ಬೆಂಗಳೂರು : ಕರ್ನಾಟಕದ ಕ್ರಿಯಾಶೀಲ ರಂಗ ತಂಡಗಳಲ್ಲಿ ಜನಪದರು ಈಗ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಪ್ರದರ್ಶನ ಸರಣಿ “ರಂಗ ಮಾಲೆ -75” ಅಮೃತ ಮಹೋತ್ಸವ ತಿಂಗಳು. ಈ ಕಾರಣಕ್ಕೆ ದಿನಾಂಕ 14-10-2023ರಿಂದ ಮೂರು ದಿನಗಳ ರಂಗ ಸಂಭ್ರಮ ಆಯೋಜನೆ ಮಾಡಿದ್ದು, ಉದ್ಘಾಟನೆ ಮಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಸಾಣಿ ಹಳ್ಳಿಯ ಶ್ರೀ ಮಠದ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ಜನಪದರು ರಂಗ ಮಂದಿರ ನೋಡಿ ಮಹಾಸಂತಸವಾಗಿದೆ. ನಾನು ರಾಷ್ಟ್ರದ ಹಲವಾರು ರಂಗ ಮಂದಿರ ನೋಡಿದ್ದು, ಆಧುನಿಕ ರಿವಾ ಲಿಂಗ್ ಹೈಡ್ರಾಲಿಕ್ ಅಲ್ಲದೆ ಸುಸಜ್ಜಿತ ಧ್ವನಿ ಬೆಳಕುಗಳು ಹೊಂದಿದೆ. ಶ್ರೇಷ್ಠ ಆಸನ ಹಾಗೂ ಹವಾ ನಿಯಂತ್ರಿತ ಸೌಲಭ್ಯ ಕೇವಲ ಜನರ ಸಹಕಾರದಿಂದ ಮಾಡಿದ ಈ ಘನ ಕಾರ್ಯ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ಮತ್ತು ತಂಡ ಅಭಿನಂದನಾರ್ಹರು. ಇದರೊಂದಿಗೆ ನಮ್ಮ ಶಿವಸಂಚಾರ ಹಾಗೂ ಇತರೇ ರಂಗ ತಂಡಗಳ ನಾಟಕ ನಿಮಗೆ ತಲುಪಿಸಲು ಹಾಗೆ, ದಾಸೋಹದ ಅರಿವು ಮಾಡಿಸಿದ್ದಾರೆ. ಅವರ ತಂಡ ಸಹ ಉತ್ತಮವಾಗಿದೆ ಇದಕ್ಕೆ ಸ್ಥಳೀಯ ನಾಗರೀಕರು ತಮ್ಮ ಸಂಪಾದನೆಯ ಸ್ವಲ್ಪ ದಾನ ನೀಡಿ ಸಾಂಸ್ಕೃತಿಕ-ಸಾಹಿತ್ಯ ಸೇವೆ ಸಲ್ಲಿಸಿ” ಎ೦ದು ಕರೆ ನೀಡಿದರು.
ಇದೇ ವೇಳೆ ಸಿದ್ದೇಶ್ವರ ನನಸುಮನೆಯವರ ರಂಗಕೃತಿ ‘ಮಾತೆ ಮಹತ್ವ’ ಬಿಡುಗಡೆ ಮಾಡಿ, ಇಂದಿನ ಪೀಳೆಗೆ ಯುವಜನರು ಸಹ ನೋಡಲೇಬೇಕಾದ ನಾಟಕ ಎಂದರು. ಇದೇ ಸಂದರ್ಭದಲ್ಲಿ ನಾಟಕಕಾರ ಸಿದ್ದೇಶ್ವರ, ನಿವೃತ್ತ ಅಭಿಯಂತರು ಶ್ರೀ ರಾಜಶೇಖರ್ ಹಾಗೂ ತಾ.ಪಂ. ಇ.ಓ. ಶ್ರೀ ಮಂಜುನಾಥ್ ಇವರನ್ನು ಸನ್ಮಾನಿಸಿ ಗೌರವಿಸಿದರು. ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು ರಂಗ ಕಾರ್ಯಕ್ಕೆ ಸಹಕರಿಸಿದ ವೇಣು ಜ್ಯೋತಿಪುರ, ಬಿ.ಜಿ. ರಾಜೇಶ್, ಗ್ರಾ.ಪಂ. ಅಧ್ಯಕ್ಷ ಗುರುರಾಜ, ಅಮರಾವತಿ, ಬೊಮ್ಮೇನಹಳ್ಳಿ ಮನಿರಾಜ್ ಗೌಡ, ಲಿ೦ಗರಾಜ ಅರಸ, ರವಿ ಕನ್ನಮಂಗಲ, ಬಿ.ಚನ್ನಪ್ಪ ಇತರರನ್ನು ಹಾಗೂ ನಾಟಕ ಪ್ರದರ್ಶನ ತಂಡವನ್ನು ಗೌರವಿಸಿದರು. ‘ಮಾತೆ ಮಹತ್ವ’ ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ತಮ್ಮ ರಂಗ ಕೈಂಕರ್ಯಕ್ಕೆ ಸಹಕರಿಸಿದ ಮಹನೀಯರ, ಸಂಘ ಸಂಸ್ಥೆಗಳ ಮತ್ತು ಪತ್ರಕರ್ತರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ರಾಮಕೃಷ್ಣ ಬೆಳತ್ತೂರು, ಎಂ. ಸುರೇಶ್, ಚಲಪತಿ ಶಿವಕುಮಾರ, ಮಮತ, ಮಹೇಶ ಇವರು ಉಪಸ್ಥಿತರಿದ್ದರು.