ಮಂಗಳೂರು : ಸ್ವಚ್ಛ ಮಂಗಳೂರು ಫೌಂಡೇಷನ್ ಮತ್ತು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ವಿವೇಕಾನಂದ ಸಭಾಭವನದಲ್ಲಿ ‘ಜಿಜ್ಞಾಸಾ’ : ಸನಾತನ ಚಿಂತನ ಗಂಗಾ : ದ್ವೈಮಾಸ ಮೊದಲ ಸರಣಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಿಜ್ಞಾನಿ, ಲೇಖಕ ಮತ್ತು ಸಂಶೋಧಕ ಡಾ. ಆನಂದ್ ರಂಗನಾಥನ್ ಇವರು ‘ಭಾರತ 2047 – ಅವಕಾಶಗಳ ತಾಣ’ ವಿಷಯದ ಕುರಿತು ಉಪನ್ಯಾಸ ನೀಡಿ “ಭಾರತವು ಹಿಂದೆ ಹಲವಾರು ಅವಕಾಶಗಳನ್ನು ಕೈ ಚೆಲ್ಲಿದೆ, ಆದರೆ ಇಂದು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ದೇಶವಾಗಿ ಮಾರ್ಪಾಟುಗೊಂಡಿದೆ. ಇಡೀ ವಿಶ್ವಕ್ಕೆ ಬಾಧಿಸಿದ ಕೋವಿಡ್-19 ಅನ್ನು ನಮ್ಮ ದೇಶವು ಸಮರ್ಥವಾಗಿ ಎದುರಿಸಿರುತ್ತದೆ. ಇದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ. ಇಂದು ನಮ್ಮ ಮುಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಮುಂದಿನ 25 ವರ್ಷಗಳು ನಿಜಕ್ಕೂ ಭಾರತದ ಇತಿಹಾಸದಲ್ಲಿ ಅಮೃತ ಕಾಲವಾಗಲಿದೆ” ಎಂದು ಹೇಳಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. “ಮಂಗಳೂರು ರಾಮಕೃಷ್ಣ ಮಠ ಮತ್ತು ಮಿಷನ್ ಆಧ್ಯಾತ್ಮಿಕ, ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಇತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಇದರೊಂದಿಗೆ ಸ್ವಚ್ಛ ಮಂಗಳೂರು ಫೌಂಡೇಶನ್ ಇದರ ಮೂಲಕ ಸ್ವಚ್ಛ ಮಂಗಳೂರು ಅಭಿಯಾನ ಆರಂಭದ ಕಾರ್ಯ ನಿಜಕ್ಕೂ ಶ್ಲಾಘನೀಯ ಮುಂದೆಯೂ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಮಂಗಳೂರಿನ ಜನತೆಗೆ ಉತ್ತಮ ಸೇವೆ ನೀಡಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎನ್.ವಿನಯ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಜ್ಞಾಸಾದ ಸಂಯೋಜಕ ಮತ್ತು ಭಾರತೀಯ ಸೇನೆಯ ಅನುಭವಿ ಸೈನಿಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಜಿಜ್ಞಾಸಾದ ಸಹ ಸಂಯೋಜಕ ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಫಿ ಇದರ ಪ್ರಾಂಶುಪಾಲ ಪ್ರೊ. ಧನೇಶ್ ಕುಮಾರ್ ವಂದಿಸಿ, ಐಶ್ವರ್ಯ ನಾಯರ್ ನಿರೂಪಿಸಿದರು.