ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಸಂತೋಷಿ ಕಲಾಮಂಟಪದಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ವಿದುಷಿ ಜ್ಞಾನ ಐತಾಳ್ ಇವರ ‘ಜ್ಞಾನ ನೃತ್ಯ ವಂದನಂ’ ಗುರು ವಂದನ ಕಾರ್ಯಕ್ರಮ ಸಂಪನ್ನಗೊಂಡಿತು.
ಶಿವನನ್ನು ಸ್ತುತಿಸುವ ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಷ್ಟದಿಕ್ಷಾಲಕರಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ವಂದಿಸುವ ನೃತ್ಯವಿದು. ಎರಡನೆಯದಾಗಿ ‘ಯಮನಲ್ಲಿ ಕಾಣನೆಂದು ಹೇಳಬೇಡ… ಯಮನೇ ಶ್ರೀ ರಾಮನು ಸಂದೇಹ ಬೇಡ..’ ಎನ್ನುವ ಪುರಂದರ ದಾಸರ ರಚನೆಯ ಶಿವರಂಜಿನಿ ರಾಗ ಆದಿ ತಾಳದ ನೃತ್ಯ ಕಲಾರಸಿಕರನ್ನು ಭಾವಪರವಶರಾಗಿಸಿತು. ರಾಮ ರಾವಣನಿಗೆ, ನರಹರಿ ಹಿರಣ್ಯಕಶಿಪುವಿಗೆ, ಕಂಸನಿಗೆ ಕೃಷ್ಣನು ಹೇಗೆ ಯಮನಾದ ಎನ್ನುವ ಕಥನವನ್ನು ನೃತ್ಯದ ಮೂಲಕ ವಿಹಂಗಮವಾಗಿ ನಾಟ್ಯರೂಪದಲ್ಲಿ ವೇದಿಕೆಯ ಮೇಲೆ ಕಟ್ಟಿ ತೊಟ್ಟ ಜ್ಞಾನಳ ಹಾವ-ಭಾವ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು.


ಪದವರ್ಣದಲ್ಲಿ ಕೈಲಾಸವಾಸಿ ಶಿವನ ಮನ್ಮಥ ದಹನ, ತಾಂಡವ ನೃತ್ಯ, ಬೇಡರ ವೇಷದಲ್ಲಿ ಬಂದ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಪ್ರಸಂಗ ವೀಕ್ಷಕರ ಕಣ್ಮನ ತಣಿಸಿತು. ಶಿವ ತಾಂಡವ ನೃತ್ಯದಲ್ಲಿ ಶಿವನ ಗೆಜ್ಜೆಯ ಶಬ್ದ ಆತನ ಕಣ್ಣಿನ ಚಲನೆಗಳನ್ನು ನವರಸಗಳನ್ನು ತನ್ನ ನಾಟ್ಯ ವೈಭವದ ಮೂಲಕ ಹೃದಯಂಗಮವಾಗಿ ಕಟ್ಟಿಕೊಟ್ಟಳು. ಶಿವ ವರ್ಣನೆಯ ನಾಟ್ಯ ದೃಶ್ಯ ಅವಿಸ್ಮರಣೀಯ, ಅಮೋಘ, ಅನುಪಮ.


ಆನಂತರದಲ್ಲಿ ಆದಿ ತಾಳದಲ್ಲಿ ಅಗಸ್ಯರ ರಚನೆಯ ‘ಶ್ರೀ ಚಕ್ರ ರಾಜ ಸಿಂಹಾನನೇಶ್ವರಿ’ ಎನ್ನುವ ಪಾರ್ವತಿ ದೇವಿಯನ್ನು ಸ್ತುತಿಸುವ ನೃತ್ಯ ನಡೆಯಿತು. ಐದನೆಯದಾಗಿ ಜಯ ದೇವ ವಿರಚಿತ ಆದಿ ತಾಳ ದರ್ಬಾರಿ ರಾಗದಲ್ಲಿ ‘ಸಾ…ವಿರಹೇ’ ಎನ್ನುವ ಹರಿವಿರಹದಿಂದ ನೊಂದಿರುವ ರಾಧೆಯ ವಿಯೋಗವನ್ನು ಕೃಷ್ಣನಿಗೆ ಮನಮುಟ್ಟುವಂತೆ ತಿಳಿಸುವ ಆಹ್ಲಾದಕರ ನೃತ್ಯಸುಧೆ ಹರಿಯಿತು. ಕೋಪದಲ್ಲಿ ಕುಳಿತಿರುವ ಪತಿಯ ಮನವನ್ನು ಪರಿಪರಿಯಾಗಿ ಒಲಿಸುವ ಮಾತನಾಡಬಾರದೇನೋ.. ಎನ್ನುವ ಜಾವಳಿ ನೃತ್ಯದ ತಂಪು ಕಂಪು ಪ್ರವಹಿಸಿತು. ಕೊನೆಯಲ್ಲಿ ಉಲ್ಲಾಸಭರಿತ ಲಯಪೂರ್ಣ ರಚನೆಯ ತಿಲ್ಲಾನ ವೀಕ್ಷಕರನ್ನು ಸಂತಸಗೊಳಿಸಿತು. ತಿಲ್ಲಾನ ಬಳಿಕ ನೃತ್ಯ ಯಾತ್ರೆ ಶಾಂತ ಸಮಾಪ್ತಿ, ನಾದೋ ಪಾಸನೆಯ ಅಂತಿಮ ಪ್ರಾರ್ಥನೆ ಎನಿಸಿದ ದೇವತೆಗಳಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ಕೃತಜ್ಞತೆ ಅರ್ಪಣೆಯ ಮಂಗಳಂ ಮೂಲಕ ನೃತ್ಯ ಕಾರ್ಯಕ್ರಮ ಕೊನೆಗೊಂಡಿತು.

ಜ್ಞಾನಳ ಲಾಲಿತ್ಯಪೂರ್ಣ ನೃತ್ಯಕ್ಕೆ ಸಾಥ್ ನೀಡಿದ ವಿದ್ವಾನ್ ಉಣ್ಣಿಕೃಷ್ಣನ್ ವೀಣಾಲಯಂ ನೀಲೇಶ್ವರ ಇವರ ಮೋಹಕ ಸಂಗೀತ, ಕಾರ್ತಿಕ್ ವ್ಯಧಾತ್ರಿ ಇವರ ಮೃದಂಗ ಹಾಗೂ ವಿದ್ವಾನ್ ನಿತೀಶ್ ಅಮ್ಮಣ್ಣಾಯರ ಕೊಳಲು ವಾದನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಸುನಿಲ್ ಉಚ್ಚಿಲ ಹಾಗೂ ನಯನ ಇವರ ಮನೆಸಳೆಯುವ ವೇಷಭೂಷಣ, ಮನು ಮುರಳೀಧರ ಇವರ ಮೇಕಪ್ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು. ಒಟ್ಟಿನಲ್ಲಿ ಈ ನೃತ್ಯ ಕಾರ್ಯಕ್ರಮ ಕಲೋಪಾಕಾಸಕರ ಸ್ಮರಣೆಯಲ್ಲಿ ದೀರ್ಘಕಾಲ ಉಳಿಯುವ ಸವಿಸಂಜೆಯಾಯಿತು.
ಬಿ.ಸಿ. ನಾವಡ
