ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಮಾಹೆಯ ಸಹಯೋಗದಲ್ಲಿ ಆಯೋಜಿಸುತ್ತಿರುವ ಜನಪದ ಸರಣಿ ಕಲಾ ಕಾರ್ಯಾಗಾರಗಳ ಉದ್ಘಾಟನೆ ದಿನಾಂಕ 18-04-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿರಾವ್ ಕಿದಿಯೂರು ಇವರು ಉದ್ಘಾಟಿಸಿ ಮಾತನಾಡಿ “ಭಾರತದ ದೇಸೀಯ ಕಲೆಗಳೆಲ್ಲ ಒಂದು ಮನೆಯ ಹಲವಾರು ಕೋಣೆಗಳಿದ್ದಂತೆ, ಈ ಕೋಣೆಗಳನ್ನು ಉಡುಪಿಯ ಕಲಾಸಕ್ತರಿಗೆ ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸುತ್ತ, ಈ ತೆರನಾದ ಭಾರತದ ಮೂಲೆಮೂಲೆಯಲ್ಲಿನ ಕಲಾಪ್ರಕಾರಗಳನ್ನು ಇನ್ನಷ್ಟು ಯುವ ಪೀಳಿಗೆ ಕಲಿತು ಆಸ್ವಾದಿಸಬೇಕು” ಎಂಬುದಾಗಿ ಅಭಿಪ್ರಾಯವಿತ್ತರು.
ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮದುವೆಯ ಸಂದರ್ಭಗಳಲ್ಲಿ ಮಾಡಲಾಗುವ ಕೋಹ್ಬಾರ್ ಚಿತ್ರಕಲೆ, ಟಿಕುಲಿ ಹಾಗೂ ಮಂಜೂಷಾ ಚಿತ್ರಕಲೆ ಮತ್ತು ಜಾಲಿ ಫ್ರೇಂ ವಿನ್ಯಾಸಗಳ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಬಿಹಾರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರವಣ್ಕುಮಾರ್ ಪಾಸ್ವಾನ್ ಹಾಗೂ ಪವನ್ ಕುಮಾರ್ರವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ದಿನಾಂಕ 18-04-2024ರಿಂದ 21-04-2024ರ ತನಕ ಪ್ರತಿದಿನ ಪೂರ್ವಾಹ್ನ 9-30ರಿಂದ ಸಂಜೆ 5ರ ತನಕ ಉಡುಪಿಯ ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು’ ಗ್ಯಾಲರಿಯಲ್ಲಿ ಈ ನಾಲ್ಕೂ ಕಾರ್ಯಾಗಾರಗಳು ನಡೆಯಲಿವೆ ಹಾಗೂ ಇದೇ ಸಂದರ್ಭದಲ್ಲಿ ಪ್ರತಿದಿನ ಸಂಜೆ ನಾಲ್ಕರಿಂದ ಆರರ ತನಕ ಕಲಾವಿದರ ಕಲಾ ಪ್ರದರ್ಶನ ಮತ್ತು ಮಾರಾಟವೂ ಬಡಗುಪೇಟೆಯಲ್ಲಿ ನಡೆಯಲಿಕ್ಕಿದೆ ಎಂಬುದಾಗಿ ಕಾರ್ಯಕ್ರಮದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಮಾಹಿತಿಯಿತ್ತರು. ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥರಾವ್ರವರು ಉಪಸ್ಥಿತರಿದ್ದರು.