ಕೋಟ: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ 2020-21ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಜಾನಪದ ರಂಗಭೂಮಿ (ಯಕ್ಷಗಾನ) ಯುವ ಪ್ರತಿಭೆ, ವಿಧ್ಯಾರ್ಥಿ ವೇತನ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಸುದೀಪ್ ಉರಾಳರು ಆಯ್ಕೆಯಾಗಿದ್ದಾರೆ.
ಯಕ್ಷದೇಗುಲದ ಹಂದಟ್ಟು ಶ್ರೀ ಸುದರ್ಶನ ಉರಾಳ ಹಾಗೂ ಶ್ರೀಮತಿ ರಾಧಿಕಾ ದಂಪತಿಗಳ ಸುಪುತ್ರರಾದ ಇವರು ಯಕ್ಷಗಾನ ಚಂಡೆವಾದನದಲ್ಲಿ ಕರಾವಳಿ ಭಾಗದಲ್ಲಿ ಗುರುತಿಸಿಕೊಂಡಿದ್ದು, ಹಿಂದೆ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದನಾಗಿ ಹಲವಾರು ಪ್ರದರ್ಶನಗಳಲ್ಲಿ ವೇಷ ಧರಿಸಿದ್ದರು.
ಸುದರ್ಶನ ಉರಾಳರು ಯಕ್ಷಗಾನದ ಚಂಡೆ ವಾದನದ ವಿಭಾಗದಲ್ಲಿ ಆಸಕ್ತಿ ತಳೆದು ಏಕಲವ್ಯನಂತೆ ಮನೆಯಲ್ಲಿಯೇ ಅಭ್ಯಾಸ ಪ್ರಾರಂಭಿಸಿದವರು. ಮಾಧವ ಮಣೂರು, ಕೋಟ ಶಿವಾನಂದರವರಿAದ ಕೆಲವು ಪೆಟ್ಟು, ಉರುಳಿಕೆಗಳನ್ನು ತನ್ನದಾಗಿಸಿಕೊಂಡ ಸುದೀಪ್ ಹವ್ಯಾಸಿ ಕಲಾವಿದನಾಗಿ ಗುರುತಿಸಿಕೊಳ್ಳುತ್ತಾ ಇತ್ತೀಚೆಗೆ ಯಶಸ್ವೀ ಕಲಾವೃಂದದ ಹಲವು ವೇದಿಕೆಯಲ್ಲಿ ಚಂಡೆ ನುಡಿಸುತ್ತಾ ಜನಪ್ರಿಯರಾದರು. ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿಯೂ ಅತಿಥಿಯಾಗಿ ಚಂಡೆವಾದಕರಾಗಿ ಕಾಣಿಸಿಕೊಂಡದ್ದಲ್ಲದೇ ಅಮೃತೇಶ್ವರಿ ಮೇಳದ ಸ್ಥಳೀಯ ಪ್ರದರ್ಶನಗಳಲ್ಲಿ ಖಾಯಂ ಸದಸ್ಯ. ವೃತ್ತಿ ಕಲಾವಿದರ ಅನುಪಸ್ಥಿತಿಯಲ್ಲಿ ಎಷ್ಟೋ ಮೇಳಗಳಲ್ಲಿ ಪ್ರಧಾನ ಚಂಡೆ ವಾದಕರಾಗಿ ಗುರುತಿಸಿಕೊಂಡಿದ್ದಲ್ಲದೇ ಹೆಜ್ಜೆ ಕಲಿತ ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಇತ್ತೀಚಿನ ಖಾಯಂ ಚಂಡೆ ವಾದಕರು. ಎಂ.ಬಿ.ಎ. ಮಾಡುತ್ತಿರುವ ಸುದೀಪ್ ಹವ್ಯಾಸದೊಂದಿಗೆ ಓದಿನ ಕಡೆಗೂ ಲಕ್ಷ್ಯ ಕೊಟ್ಟು ಅನೇಕ ಕಲಾಕುಂಟುಬಗಳ ಚಿತ್ತ ಸೆಳೆದಿದ್ದಾರೆ. ಯಕ್ಷಗಾನದ ಹವ್ಯಾಸದೊಂದಿಗೆ ಹವ್ಯಾಸೀ ಛಾಯಾಚಿತ್ರಗಾರನಾಗಿಯೂ ಗುರುತಿಸಿಕೊಂಡು ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಳ ಸಜ್ಜನ ವಿನಯ ಸಂಪನ್ನ ಈತ ಯಾವ ತಂಟೆ ತಕರಾರಿಲ್ಲದೇ ತಾನಾಯ್ತು, ತನ್ನ ಹವ್ಯಾಸ ಹಾಗೂ ಓದಾಯ್ತು ಎಂಬ ಸಾತ್ವಿಕ ವ್ಯಕ್ತಿತ್ವ ಸುದೀಪ್ ರದ್ದು.