ಕಾರ್ಕಳ : ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ದಿನಾಂಕ : 18-06-2023ರಂದು ನಡೆದ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಶ್ರೀ ಜಯಕೀರ್ತಿ ಹೆಚ್. ಇವರು ರಚಿಸಿರುವ ‘ಮುಕ್ತ ಜಿನದತ್ತ’ ಕಾದಂಬರಿಯನ್ನು ಬಿಡುಗಡೆಗೊಳಿಸಲಾಯಿತು. ‘ಮುಕ್ತ ಜಿನದತ್ತ’ ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿಯಾಗಿದ್ದು, ಇದನ್ನು ಹೊಂಬುಜ ಕ್ಷೇತ್ರದ ಮಠಾದೀಶರಾದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮೊದಲೇ ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದು, ಜೈನ್ ಮಿಲನ್ ಮಾಸಿಕ ಸಭೆಯ ಕಾರ್ಯಕ್ರಮದಲ್ಲಿ ಮಾನ್ಯ ಜೈನ ವಿದ್ವಾಂಸರೂ, ಕವಿ ರತ್ನಾಕರ ವರ್ಣಿ ಪ್ರಶಸ್ತಿ ವಿಜೇತರೂ ಆದ ನಿವೃತ್ತ ಮುಖ್ಯ ಶಿಕ್ಷಕ ಶ್ರೀಯುತ ಮುನಿರಾಜ ರೆಂಜಾಳ ಇವರಿಂದ ಲೋಕಾರ್ಪಣೆಗೊಂಡಿತು.
ಶ್ರೀಯುತ ರೆಂಜಾಳರು ಮಾತನಾಡುತ್ತಾ “ಮುಕ್ತ ಜಿನದತ್ತ ಕಾದಂಬರಿಯು ಇಂದಿನ ದಿನಗಳಲ್ಲಿ ಹೊಂಬುಜ ಕ್ಷೇತ್ರದ ಬಗೆಗಿನ ಪೂರ್ಣ ಇತಿಹಾಸವನ್ನು ಜನರಿಗೆ ತಲುಪಿಸಲು ಬಹಳ ಅನುಕೂಲವಾಗಲಿದೆ. ಹಿಂದೆ ಪದ್ಮನಾಭ ಕವಿ ವಿರಚಿತ ಜಿನದತ್ತರಾಯ ಚರಿತ್ರೆಯು ಕಾವ್ಯ ರೂಪದಲ್ಲಿದ್ದು ಓದುಗರಿಗೆ ಕಷ್ಟವಾಗಿತ್ತು. ಆದರೆ ಈ ‘ಮುಕ್ತ ಜಿನದತ್ತ’ ಕಾದಂಬರಿಯು ಇಂದಿನ ಜನಾಂಗಕ್ಕೆ ಸುಲಲಿತವಾಗಿ ಓದಿಸಿಕೊಂಡು ಹೋಗಬಲ್ಲುದು. ಅಂತೆಯೇ ಜನರಿಗೆ ಹೊಂಬುಜದ ಇತಿಹಾಸ ತಿಳಿಯಲು ಒಂದು ಒಳ್ಳೆಯ ಪುಸ್ತಕವಾಗಿದೆಯಲ್ಲದೆ ಸರಳವಾಗಿದ್ದು ಎಲ್ಲರೂ ಓದಿ ಆನಂದಿಸಬಹುದು” ಎಂದು ಶುಭ ಹಾರೈಸಿದರು.
ಲೇಖಕರಾದ ಶ್ರೀ ಜಯಕೀರ್ತಿ ಹೆಚ್. ಇವರು ಮಾತನಾಡುತ್ತಾ, ತಾನು ಕಾದಂಬರಿ ಬರೆಯಲು ಪ್ರೇರೇಪಿಸಿದ ಮತ್ತು ಚಿಕ್ಕಂದಿನಲ್ಲೇ ಕಥೆ ಹೇಳಿದ ತನ್ನ ಮಾತೃಶ್ರೀಯವರನ್ನು ನೆನಪಿಸಿಕೊಂಡರು. ಇದೇ ಸಂದರ್ಭ ಧಾರ್ಮಿಕ ಚಿಂತಕ ಶ್ರೀಧರ ಭಂಡಾರಿ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಹರ್ಷಿಣಿ ವಿಜಯರಾಜ್ ಅವರನ್ನು ಅಭಿನಂದಿಸಲಾಯಿತು. ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೈನ್ ಮಿಲನ್ ನಿರ್ದೇಶಕ ಯುವರಾಜ್ ಬಲಿಪ ಸಾಣೂರು, ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ, ರವಿವರ್ಮ ಜೈನ್, ಆದಿರಾಜ ಜೈನ್, ದೇವರಾಜ ಅಧಿಕಾರಿ, ಜಯಕೀರ್ತಿ ಎಚ್., ಅರವಿಂದ ಕುಮಾರ್, ಸುಭಾಶ್ಚಂದ್ರ ಹೆಗ್ಡೆ, ಪ್ರಭಾತ್ ಕುಮಾರ್, ಅಶ್ವಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೇಖಕರಾದ ಶ್ರೀ ಜಯಕೀರ್ತಿ ಎಚ್. ಇವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಸಾಹಿತ್ಯದ ಕಡೆಗಿನ ತಮ್ಮ ಒಲವನ್ನು ಹವ್ಯಾಸವನ್ನಾಗಿಸಿಕೊಂಡಿದ್ದು, ನಿವೃತ್ತಿಯ ನಂತರವೂ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ರಚನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಇಂದು ಬಿಡುಗಡೆಗೊಂಡ ಈ ಕೃತಿ ಅವರ ಸಾಧನೆಯ ಮುಕುಟಕ್ಕೆ ಸೇರಿದ ಇನ್ನೊಂದು ಗರಿ. ಈ ನಿಟ್ಟಿನಲ್ಲಿ ಅವರ ಪರಿಶ್ರಮ ಶ್ಲಾಘನೀಯ.
ಇವರ ಪ್ರಕಟಿತ ಕೃತಿಗಳು ಚೈತ್ರ ಸಂಭ್ರಮ – ಕವನ ಸಂಕಲನ, ದೇವರ ಕಳವು – ಕಾದಂಬರಿ, ಕುಲದೀಪ – ಕಥಾ ಸಂಕಲನ, ಹೊಸ ನೋಟ – ಗೀತಾಂಜಲಿಯ ಭಾವಾನುವಾದ ಮತ್ತು ಇತರ ಬರಹಗಳು, ಸಮ್ಯಕ್ ಸೌರಭ – ಧಾರ್ಮಿಕ ವಿಚಾರ ಹಾಗೂ ಪೌರಾಣಿಕ ನಾಟಕ, ತೌಳವಿಗ್ ನಾಲೆಸಲ್ – ತುಳು ನಾಟಕ ಮತ್ತು ಇತರ ಬರಹಗಳು ಹಾಗೂ ಮುಕ್ತ ಜಿನದತ್ತ – ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿ. ಮುಂದಿನ ಕವನ ಸಂಕಲನ ‘ಕಾವ್ಯ ಕಲರವ’ ಪ್ರಕಟಣೆಗೆ ಸಿದ್ಧವಾಗಿದೆ.
1 Comment
ರೂವಾರಿ .ಕಾಮ್ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ .ಅವರ ಈ ಕೆಲಸದಿಂದ ಸಾಹಿತ್ಯಕಲಾಸಕ್ತರನ್ನು ಪರಿಚಯಿಸುವಮತ್ತುಅವರನ್ನುಒಂದೆಡೆಗೆಲಕರೆತರುವಮಹತ್ವದಪರಿಚಾರಿಕೆಯನ್ನುಮಾಡುತ್ತಿರುವುದುನಿಜಕ್ಕೂಅಭಿನಂದನಾರ್ಹವಾದುದು.ಸಾಹಿತ್ಯ ಮತ್ತು ಕಲೆಗೆ ಉತ್ತಮ ಸ್ಪಂದನೆಪ್ರೇರಣೆದೊರೆತರೇನೇಅದುಇನ್ನಷ್ಟುಮುಂದುವರಿಯಲು ಪ್ರೇರೇಪಿಸ ಬಹುದು ರೂವಾರಿಯು ವಿಶ್ವಾದ್ಯಂತ. ಪಸರಿಸುವ ಈ ವಿಚಾರವೆಲ್ಲವೂ ಎಲ್ಲರ ಮೆಚ್ಚುಗೆ ಗಳಿಸಲಿ