ಮಂಗಳೂರು : ಮಂಗಳೂರಿನ ಲೇಖಕಿಯರ ವಾಚಕಿಯರ ಸಂಘದ ಹಿರಿಯ ಸದಸ್ಯೆ ಬಿ. ಎಂ. ರೋಹಿಣಿಯವರ ಮಾತೃಶ್ರೀಯವರಾದ ದೇವಕಿಯಮ್ಮನವರ ಸ್ಮರಣಾರ್ಥ ಆಯೋಜಿಸಿದ ದತ್ತಿನಿಧಿ ಕಾರ್ಯಕ್ರಮ ‘ಜೀವ -ಭಾವ-ಯಾನ’ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿ ಆಯುಷ್ ಪ್ರೇಂ ಹಾಡಿದ ಕುವೆಂಪು ಅವರ ‘ಮುಚ್ಚುಮರೆಯಿಲ್ಲದೆಯೇ’ ಆಶಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಕನ್ನಡ ಅಧ್ಯಾಪಿಕೆ ಕ್ರಿಸ್ ಎವರ್ಟ್ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಜಾನ್ಸನ್ ಪಿಂಟೋ ಎಸ್. ಜೆ. ಮಾತನಾಡಿ
‘’ಜೀವನ ಅಂದರೆ ಬರಿಯ ವಿದ್ಯೆ ಮತ್ತು ನೌಕರಿಯಲ್ಲ. ಓದು ಹಾಗೂ ಜ್ಞಾನದ ಮೂಲ. ಓದಿನ ಜೊತೆ ಬರೆಯುವ ಹವ್ಯಾಸ ಬೆಳೆಸಿಕೊಂಡರೆ ವೈಚಾರಿಕತೆ ಹೆಚ್ಚುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ದತ್ತಿನಿಧಿಯ ಪೋಷಕರಾದ ಬಿ. ಎಂ. ರೋಹಿಣಿ “ಪ್ರತಿಯೊಬ್ಬನ ಮನಸಿನೊಳಗೆ ರಾಕ್ಷಸನಿದ್ದಾನೆ ಹಾಗೂ ದೇವತೆಯರೂ ಇದ್ದಾರೆ. ಹೃದಯದೊಳಗಿನ ದೇವತೆಯನ್ನು ಜಾಗೃತವಾಗಿರಿಸಿ ರಾಕ್ಷಸನನ್ನು ತುಳಿಯಬೇಕಾದರೆ ಸಾಹಿತ್ಯ, ಮತ್ತು ಇತರ ಕಲೆಗಳನ್ನು ಪ್ರೀತಿಸಿ. ದೀಪದ ಒಂದು ಬತ್ತಿ ಬೆಳಗದಿದ್ದರೆ ಆ ಭಾಗ ಕತ್ತಲಾಗುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಹಿತನುಡಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಫಿಕ್ ಮಾಸ್ಟರ್ (ಪ್ರೇರಣಾ ತಜ್ಞರು) ಮಾತನಾಡಿ “ಅಕ್ಷರದಿಂದ ಅಧಿಕಾರ ಸಿಗುತ್ತದೆ. ಸಂಸ್ಕಾರದಿಂದ ಯೋಗ್ಯತೆ ಸಿಗುತ್ತದೆ.” ಎಂದು ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರದ ಅವಶ್ಯಕತೆಯನ್ನು ವಿವರಿಸಿದರು. ಉತ್ತಮ ಆಶಯಗಳೊಂದಿಗೆ ತಮ್ಮ ಗುರಿಯತ್ತ ಗಮನವೀಯುವ ಅಗತ್ಯವನ್ನು ವಿವಿಧ ಉದಾಹರಣೆಗಳೊಂದಿಗೆ ಮನದಟ್ಟು ಮಾಡಿಸಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕ. ಲೇ. ವಾ. ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ತಮ್ಮ ನುಡಿಗಳಲ್ಲಿ ತಾವು ಕಂಡ ಬಾಲ ಕಾರ್ಮಿಕನ ಮಾತೃಭಕ್ತಿಯನ್ನು ಉದಾಹರಿಸಿ ವಿದ್ಯೆಯೊಂದಿಗೆ ಆದರ್ಶ ಗುಣಗಳನ್ನು ಮೈಗೂಡಿಸುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಹೆಣ್ಣು – ನಾ ಕಂಡಂತೆ‘ ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕುಮಾರಿ ಯುಕ್ತಿ, ದ್ವಿತೀಯ ಬಹುಮಾನವನ್ನು ಕುಮಾರಿ ಸ್ನೇಹಾ ಹಾಗೂ ತೃತೀಯ ಬಹುಮಾನವನ್ನು ಪೂರ್ಣೇಶ್ ಕುಮಾರ್ ಗಳಿಸಿದರು. ವಿಜೇತರಿಗೆ ಬಹುಮಾನವಾಗಿ ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ಮತ್ತು ನಗದು ಬಹುಮಾನವನ್ನು ವಿತರಿಸಲಾಯಿತು. ಕ. ಲೇ.ವಾ.ದ ಸದಸ್ಯೆಯೂ ಆಗಿರುವ ಶಾಲಾ ಅಧ್ಯಾಪಕಿ ಫೆಲ್ಸಿ ಲೋಬೋ ಕಾರ್ಯಕ್ರಮವನ್ನು ನಿರ್ವಹಿಸಿದರು.