ಮಂಗಳೂರು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದ.ಕ. ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ಸಾರಥ್ಯದಲ್ಲಿ ರೋಹನ್ಸ್ ಕಾರ್ಪೋರೇಶನ್ ಸಹಯೋಗದಲ್ಲಿ ದಿನಾಂಕ 01-03-2024ರಿಂದ 03-03-2024ರವೆರೆಗೆ ಪಣಂಬೂರು ಬೀಚ್ ನಲ್ಲಿ ‘ಜಾನಪದ ಕಡಲೋತ್ಸವ’ವನ್ನು ಆಯೋಜಿಸಲಾಗಿದೆ.
ದಿನಾಂಕ 01-03-2024ರಂದು ಸಂಜೆ 6.30ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಾನಪದ ಕಡಲೋತ್ಸವ ಉದ್ಘಾಟಿಸಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ವಿವಿಧ ಪ್ರದರ್ಶನ ಉದ್ಘಾಟಿಸುವರು. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ‘ಜಾನಪದ ಕಡಲೋತ್ಸವ ಪ್ರಶಸ್ತಿ’ ಪ್ರದಾನ ಮತ್ತು ಹದಿಮೂರು ಮಂದಿ ಜಾನಪದ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 7.30ರಿಂದ ಡಾ. ರಮೇಶ್ಚಂದ್ರ ಹಾಗೂ ಕಲಾವತಿ ದಯಾನಂದ ಬಳಗದಿಂದ ‘ಜಾನಪದ ರಸ ಸಂಜೆ’ ಕಾರ್ಯಕ್ರಮ ಜರಗಲಿದೆ.
ದಿನಾಂಕ 02-03-2024ರಂದು ಸಂಜೆ 5.30ರಿಂದ ವಿಚಾರ ಸಂಕಿರಣ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದೆ. ಶಾಸಕ ಅಶೋಕ್ ಕುಮಾರ್ ರೈ ಮತ್ತು ಕ.ಜಾ.ಪ. ಬೆಂಗಳೂರು ಆಡಳಿತಾಧಿಕಾರಿ ನಂದಕುಮಾರ್ ಹೆಗ್ಡೆ ಭಾಗವಹಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿಗೀತಾ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮೈಮ್ ರಾಮ್ ದಾಸ್ ವಿಷಯ ಮಂಡಿಸಲಿದ್ದಾರೆ. ಸಂಜೆ ಗಂಟೆ 7.30ಕ್ಕೆ ಅಜಯ್ ವಾರಿಯರ್ ತಂಡದಿಂದ ‘ಸಂಗೀತ ರಸ ಸಂಜೆ’ ನಡೆಯಲಿದೆ.
ದಿನಾಂಕ 03-03-2024ರಂದು ಸಂಜೆ 3ಕ್ಕೆ ಶಾಸಕ ಡಿ. ವೇದವ್ಯಾಸ್ ಕಾಮತ್ ಗಾಳಿಪಟ ಉತ್ಸವ ಉದ್ಘಾಟಿಸುವರು. 5.30ಕ್ಕೆ ಸಮಾರೋಪ ಸಮಾರಂಭ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಮಾರಂಭ ಆತ್ಮಶಕ್ತಿ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಉದ್ಘಾಟಿಸಲಿದ್ದು, ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಯೋಧ್ಯೆಯ ಬಾಲ ರಾಮನ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ‘ಅಮರ ಶಿಲ್ಪಿ’ ಬಿರುದು ಪ್ರದಾನ ಮಾಡಲಾಗುತ್ತದೆ. ಬಳಿಕ ಮಣಿಕಾಂತ್ ಕದ್ರಿ ಬಳಗದವರಿಂದ ‘ಕಡಲಗೀತೆ’ ಮ್ಯೂಸಿಕಲ್ ನೈಟ್ ನಡೆಯಲಿದೆ. ಪ್ರತೀ ದಿನ ಸಂಜೆ 4 ಗಂಟೆಯಿಂದ ‘ಜಾನಪದ ಮತ್ತು ಸಾಂಸ್ಕೃತಿಕ’ ಪ್ರದರ್ಶನಗಳು ನಡೆಯಲಿದೆ.