ಮಂಜೇಶ್ವರ : ಕೇರಳ ಸರಕಾರದ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 05-07-2024ರಂದು ತಿರುವನಂತಪುರದ ಕೊಟ್ಟಾರಕುನ್ನು ನಿಶಾಗಂಧಿ ಆಡಿಟೋರಿಯಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಪಸ್ಥಿತಿಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸಂಸ್ಕೃತಿ ಇಲಾಖೆ ಸಚಿವ ಸಜಿ ಚೆರಿಯನ್ ಅವರು ಪ್ರಸಿದ್ದ ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಬಾಯಾರು ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದರು. ರಮೇಶ್ ಶೆಟ್ಟಿ ಬಾಯಾರು ಅವರು ತೆಂಕು ತಿಟ್ಟು ಯಕ್ಷಗಾನ ವಲಯದಲ್ಲಿ ಗುರುತಿಸಿಕೊಂಡಿರುವ ಹವ್ಯಾಸಿ ಕಲಾವಿದರಾಗಿದ್ದು, ತರಬೇತಿಯ ಮೂಲಕವೂ ಹಲವಾರು ಶಿಷ್ಯ ವೃಂದವನ್ನು ಹೊಂದಿದ್ದಾರೆ. ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ನಿವಾಸಿಯಾದ ಇವರ ಕಂಸ, ಶಿಶುಪಾಲ, ರಾವಣ, ಕೌರವ ಮತ್ತಿತರ ಪಾತ್ರಗಳು ಜನಮನಸೂರೆಗೊಂಡಿವೆ.