ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಆಯೋಜಿಸಿದ್ದ ಚೆರಿಯಮನೆ ದಿವಂಗತ ಕೃಷ್ಣಪ್ಪ ಮರಗೋಡು ದತ್ತಿ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2025ರಂದು ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಂಗವಾಗಿ ‘ಜಾನಪದ’ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಂಡ್ರಂಗಿ ನಾಗರಾಜ್ “ಜಾನಪದ ಗೀತೆಗಳನ್ನು ರಚಿಸಿದವರು ಯಾರೆಂದು ಎಲ್ಲೂ ಉಲ್ಲೇಖವಾಗಿರುವುದಿಲ್ಲ. ವಿಶ್ವದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಜಾನಪದವನ್ನು ಈಗಲೂ ಗ್ರಾಮೀಣ ಭಾಗಗಳಲ್ಲಿ ಕೇಳಬಹುದು. ಇದನ್ನು ಮನುಷ್ಯ ಜೀವನದ ಎಲ್ಲಾ ಘಟ್ಟಗಳಲ್ಲೂ ಬಳಸುತ್ತಾರೆ. ಸುಖ, ದುಃಖಗಳ ಸಂದರ್ಭಗಳ ಅನುಸಾರ ಸ್ಥಳದಲ್ಲೇ ಗೀತೆಗಳನ್ನು ರಚಿಸಿ ಹಾಡುವ ಅದ್ಬುತ ಜ್ಞಾನ ಹೊಂದಿರುವ ಜನರನ್ನು ಕಾಣಬಹುದು. ಜಾನಪದ ಗೀತೆಗಳನ್ನು ಹೆಚ್ಚಾಗಿ ಗ್ರಾಮೀಣ ಜನರು ಬಳಸಿ, ತಾನು ಮಾಡುವ ಕೆಲಸಗಳಲ್ಲಿ ತನ್ಮಯತೆ ಮತ್ತು ಶಕ್ತಿ ಪಡೆಯುತ್ತಾರೆ ಅಂತಹ ಶ್ರೇಷ್ಠ ಶಕ್ತಿಯಿದೆ. ಜನಪದ ಮತ್ತು ಜಾನಪದ ಎನ್ನುವ ಎರಡು ವಿಧವನ್ನು ವಿವರಿಸಿದರು. ಇದು ಸಂಪ್ರದಾಯದ ಘೋಷಣೆಯಿಲ್ಲದೆ ತನ್ನಿಂದ ತಾನೆ ಹರಿದು ಬಂದು, ಮಣ್ಣಿನ ಸಂಸ್ಕೃತಿಯ ಸಾರವನ್ನು ಜಾನಪದ ಶೈಲಿಯಲ್ಲಿ ವಿವರಿಸುತ್ತಾರೆ” ಎಂದು ವಿವರಿಸಿದರು.
ನಿವೃತ್ತ ಶಿಕ್ಷಕಿ ಉಮಾದೇವಿ ಸೋಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಕರ್ನಾಟಕದಲ್ಲಿ ಜನಸಿದ ಜಾನಪದ ಸಂಸ್ಕೃತಿ ವಿಶ್ವದ ಅನೇಕ ಭಾಷೆಗಳಿಗೆ ಭಾಷಾಂತರವಾಗಿ ಎಲ್ಲರ ಗಮನ ಸೆಳೆಯುವ ಅಗಾಧ ಶಕ್ತಿಯಿದೆ. ಅನಕ್ಷಸ್ಥರೆ ರಚಿಸಿ, ಹಾಡುವ ಗೀತೆಗಳಲ್ಲಿ ಅನೇಕ ಅರ್ಥಗಳು ಇರುತ್ತವೆ. ಹುಟ್ಟಿನಿಂದ ಸಾವಿನ ತನಕ ಮನುಷ್ಯ ಜೀವನವನ್ನು ಕೇವಲ 2ರಿಂದ 3 ಪದ್ಯಗಳಲ್ಲಿ ವಿವರಿಸುವ ತಾಕತ್ತು ಇರುತ್ತದೆ” ಎಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್ ವಹಿಸಿ ಮಾತನಾಡಿ, “ಕನ್ನಡ ಸಾರಸತ್ವ ಲೋಕದಲ್ಲಿ ಜಾನಪದಕ್ಕೆ ವಿಶೇಷ ಸ್ಥಾನಮಾನವಿದೆ. ಇಲ್ಲಿಯ ಆಚಾರ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಕೆಯಿದೆ. ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಗಮನಿಸಿದ ಹಲವು ವಿದೇಶಿಯರು ಅಧ್ಯಯನ ಮಾಡಿರುವ ಹಲವು ಉದಾಹರಣೆಗಳು ಇವೆ. ಇಲ್ಲಿಯ ಶ್ರೇಷ್ಠತೆಗಾಗಿ ಸಾಹಿತ್ಯ ಲೋಕದ ಅತ್ಯುನ್ನತ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದೇ ಸಾಕ್ಷಿ” ಎಂದು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಅಂಗವಾಗಿ ಬಡಾವಣೆ ನಿವಾಸಿಗಳಾದ ಉಮಾವತಿ, ವನಿತಾ, ರಾಣಿ, ಲೀಲಾ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಯುವ ಪೀಳಿಗೆಯ ಕೆಲವರು ಜಾನಪದ ನೃತ್ಯಗಳನ್ನು ಪ್ರದರ್ಶನ ನೀಡಿದರು. ಅನುಸೂಯ ಶಿವಣ್ಣ, ಮೀನಾಕ್ಷಿ, ಪೂವಯ್ಯ ಮತ್ತು ಕಲ್ಲೂರು ನಾಣಯ್ಯ ಇವರುಗಳು ತಮ್ಮ ಮನೆಯಲ್ಲಿ ಇದ್ದ ಪುರಾತನ ಕಾಲದ ಪರಿಕರಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಭತ್ತ, ರಾಗಿ, ಸಗಣಿಯ ರಾಶಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತ್ತು. ಎಂ.ಎನ್. ಕಾಳಪ್ಪ, ಜಗನ್ನಾಥ್, ಮಹೇಂದ್ರ, ಆಕಾಶ್, ಕ.ಸಾ.ಪ. ಪ್ರದಾನ ಕಾರ್ಯದರ್ಶಿ ಶೈಲಾ, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕಿ ಬಿ.ಬಿ. ಹೇಮಲತಾ, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಸುಬ್ರಮಣಿ ಇತರರು ಉಪಸ್ಥಿತರಿದ್ದರು.