಾತ್ರ ಅವರಿಗೆ ಕಟ್ಟಿಟ್ಟದ್ದು, ಪ್ರಸ್ತುತ ಪುತ್ತೂರಿನ ಬಪ್ಪಳಿಗೆ ಯಕ್ಷಧಾಮ ನಿಲಯದ ನಿವಾಸಿಯಾಗಿದ್ದಾರೆ.