‘ರಾತ್ರಿ ಪಾಳಿ ಮುಗಿಸಿದ ದಾದಿ
ಬಸ್ ಸ್ಟಾಪಿನಲ್ಲಿದ್ದಾಳೆ
ಆಗಷ್ಟೇ ಊದಿನಕಡ್ಡಿ ಹಚ್ಚಿಕೊಂಡ ರಿಕ್ಷಾ, ಹಾಲಿನ ವ್ಯಾನು ಹಾದಿವೆ….
ಕನಸಿನ ಸುರಂಗಗಳಲ್ಲೂ ಓಡಿ ಓಡಿ ದಣಿದವರು ರಸ್ತೆ ಬದಿಯಲ್ಲಿ ವಿಗ್ರಹಗಳಂತೆ ಏಳುತ್ತಿದ್ದಾರೆ..’
ಇವು ಜಯಂತ್ ಕಾಯ್ಕಿಣಿಯವರ ‘ಜಾಗರದ ಕೊನೆಗೆ’ ಕವನದ ಕೆಲವು ಸಾಲುಗಳು. ಬೆಳಗು ಅಂದಾಗ ನಿಸರ್ಗದ ಚೆಲುವನ್ನು ಮಾತ್ರ ಕಲ್ಪಿಸಿಕೊಳ್ಳುವ ನಮಗೆ, ಅದಕ್ಕೆ ವ್ಯತಿರಿಕ್ತವಾಗಿ ಈ ಕವನ, ‘ಬೆಳಗಿನ ಬದುಕನ್ನು’ ಅದರೆಲ್ಲಾ ಲಯದೊಂದಿಗೆ ಕಟ್ಟಿಕೊಡುತ್ತದೆ. ರಸ್ತೆ ಬದಿಯಲ್ಲೇ ಮಲಗುವ ಸೂರಿಲ್ಲದವರ ನಸುಕು, ರಾತ್ರಿ ಪಾಳಿ ಮುಗಿಸಿ ದಣಿದವರ ಮುಂಜಾವು, ಸೈಕಲ್ ನಲ್ಲಿ ಪೇಪರ್ ಹಂಚುವವರ ತರಾತುರಿ, ರೆಕ್ಕೆಗಳ ಫಡಫಡಿಸಿ ಕತ್ತಲ ಕೊಡವಿಕೊಳ್ಳುವ ಮರ, ಹೀಗೆ ಒಂದು ಬೆಳಗು ಒಬ್ಬೊಬ್ಬರಿಗೂ ಭಿನ್ನ ಭಿನ್ನ ಅನುಭವ ಕೊಡಬಲ್ಲುದು ಎಂಬ ಸರಳ ಸತ್ಯವನ್ನು ನಯವಾಗಿ ಕವಿ ಓದುಗರೆದೆಗೆ ದಾಟಿಸಿ ಬಿಡುತ್ತಾರೆ. ಹಾಗೆಯೇ ನಾವು ಗಮನಿಸದೇ ಇದ್ದ ಅಂಚಿನಲ್ಲಿರುವವರ ಬದುಕಿನ ತಾಜಾ ವಿವರಗಳ ಬಗೆಗೆ ನಮ್ಮ ಹೃದಯವನ್ನು ಆರ್ದ್ರಗೊಳಿಸುತ್ತಾರೆ. ಈ ಕವನದ ಕೊನೆಗೆ ಬರುವ ಸಾಲು ‘ಕಿರಣ ಸೋಕಿದರೆ ಸಾಕು ಮಾಯಲಿ ಗಾಯ, ಒಡೆಯದಿರಲಿ ಕಂಬನಿಗೆ, ಎದೆಯ ಹಾಲು’. ಇಲ್ಲಿ, ಮಾನವೀಯತೆ ಎಂಬ ಎದೆಹಾಲು ದುಃಖದ ಕಣ್ಣೀರಿಗೆ ಒಡೆಯದಿರಲಿ ಎನ್ನುವಂತಹ ಉದಾತ್ತ ಹಂಬಲ ಕವಿಯದು. ಇಂತಹ ಅಪ್ಪಟ ಜೀವಪರ ದನಿಯೇ ಜಯಂತರ ಸಾಹಿತ್ಯದ ಬಹು ಮುಖ್ಯ ಅಂಶ.
ತನ್ನ ವೈಚಾರಿಕ ಲೇಖನಗಳಿಂದ ಓದುಗರ ಬೌದ್ಧಿಕತೆಯನ್ನು ಪ್ರಭಾವಿಸಿದ ಗೌರೀಶ್ ಕಾಯ್ಕಿಣಿ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದುಡಿದ ಶಿಕ್ಷಕಿ, ಶಾಂತಾ ಕಾಯ್ಕಿಣಿ – ಇವರು ಜಯಂತರ ಹೆತ್ತವರು. ಇವರ ಮಡದಿ, ಸ್ಮಿತಾ. ಸೃಜನಾ ಮತ್ತು ಋತ್ವಿಕ್ ಇವರ ಮಕ್ಕಳು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ. ಬಯೋಕೆಮಿಸ್ಟ್ ಆಗಿ ಇವರು 23 ವರ್ಷ ದುಡಿದದ್ದು ಮುಂಬಯಿಯಲ್ಲಿ. ಆಗಲೇ ವಿಜ್ಞಾನ ಮತ್ತು ಸಾಹಿತ್ಯ ಇವೆರಡೂ ವಿರೋಧ ಪದಗಳಲ್ಲ ಎಂಬುದನ್ನು ಈ ಬಯೋಕೆಮಿಸ್ಟ್, ಕತೆ ಕವಿತೆ ಬರೆಯುತ್ತಲೇ ನಿರೂಪಿಸಿದ್ದರು. ಅವರ 19ನೆಯ ವಯಸ್ಸಿಗೇ ‘ರಂಗದೊಂದಿಷ್ಟು ದೂರ’ ಎಂಬ ಕವನ ಸಂಕಲನ ಪ್ರಕಟವಾಗಿದ್ದು ಮಾತ್ರವಲ್ಲ, ಆ ಕೃತಿ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿಯನ್ನೂ ಗಳಿಸಿತ್ತು. ಅಂದಿನಿಂದ ಆರಂಭವಾಗಿ ಈ ಐದು ದಶಕಗಳಲ್ಲಿ ಅವರು ಬರೆದ ಅನುಪಮ ಕವನ ಸಂಕಲನಗಳು – ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರ ಸೇನನ ವೈಖರಿ. ಜಯಂತರ ಸಾಹಿತ್ಯದ ವೈಶಿಷ್ಟ್ಯವೆಂದರೆ ಕವಿತೆಗಳು ಮಾತ್ರವಲ್ಲ, ಅವರ ಇತರ ಬರಹಗಳೂ ಕೂಡಾ ಕಾವ್ಯಗುಣ ಹೊಂದಿದ ಬದುಕಿನ ಕಥನಗಳೇ.
ಅವರ ಕಥಾಸಂಕಲನಗಳು – ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ಚಾರ್ ಮಿನಾರ್, ನೋ ಪ್ರೆಸೆಂಟ್ಸ್ ಪ್ಲೀಸ್, ಅನಾರ್ಕಲಿಯ ಸೇಫ್ಟಿ ಪಿನ್.
ಇವರ ಕತೆಗಳು ಆಯಾಯಾ ಕಾಲದಲ್ಲಾದ ಸಾಂಸ್ಕೃತಿಕ ಪಲ್ಲಟಗಳನ್ನು ಅದರೆಲ್ಲಾ ಸೂಕ್ಷ್ಮತೆಗಳೊಂದಿಗೆ ಶೋಧಿಸುವ ಪರಿಯೇ ವಿಶಿಷ್ಟವಾದುದು. ಉದಾಹರಣೆಗೆ ಹಳ್ಳಿಯೊಂದು ನಗರವಾಗುವ ಹಾದಿಯಲ್ಲಿ ಬದಲಾಗುವ ಮನುಷ್ಯ ಸ್ವಭಾವ, ರುಚಿ, ಪ್ರತಿಕ್ರಿಯೆಗಳನ್ನು ವಸ್ತುನಿಷ್ಠವಾಗಿ ದಾಖಲಿಸುತ್ತಲೇ ಜೀವ ಪುಟಿಯುವ ಕಥನವಾಗಿಸುತ್ತಾರೆ. ಆ ದೃಷ್ಟಿಯಿಂದ ಅವರ ಎಷ್ಟೋ ಕಥೆಗಳು ಸಮಾಜಶಾಸ್ತ್ರೀಯ ಅಧ್ಯಯನಕ್ಕೂ ಪ್ರಾಥಮಿಕ ಪುರಾವೆ ಒದಗಿಸಬಲ್ಲವು.
ಮುಂಬೈ ಕಥೆಗಳಂತೂ ಅಲ್ಲಿಯ ಲೋಕಲ್ ಟ್ರೈನ್ ಗಳಂತೆ ಸದಾ ಚಲನಶೀಲವಾದ, ಚೈತನ್ಯ ಶೀಲವಾದ, ನಗರದ ಅಂಚಿನಲ್ಲಿ ಬದುಕುತ್ತಿರುವ ‘ಸಾಮನ್ಯರಲ್ಲಿ ಸಾಮಾನ್ಯರ’ ಒಂದು ಅಪರಿಚಿತ ಜಗತ್ತನ್ನು ಓದುಗರಿಗೆ ದರ್ಶಿಸುತ್ತವೆ. ಅಲ್ಲಿಯ ಅಸಂಖ್ಯ ಚಾಳ್ಗಳ ‘ಮಿನಿಯೇಚರ್ ಖೋಲಿಗಳು’ ; ಹಳೆಯ ಚಿತ್ರ ಮಂದಿರಗಳು ಮತ್ತಲ್ಲಿಯ ಕಸಗುಡಿಸುವ, ರೀಲ್ ಸುತ್ತುವ, ಕತ್ತಲಲ್ಲಿ ಟಾರ್ಚ ಬಿಡುವ ಕಸುಬುದಾರರು; ರಸ್ತೆ ಬದಿಯಲ್ಲಿಯ ಬೂಟ್ ಪಾಲೀಶ್ ಮಾಡುವ, ಕಾರ್ ತೊಳೆಯುವ ಹೂ ಮಾರುವ ಲವಲವಿಕೆಯ ಮಕ್ಕಳು, ಜೀವಂತಿಕೆಯ ಚಾಯ್ ವಾಲಾಗಳು, ಕೋಠಿಯ ಕೀಟಲೆ ಹುಡುಗಿಯರು – ಹೀಗೆ ಝಗಮಗಿಸುವ ನಗರದ ದೀಪಗಳ ಕೆಳಗಿನ ಕತ್ತಲಲ್ಲಿ ಅನಾಮಿಕರಾಗಿ ಬದುಕು ಕಟ್ಟಿಕೊಳ್ಳುತ್ತಿರುವ ಈ ಅಸಂಖ್ಯಾತ ಮಂದಿ ಆ ಬದುಕಿನ ಬಗೆಗೆ ತೋರುವ ಅದಮ್ಯ ಉತ್ಸಾಹ, ಛಲ, ಸಹಜೀವನದ ಕೊಂಡಿ ಮುರಿಯದಂತೆ ಸಾಧಿಸಿದ ವ್ಯಕ್ತಿ ಸ್ವಾತಂತ್ರ್ಯ- ಎಲ್ಲವೂ ಈ ಬರಹಗಳಲ್ಲಿ ಅಪ್ಪಟವಾಗಿ ಚಿತ್ರಿತವಾಗಿವೆ. ಬಡವರ, ದುರ್ಬಲರ ಬದುಕು ನಿರ್ಗತಿಕವಾಗಿದ್ದು, ಕರುಣಾಜನಕವಾಗಿರುತ್ತದೆ ಎಂಬ ಸಿದ್ಧಮಾದರಿಯ ಒಂದೇ ಮಗ್ಗುಲಿನ ಕಥನ, ಎಷ್ಟೋ ಬಾರಿ ಅಂತಹವರ ಬದುಕಿನ ಇನ್ನಿತರ ಸ್ವಾರಸ್ಯಕರ ಅಂಶಗಳತ್ತ ನಮ್ಮನ್ನು ಕುರುಡರನ್ನಾಗಿಸುತ್ತದೆ. ಅದರೆ ಜಯಂತ್ ಕಾಯ್ಕಿಣಿಯವರ ಬರಹಗಳು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಈ ಎಲ್ಲ ಸಹಜೀವಿಗಳ ಬಗೆಗೆ ಸಹಾನುಭೂತಿ ಇಟ್ಟುಕೊಂಡೇ ಅವರ ಬದುಕಿನ ಇನ್ನಿತರ ಮಗ್ಗುಲುಗಳನ್ನು ಆಪ್ತವಾಗಿ ನಿರುಕಿಸಿ, ಅವರೆಲ್ಲರ ವಿಶಿಷ್ಟ ಕೌಶಲಗಳನ್ನೂ, ಬಿದ್ದರೂ ಮುಗ್ಗರಿಸದೇ ಚಿಮ್ಮಿ ಏಳಬಲ್ಲ ಗಟ್ಟಿತನವನ್ನೂ, ಕೀಟಲೆ ಕಿತಾಪತಿಗಳನ್ನೂ ದರ್ಶಿಸುತ್ತವೆ. ಅಸಮಾನತೆಯ ಕ್ರೌರ್ಯದ ಜತೆಗೇ ಎಂತವರಿಗೂ ತಾನಿಲ್ಲಿ ಬದುಕಬಲ್ಲೆ ಎಂಬ ವಿಶ್ವಾಸ ತುಂಬಿಸುವ ಈ ನಗರೀಕರಣದ ವಿಪರ್ಯಾಸ ಓದುಗರನ್ನು ಎದೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತದೆ. ಮಹಾನಗರಿಯ ಕಥೆಗಳಲ್ಲಿ ಬರುವ ತರ ತರದ ಪಾತ್ರಗಳು ಇಡೀ ಭಾರತವನ್ನೇ ಪ್ರತಿನಿಧಿಸುವ ಬೆರುಗೂ ಇಲ್ಲಿಯ ವೈಶಿಷ್ಟ್ಯವೇ !
ಜಯಂತರ ಓದುಗ ಬಳಗವನ್ನು ಹೆಚ್ಚಿಸಿದ್ದು ಅವರ ಅಂಕಣ ಬರಹಗಳು. ಸಾಹಿತ್ಯದ ಓದಿನ ಒಲವಿಲ್ಲದವರೂ ಇವರ ಅಂಕಣಕ್ಕಾಗಿ ಕಾಯುತ್ತಿದ್ದರು, ಮತ್ತು ಅವರ ಈ ಓದೇ ಕನ್ನಡದ ಸಾಹಿತ್ಯ ಲೋಕಕ್ಕೆ ಅವರಿಗೆ ಬಾಲಿಲನ್ನು ತೆರೆಯಿತು ಎಂಬುದು ಈ ಬರಹಗಾರನ ಹೆಗ್ಗಳಿಕೆ.
ಅಂಕಣಕಾರನಾಗಿ ಬರೆದ ಬರೆಹಗಳ ಸಂಗ್ರಹ : ಬೊಗಸೆಯಲ್ಲಿ ಮಳೆ, ಶಬ್ದ ತೀರ, ಟೂರಿಂಗ್ ಟಾಕೀಸ್, ಗುಲ್ ಮೊಹರ್. ನಮ್ಮ ಸುತ್ತಮುತ್ತ ನಡೆಯುವ ಬಿಡಿ ಬಿಡಿಯಾದ ದೈನಿಕದ ವಿವರಗಳನ್ನೇ ಕಟ್ಟುತ್ತಾ ನಮ್ಮೊಳಗೆ ಹೊಸ ಒಳನೋಟಗಳನ್ನು ಸ್ಫುರಿಸುವ ಕಲೆಗಾರಿಕೆ ಜಯಂತರದು. ಈ ಬದುಕಿನ ಬಗೆಗಿನ ತಾತ್ವಿಕ ಚಿಂತನೆ, ಸಾಮಾಜಿಕ ನ್ಯಾಯಕ್ಕಾಗಿನ ಬದ್ಧತೆ ಅವರ ಬರಹಗಳಲ್ಲಿ ಅಂತರಗಂಗೆಯಂತೆ ಪ್ರವಹಿಸುತ್ತಲೇ ಇದ್ದರೂ ಹೊರನೋಟಕ್ಕೆ ಅದು ಎದ್ದು ಕಾಣುವುದಿಲ್ಲ.
ಉದಾಹರಣೆಗೆ, ‘ಅದು ಬರಿ ಗೆಲುವಲ್ಲೋ ಅಣ್ಣಾ …’ ಎಂಬ ಒಂದು ಅಂಕಣ ಬರಹದಲ್ಲಿ ತಮ್ಮ ದಿನನಿತ್ಯದ ಊಟಕ್ಕಾಗಿಯೇ ಪರದಾಡುತ್ತಿರುವ ನಗರದ ಸಾಮಾನ್ಯ ಜನ, ತಮ್ಮೆಲ್ಲಾ ಕೋಟಳೆಗಳಿದ್ದಾಗ್ಯೂ, ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುವಾಗ ಇಂಡಿಯಾದ ಗೆಲುವಿಗಾಗಿ ಹೇಗೆ ಚಡಪಡಿಸುತ್ತಿರುತ್ತಾರೆ ಎಂಬ ಒಂದು ನೈಜ ವರ್ಣನೆ ಬರುತ್ತದೆ. ಅವರಿಗೆ “ಭಾರತ” ಎಂದರೆ ಏನು! ಬೌದ್ಧಿಕ ವಲಯದ ರಾಷ್ಟ್ರದ ಕಲ್ಪನೆಗೂ ಈ ಜನಸಾಮಾನ್ಯರ ದೇಶ ಭಕ್ತಿಗೂ ಇರುವ ವ್ಯತ್ಯಾಸವೇನು? ಇಂತಹ ಅನೇಕ ಸೂಕ್ಷ್ಮಗಳಿಗೆ ಈ ಲೇಖನ ಮುಖಾಮುಖಿಯಾಗುತ್ತದೆ. ಕೋಮುಗಲಭೆಯ ವಿವರಗಳು ಇವರ ಬರಹಗಳಲ್ಲಿ ಕಾಣದಿದ್ದರೂ ಅವು, ಕೋಮು ಸಂತ್ರಸ್ತರ ಮನುಷ್ಯ ಸಹಜ ಆತಂಕ, ಭಯ, ಇವುಗಳನ್ನೆಲ್ಲಾ ಬಿಚ್ಚಿಡುತ್ತಾ ಕೋಮು ರಾಜಕಾರಣದ ಕ್ರೌರ್ಯವನ್ನು ಅನುಭವಜನ್ಯವಾಗಿಸುತ್ತವೆ. ಹೀಗೆ ಈ ಬರಹಗಳ ಕೇಂದ್ರ, ಸಾಮಾನ್ಯವಾಗಿ ಪರಿಧಿಯಲ್ಲೇ ಬದುಕುತ್ತಿರುವವರ ಬದಿಗೆ ಚಲಿಸುತ್ತದೆ. ಇದು ಒಂದು ವಿಷಯವನ್ನು ನಾವು ಗ್ರಹಿಸುವ ದಿಕ್ಕನ್ನೇ ಬದಲಿಸಿ ಬೇರೆಯದೇ ಆದ ನೋಟವನ್ನು ಸುಲಭವಾಗಿ ದಕ್ಕಿಸಿ ಕೊಡುತ್ತದೆ.
ನಾಟಕಕಾರನಾಗಿ ಇವರು ರಚಿಸಿದ ನಾಟಕಗಳು – ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತ, ಅಂಕದ ಪರದೆ. ಇವರೊಳಗಿನ ನಾಟಕಕಾರ ಅವರ ಬೇರೆ ಬರಹಗಳಲ್ಲಿಯೂ ಆಗಾಗ ಕಾಣಿಸುವುದಿದೆ. ನಿರ್ಜೀವ ವಸ್ತುಗಳೂ ಅವರ ರೂಪಕಗಳ ಕೃಪೆಯಿಂದ, ಪಾತ್ರಗಳಾಗಿ ಬಿಡುತ್ತವೆ. ಉದಾಹರಣೆಗೆ, “ನಮ್ಮ ನಿತ್ಯದ ನೆಂಟ ಸೂರ್ಯ, ಪ್ರತಿ ಸಂಜೆ ನಮ್ಮೆಲ್ಲರ ನೆರಳುಗಳನ್ನು ಕಸಿದುಕೊಂಡು ಹೋಗುತ್ತಾನೆ. ಮತ್ತೆ ಇರುಳಿಡೀ ಬಹುಶಃ ತನ್ನ ಡಾರ್ಕ ರೂಮಲ್ಲಿ ಕೂತು ನಮ್ಮೆಲ್ಲರ ನೆಗಟಿವ್ ಗಳನ್ನು ತೊಳೆದು ಪಾಸಿಟಿವ್ ಮಾಡುತ್ತಾನೆ” ಇದರಂತೆಯೇ, ಅವರ ‘ನೈಟಿ ಮರ’ದಲ್ಲಿನ ನಾಟಕೀಯ ಅಂಶ, “ಅಪ್ಪಾ ನಾನೂ ಸೈನಿಕನಾಗಲೇ?” ಕವನದ ಪಾತ್ರಗಳ ತಿಕ್ಕಾಟ ನಮ್ಮನ್ನು ತಲ್ಲಣಗೊಳಿಸಿ ಬಿಡುತ್ತವೆ.
ಜಯಂತ್ ಕಾಯ್ಕಿಣಿ ಕೆಲಸ ಮಾಡಿದ ಕ್ಷೇತ್ರಗಳಲ್ಲೆಲ್ಲಾ ಅವರ ಹೊಸತನದ ಛಾಪು, ಸಾಮಾನ್ಯರ ಅಸಾಮಾನ್ಯತೆಯನ್ನು ಗುರುತಿಸುವ ಸರಳ ಸಜ್ಜನಿಕೆಯನ್ನು ಕಾಣಬಹುದು. ದೂರದರ್ಶನದ ಟೆಲಿವಿಜನ್ ಸಂದರ್ಶಕರಾಗಿ, (ಈ ಟಿವಿಯ ನಮಸ್ಕಾರ ಸರಣಿ) ಕುವೆಂಪು, ಕಾರಂತ, ಬೇಂದ್ರೆ ರಾಜಕುಮಾರರಂತಹ ಮೇರು ವ್ಯಕ್ತಿಗಳ ವ್ಯಕ್ತಿತ್ವ ರೂಪುಗೊಳ್ಳಲು ಹೇಗೆ ಅವರ ಊರು, ಕೇರಿ, ಗಲ್ಲಿ- ಬಹಳ ಮುಖ್ಯ ಪಾತ್ರ ವಹಿಸಿತ್ತು ಎಂಬುದನ್ನು ನಿರೂಪಿಸಿದ್ದರು ! ಆ ಸಂದರ್ಭ ಅವರು ಸಂದರ್ಶಿಸಿದ ವ್ಯಕ್ತಿಗಳೆಲ್ಲರೂ ಈ ಕವಿ, ಕಲಾವಿದರ ಬದುಕಲ್ಲಿ ಬಂದುಹೋದ ಬಹಳ ಮುಖ್ಯ ಸಹಜೀವಿಗಳು, (ಅವರ ಕಾರ್ ಚಾಲಕ, ಕ್ಷೌರಿಕ..) ಆದರೆ ಈ ಪ್ರಪಂಚಕ್ಕೆ ಅನಾಮಿಕರಾಗಿಯೇ ಇದ್ದವರು. ಹಾಗಾಗಿ ಇವರೆಲ್ಲರ ಬದುಕಿನ ಅನೇಕ ಅನಾಮಿಕ ಮಗ್ಗುಲುಗಳ ಪರಿಚಯವಾದದ್ದು, ಈ ಸಮಾಜಕ್ಕಾಗಿರುವ ಒಂದು ದೊಡ್ಡ ಉಪಕಾರವೇ ! ಹಾಗೆಯೇ ಇವರು ಸಂಪಾದಕರಾಗಿ ಕಟ್ಟಿಕೊಟ್ಟ “ಭಾವನಾ ಮಾಸಿಕ” ಅದರ ಹೊಸತನಕ್ಕಾಗಿ ಇಂದಿಗೂ ಜನಮಾನಸದಲ್ಲಿ ತಾಜಾ ನೆನಪಾಗಿ ಉಳಿದಿದೆ ಮಾತ್ರವಲ್ಲ, ಅದಾಗಲೇ ಗಟ್ಟಿಯಾಗಿ ನೆಲೆಯೂರಿದ ಅದೆಷ್ಟೋ ಪತ್ರಿಕೆಗಳು “ಭಾವನಾ ಮಾದರಿ”ಯನ್ನು ಅನುಕರಿಸಿದವು !
ಜಯಂತರನ್ನು ಸೆಲೆಬ್ರಿಟಿಯನ್ನಾಗಿ ಮಾಡಿದ್ದು ಅವರು ರಚಿಸಿದ ಚಲನಚಿತ್ರ ಗೀತೆಗಳು. ಶಿಷ್ಟ, ಜನಪ್ರಿಯ ಎಂಬೆಲ್ಲಾ ಮಡಿವಂತಿಕೆಯನ್ನು ತೋರದೇ ಎಂದಿನ ತಾದಾತ್ಮ್ಯದಿಂದ ಬರೆಯುತ್ತಲೇ, ಅನೇಕ ಚಿತ್ರಗಳಿಗೆ ಗೀತರಚನೆಕಾರರಾಗಿ, ಚಿತ್ರಕತೆ ಸಂಭಾಷಣೆಗಾರರಾಗಿ ಸಿನೆಮಾ ಸಾಹಿತ್ಯಕ್ಕೇ ಹೊಸತನದ ಸ್ಪರ್ಶ ನೀಡಿದ ಜಯಂತ್ ಕಾಯ್ಕಿಣಿ ಜನಮನದಲ್ಲಿ ಒಂದು ವಿಶೇಷ ಸ್ಥಾನ ಪಡೆದಿದ್ದಾರೆ.
2010ರಲ್ಲಿ ನಾಸಿಕ್ ಮುಕ್ತ ವಿದ್ಯಾಪೀಠವು ಆರಂಭಿಸಿದ, ಪ್ರತಿಷ್ಠಿತ “ಕುಸುಮಾಗ್ರಜ” ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಪಡೆದ ಮೊದಲ ಭಾರತೀಯ ಲೇಖಕರಾಗಿರುವ ಜಯಂತರಿಗೆ, 2011ರಲ್ಲಿ ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಮನ್ನಣೆ ನೀಡಿದೆ. ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿಯೊಂದಿಗೆ ಇನ್ನೂ ಅನೇಕ ಪುರಸ್ಕಾರಗಳು ಇವರಿಗೆ ದೊರೆತಿವೆ. ಅದರಲ್ಲಿ ಬಹು ಮುಖ್ಯವಾಗಿ “ನೋ ಪ್ರೆಸೆಂಟ್ ಪ್ಲೀಸ್” ಕೃತಿಗೆ ಅತ್ಯುತ್ತಮ ದಕ್ಷಿಣ ಏಷ್ಯಾ ಡಿ.ಎಸ್.ಸಿ. ಪುರಸ್ಕಾರ ದೊರೆತಿದೆ. ಚಲನಚಿತ್ರ ಕ್ಷೇತ್ರದಲ್ಲೂ ಅನೇಕ ಪಿಲ್ಮ್ ಫೇರ್ ಪ್ರಶಸ್ತಿಗಳೊಂದಿಗೆ ಕರ್ನಾಟಕ ಸರಕಾರದ ಅತ್ಯುತ್ತಮ ಚಲನಚಿತ್ರ ಸಂಭಾಷಣೆಗಾರ ಪ್ರಶಸ್ತಿಗಳೂ ದೊರೆತಿವೆ.
ಬದುಕಿನ ಸಣ್ಣ ಪುಟ್ಟ ವಿವರಗಳನ್ನೂ ಕರಾರುವಾಕ್ಕಾಗಿ ಹಿಡಿದಿಡುವ ಜಯಂತರ ಬರಹಗಳು ಮನುಷ್ಯನ ಎಲ್ಲಾ ದಿವ್ಯ ಕ್ಷಣಗಳನ್ನೂ, ನೋವಿನ ತೀವ್ರತೆಯನ್ನೂ ಸಮಾನವಾಗಿ ದಾಖಲಿಸುತ್ತವೆ. ಆದರೆ ಓದುಗನಿಗೆ ಇದು ವಿಷಾದವನ್ನು ತುಂಬದೆ ಬದುಕುವ ಬಗೆಗೆ ಭರವಸೆಯ ಬೆಳಕನ್ನು ಕಾಣಿಸುತ್ತದೆ ಎಂಬುದು ಇಲ್ಲಿಯ ವಿಶೇಷ. ಈ ಪ್ರಕೃತಿಯಲ್ಲಿ ಘಟಿಸುವ ಬೆಳದಿಂಗಳು, ಸೂರ್ಯೋದಯದಂತಹ ವಿದ್ಯಮಾನಗಳಿಗೆ ನಾವು ಮುಖ ಮಾಡಿದಷ್ಟೂ ಅವು ಮತ್ತೆ ಮತ್ತೆ ನಮ್ಮಲ್ಲಿ ಉಲ್ಲಾಸವನ್ನು ತುಂಬುವಂತೆ, ಜಯಂತರ ಬರಹಕ್ಕೆ ಮತ್ತೆ ಮತ್ತೆ ಮುಖಾಮುಖಿಯಾದಾಗಲೂ ಅವು ನಮ್ಮ ಚಿಂತನವನ್ನೂ ಚೇತನವನ್ನೂ ಜಾಗೃತಗೊಳಿಸಬಲ್ಲ ಶಕ್ತಿ ಇರುವಂಥವು.
ಅಭಿಲಾಷಾ ಎಸ್.
ಪ್ರಾಂಶುಪಾಲರು, ಎಸ್. ಎಂ. ಎಸ್. ಆಂಗ್ಲಮಾಧ್ಯಮ ಶಾಲೆ ಬ್ರಹ್ಮಾವರ