ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರದ 4, 5 ಮತ್ತು 6ನೇ ಕಾರ್ಯಾಗಾರವು ಇದೇ ಬರುವ ಏಪ್ರಿಲ್ 27ರಿಂದ 30ರ ತನಕ ಉಡುಪಿಯ ಬಡಗುಪೇಟೆಯಲ್ಲಿ ನಡೆಯಲಿದೆ.
ಬಿಹಾರದ ಮಧುಬನಿ, ಪೇಪರ್ ಮೆಶ್ ಮತ್ತು ಗೋಧ್ ನಾ ಕಲಾ ಪ್ರಕಾರಗಳ ಈ ಸರಣಿ ಕಾರ್ಯಾಗಾರವು ಶ್ರವಣ್ ಕುಮಾರ್ ಪಾಸ್ವಾನ್ ಇವರ ನಿರ್ದೇಶನದಲ್ಲಿ ನಡೆಯಲಿದೆ. ಕಾರ್ಯಾಗಾರವು ಬೆಳಿಗ್ಗೆ 9-30ರಿಂದ ಸಂಜೆ 5-00 ಘಂಟೆಯ ತನಕ ನಡೆಯಲಿದ್ದು, ಪ್ರತಿದಿನಕ್ಕೆ ಕಾರ್ಯಾಗಾರದ ನೋಂದಣಿ ಶುಲ್ಕ ರೂ.600/- ಹಾಗೂ ನಾಲ್ಕು ದಿನಗಳಿಗೆ ರೂ.2000/- ಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ. ಜನಾರ್ದನ ಹಾವಂಜೆ -9845650544
ಮಧುಬನಿ: 27ನೇ ಏಪ್ರಿಲ್, ಗುರುವಾರ ಮತ್ತು 30ನೇ ಏಪ್ರಿಲ್, ಆದಿತ್ಯವಾರ
ಮಧುಬನಿ ಕಲೆಯು ಬಿಹಾರದ ಮಿಥಿಲಾ ನಗರದ ಜನಪದ ಕಲೆಯಾಗಿದ್ದು, ರಾಮಾಯಣ ಪೌರಾಣಿಕ ಪ್ರಸಂಗದ ಜತೆಗೂ ತಳಕು ಹಾಕಿಕೊಂಡಿದೆ. ಮನೆಯ ಗೋಡೆಯ ಮೇಲೆ ನೈಸರ್ಗಿಕ ವರ್ಣಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮಧುಬನಿ ಕಲೆಯು ಇಂದಿಗೆ ಹತ್ತಾರು ಮಾಧ್ಯಮಗಳ ಮೇಲೆ ರಚಿಸಲ್ಪಡುತ್ತಿದ್ದು ಭಾರತದ ಪ್ರಮುಖ ಜನಪದ ಕಲೆಗಳಲ್ಲೊಂದು ಎಂಬುದಾಗಿ ಪರಿಗಣಿಸಲ್ಪಟ್ಟದೆ. ಇದರಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳು, ಸಸ್ಯ ಮತ್ತು ಪ್ರಾಣಿ ಪಕ್ಷಿಗಳೇ ಮುಂತಾಗಿ ಸಂಯೋಜನೆಗಳನ್ನು ರಚಿಸಲಾಗುತ್ತದೆಯಲ್ಲದೇ “ಕೋಹ್ ಬಾರ್” ಚಿತ್ರಕಲೆ ಎನ್ನುವ ಶುಭ ಸಮಾರಂಭದಲ್ಲಿ ರಚಿಸಲ್ಪಡುವ ಚಿತಕ್ರಮವನ್ನೂ ಒಳಗೊಂಡಿದೆ.
ಪೇಪರ್ ಮೆಶ್ (ಬಿಹಾರ) 28ನೇ ಏಪ್ರಿಲ್, ಶುಕ್ರವಾರ
ವಿಶ್ವದಾದ್ಯಂತ ಹರಡಿರುವ ಜನಪದ ಕಲಾಪ್ರಕಾರಗಳಲ್ಲೊಂದಾದ ಪೇಪರ್ ಮೆಶ್ (ರೀ ಸೈಕಲ್ಡ್ ಪೇಪರ್ ಕಲೆ) ಕರಕುಶಲ ಕಲೆಯು ಉತ್ತರ ಭಾರತದಲ್ಲಿಯೂ ಪ್ರಮುಖವಾಗಿ ಪಟ್ನಾ, ಹಜಾರಿಬಾಗ್, ಮಧುಬನಿ ಪ್ರದೇಶಗಳಲ್ಲಿ ರಚಿಸಲ್ಪಡುತ್ತದೆ, ಕಸದಿಂದ ರಸವಾಗಿಸುವ ಬಳಸಿದ ಪೇಪರ್ ಮತ್ತು ಮುಲಾನೀ ಮಣ್ಣಿನ ಬೆರೆಸುವಿಕೆಯಿಂದ ರಚಿಸಲಾಗುವ ಮುಖವಾಡಗಳು, ಅಲಂಕಾರಿಕ ವಸ್ತುಗಳ ಈ ಶಿಲ್ಪ ಕಲಾಕೃತಿಗಳು ಮಾರುಕಟ್ಟೆಯಲ್ಲಿ ಬಹು ಬೇಡಿಕೆಯನ್ನು ಪಡೆದಿವೆ.
ಗೋಧ್ ನಾ 29ನೇ ಏಪ್ರಿಲ್, ಶನಿವಾರ
ಗೋಧ್ ನಾ ಕಲೆಯು ಬಿಹಾರದ ಮಧುಬನಿ ಪ್ರಾಂತ್ಯದ ಕಲೆಯಾಗಿದ್ದು, ದೇಶದ ಮೇಲೆ ರಚಿಸಲ್ಪಡುವ ಹಚ್ಚೆ ಕಲೆಯ ಮುಂದುವರಿದ ಭಾಗವಾಗಿದೆ ಗೋಡೆಗಳ ಮೇಲೆ ಹಾಗೂ ಕಾಗದ ಮತ್ತು ಕ್ಯಾನ್ವಾಸ್ಗಳ ಮೇಲೆ ಇಂದು ರಚಿಸಲ್ಪಡುವ ಈ ಕಲೆಯಲ್ಲಿ ಜ್ಯಾಮಿತೀಯ ಸಂಯೋಜನೆಗಳ ಜೊತೆಗೇ ನೈಸರ್ಗಿಕ ಮತ್ತು ಅಮೂರ್ತ ಕಲ್ಪನೆಗಳ ರೇಖಾ ಪ್ರಧಾನ್ಯತೆಯನ್ನು ಇದು ಒಳಗೊಳ್ಳುತ್ತದೆ.
ರಾಷ್ಟ್ರೀಯ ಪುರಸ್ಕೃತ ಕಲಾವಿದರ ಕುಟುಂಬದವರಾದ ಶ್ರವಣ್ ಕುಮಾರ್ ಪಾಸ್ವಾನರು ಭಾರದಾದ್ಯಂತ ಐನೂರಕ್ಕೂ ಮಿಕ್ಕಿ ಕಲಾ ಪ್ರದರ್ಶನಗಳು, ಕಾರ್ಯಾಗಾರಗಳನ್ನೆಲ್ಲ ನಡೆಸಿರುವರು. ರಾಜ್ಯ ಪುರಸ್ಕೃತರಾಗಿರುವ ಇವರು ಮಧುಬನಿ, ಕೋಹ್ ಬಾರ್ ಚಿತ್ರಕಲೆ, ಗೋಧ್ ನಾ, ಪೇಪರ್ ಮೆಶ್ ಮುಂತಾದ ಹಲವಾರು ಕಲೆಗಳಲ್ಲಿ ನಿಷ್ಣಾತರಾಗಿರುವರಲ್ಲದೇ ಮುಂದಿನ ಪೀಳಿಗೆಗೂ ಉಳಿಯುವಂತೆ ಪಾರಂಪರಿಕ ರಚನಾಕ್ರಮ ಮತ್ತು ಸಾಧ್ಯಾಸಾಧ್ಯತೆಗಳ ಬಗೆಗೆ ಒಲವಿದ್ದು ಕಲಿಸಿಕೊಡುತ್ತಿರುವರು. ಇವರ ಕುಟುಂಬ ಸದಸ್ಯರಾದ ಉಜಾಲಾ ಕುಮಾರಿ, ಸಂತೋಷ್ ಪಾಸ್ವಾನ್ ರವರುಗಳು ಪ್ರಸ್ತುತ ಉಡುಪಿಯಲ್ಲಿ ಈ ಕಾರ್ಯಾಗಾರಗಳನ್ನು ನಡೆಸಿಕೊಡುತ್ತಾರೆ.
ಹಾವಂಜೆಯ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಈ ಸುಸಂದರ್ಭದಲ್ಲಿ ದೇಶೀಯ ಜನಪದ ಮತ್ತು ಬುಡಕಟ್ಟು ಕಲೆಯ ಪ್ರಚಾರ ಮತ್ತು ಪ್ರೋತ್ಸಾಹಕ್ಕಾಗಿ ಈ ಕಲಿಕಾ ಕಾರ್ಯಾಗಾರಗಳನ್ನು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ. ಭಾರತದಾದ್ಯಂತ ಹರಡಿಕೊಂಡಿರುವ ನಾನಾ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ಪುಟ್ಟ ಪ್ರಯತ್ನ ನಮ್ಮದು.
ಬನ್ನಿ.. ದೇಶೀಯ ಕಲಾಪ್ರಕಾರಗಳನ್ನು ಕಲಿಯೋಣ, ಆಸ್ವಾದಿಸೋಣ ಹಾಗೂ ಪೋಷಿಸೋಣ.