ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ತುಳು ಮತ್ತು ಕನ್ನಡ ಯಕ್ಷಗಾನ ಪ್ರಸಂಗಗಳ ವಿಭಿನ್ನ ಗತಿಯ ವೇಷಧಾರಿ ಜಪ್ಪು ದಯಾನಂದ ಶೆಟ್ಟಿ ಆಯ್ಕೆ ಆಗಿದ್ದಾರೆ. ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆಯವರನ್ನೊಳಗೊಂಡ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ದಯಾನಂದ ಶೆಟ್ಟಿ ಜಪ್ಪು:
ಕರ್ನಾಟಕ, ಕುಂಡಾವು, ದೇಲಂತಪುರಿ ಮತ್ತು ಸಸಿಹಿತ್ಲು ಮೇಳಗಳಲ್ಲಿ ಒಟ್ಟು 52 ವರ್ಷ ತಿರುಗಾಟ ಮಾಡಿರುವ ದಯಾನಂದ ಶೆಟ್ಟರು ಬೆಳ್ತಂಗಡಿ ಸವಣಾಲಿನ ದಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ದಂಪತಿಯ ಮಗನಾಗಿ 1948ರಲ್ಲಿ ಜನಿಸಿದರು. ಕೇವಲ ಎರಡನೆಯ ತರಗತಿ ಕಲಿತ ಇವರು ತನ್ನ 12ನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿಗಿಳಿದು ಹಲವು ಹಿರಿಯ ಕಲಾವಿದರ ಒಡನಾಟದಲ್ಲಿ ಖ್ಯಾತರಾದರು. ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ಪೂರೈಸಿದ ಅವರು ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ರಾ.ಸಾಮಗ, ಮಿಜಾರು, ಅರುವ, ಕೋಳ್ಯೂರು ಮೊದಲಾದ ದಿಗ್ಗಜರೊಂದಿಗೆ ಸ್ತ್ರೀವೇಷ, ಪುಂಡು ವೇಷ, ಇದಿರು ವೇಷ, ಹಾಸ್ಯ, ಬಣ್ಣ ಹೀಗೆ ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಅಭಿಮನ್ಯು, ಬಬ್ರುವಾಹನ, ಇಂದ್ರಜಿತು, ಋತುಪರ್ಣ, ನಕ್ಷತ್ರಿಕ, ದಾರಿಗಾಸುರ ಮುಂತಾದ ಪೌರಾಣಿಕ ಪಾತ್ರಗಳಲ್ಲದೆ ತುಳು ಪ್ರಸಂಗಗಳ ದೇವಪೂಂಜ, ಬಬ್ಬು, ದೇಯಿ, ಕಿನ್ನಿದಾರು, ಚೆನ್ನಯ, ಕಾಂತನ ಅತಿಕಾರಿ, ಭಾಗೀರಥಿ, ನೀಲು ಪಾತ್ರಗಳಲ್ಲಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ.
ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ, ಅಳಿಕೆ, ಬೋಳಾರ, ಪುಳಿಂಚ ಮತ್ತು ಅರುವ ಪ್ರತಿಷ್ಠಾನಗಳ ಪ್ರಶಸ್ತಿ. ಯಕ್ಷಗಾನ ಕಲಾರಂಗ, ಶ್ರೀಕೃಷ್ಣ ಯಕ್ಷ ಸಭಾ, ಜಿಲ್ಲಾ ಸಾಹಿತ್ಯ ಪರಿಷತ್, ಮುಂಬೈ ತೀಯಾ ಉತ್ಸವ ಇತ್ಯಾದಿಗಳಿಂದ ಗೌರವ ಸಮ್ಮಾನಗಳನ್ನು ಪಡೆದಿದ್ದಾರೆ.
ಪ್ರಸ್ತುತ 75ರ ಹೊಸ್ತಿಲಲ್ಲಿರುವ ಜಪ್ಪು ದಯಾನಂದ ಶೆಟ್ಟರಿಗೆ ದಿನಾಂಕ 16-09-2023ರಂದು ಮಂಗಳೂರಿನಲ್ಲಿ ಜರಗುವ ವಾರ್ಷಿಕ ಸಮಾರಂಭದಲ್ಲಿ 2023ನೇ ಸಾಲಿನ ‘ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಮಾಡಲಾಗುವುದೆಂದು ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ನಗದು, ಶಾಲು, ಫಲಕ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ.