ಉಡುಪಿ : ಭಾವನಾ ಫೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ಸ್ಟುಡಿಯೋ ನೆರಳು ಹಾಗೂ ಎಬಿಸಿಡಿ ಡಿಸೈನ್ ಫಂಡಮೆಂಟಲ್ಸ್ ಸಹಯೋಗದಲ್ಲಿ ಆಯೋಜಿಸಿದ ‘ಜನಪದ’ ದೇಶೀಯ ಸರಣಿ ಕಲಾ ಕಾರ್ಯಾಗಾರದ ಎಂಟನೇ ಆವೃತ್ತಿಯು ದಿನಾಂಕ 02-11-2023ರ ಗುರುವಾರದಂದು ಬಡಗುಪೇಟೆಯ 10.03.28 ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಟುಡಿಯೋ ‘ನೆರಳು’ ಇದರ ಆರ್ಕಿಟೆಕ್ಟ್ ಸಂಪ್ರೀತ್ ರಾವ್ “ ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದುದು. ಇವುಗಳ ಹಿಂದಿರುವ ಜ್ಞಾನವನ್ನು ಈ ತೆರನಾದ ಕಾರ್ಯಾಗಾರಗಳ ಮುಖೇನ ಉಡುಪಿಯ ಪರಿಸರದಲ್ಲಿ ನಡೆಸಿಕೊಡುತ್ತಿರುವ ಭಾವನಾ ಪೌಂಡೇಶನ್ನ ಕಾರ್ಯ ಶ್ಲಾಘನೀಯ “ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕರಾದ ಡಾ. ನಿರಂಜನ್ ಯು.ಸಿ ಇವರು “ಶಾಲಾ ಮಕ್ಕಳಿಗೆ ದೇಸೀಯ ಕಲಾಪ್ರಕಾರಗಳನ್ನು ಕಲಿಯಲು ಇದೊಂದು ಉತ್ತಮ ಅವಕಾಶ. ನಾನೂ ಕೂಡ ಈ ಹಿಂದಿನ ಸರಣಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಕಲಾ ಪರಂಪರೆಯ ಹಿಂದಿರುವ ಜ್ಞಾನವನ್ನು ಅರಿತುಕೊಂಡೆ. ಇವೆಲ್ಲ ಒಂದಕ್ಕಿಂತ ಒಂದು ಭಿನ್ನವಾದುದು, ಇವನ್ನೆಲ್ಲ ಅರಿತುಕೊಳ್ಳುವ ಸಲುವಾಗಿ ಕಲಾಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸುತ್ತ ಸದುಪಯೋಗ ಮಾಡಿಕೊಳ್ಳಬೇಕು” ಎಂದರು. ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.
ಈ ಎಂಟನೆಯ ಸರಣಿ ಕಲಾ ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ವಾರ್ಲಿ ಕಲೆಯಲ್ಲಿನ ವಿಶಿಷ್ಟ ಶೈಲಿಗಳಾದ ನಯಾಧಾನ್ ಹಾಗೂ ಚೌಕ್ ಚಿತ್ರಗಳನ್ನು ಕಲಿಸಿಕೊಡಲು ಬಂದಿರುವ ವಾರ್ಲಿ ಬುಡಕಟ್ಟು ಕಲಾವಿದೆಯರಾದ ಮೀನಾಕ್ಷಿ ವಾಸುದೇವ್ ವಾಯೆಡಾ ಹಾಗೂ ನಳಿನಿ ರಾಮಚಂದ್ರ ಕಲ್ಲಂಗಡರವರು ಈ ಕಲೆಯ ವೈಶಿಷ್ಟ್ಯತೆಗಳನ್ನು ತಿಳಿಸಿದರು. ಕಾರ್ಯಾಗಾರಗಳು 02-11-2023 ರಿಂದ 05-11-2023ರ ತನಕ ಬೆಳಿಗ್ಗೆ 9.30 ರಿಂದ ಸಂಜೆ ಘಂಟೆ 5.00ರ ತನಕ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ 9845650544 ಇವರನ್ನು ಸಂಪರ್ಕಿಸಬಹುದು.