06 ಏಪ್ರಿಲ್ 2023, ಪೆರ್ಲ: ಶಿವಾಂಜಲಿ ಕಲಾಕೇಂದ್ರ (ರಿ.) ಪೆರ್ಲ ಇದರ ನಿರ್ದೇಶಕಿ ವಿದುಷಿ ಕಾವ್ಯಾ ಭಟ್ ಇವರು ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ “ಭರತನಾಟ್ಯಂ ಕಾರ್ಯಾಗಾರ”ವನ್ನು ಅನ್ನಪೂರ್ಣ ಹಾಲ್, ಶ್ರೀ ದುರ್ಗಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರ, ಇಡಿಯಡ್ಕ, ಪೆರ್ಲದಲ್ಲಿ ಹಮ್ಮಿಕೊಂಡಿದ್ದಾರೆ.
ನಾಟ್ಯಾರಾಧನಾ ಕಲಾಕೇಂದ್ರ ಉರ್ವದ ನಿರ್ದೇಶಕಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿದ್ದಾರೆ. ಇವರದೇ ಪರಿಕಲ್ಪನೆ, ರಚನೆ, ನೃತ್ಯ ಸಂಯೋಜನೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ‘ಜತಿಸ್ವರ’, ‘ಪದ’ ಮತ್ತು ‘ಜಾವಳಿ’ಗಳ ತರಬೇತಿ ಪಡೆಯುತ್ತಿದ್ದಾರೆ.
ವಿದುಷಿ ಸುಮಂಗಲಾ ರತ್ನಾಕರ್ ಇವರು ತಮ್ಮ ಏಳರ ಎಳವೆಯಿಂದಲೇ ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ನಿರ್ದೇಶನದಲ್ಲಿ ನಡೆಯುವ ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ಈಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ನೃತ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯಕ್ಷಗಾನ, ತಾಳಮದ್ದಲೆಯಲ್ಲಿ ನುರಿತ ಇವರು “ಯಕ್ಷ ಆರಾಧನಾ”ದ ನಿರ್ದೇಶಕಿಯೂ ಆಗಿದ್ದಾರೆ.
ಶಿವಾಂಜಲಿ ಕಲಾಕ್ಷೇತ್ರದ ನಿರ್ದೇಶಕಿ ಶ್ರೀಮತಿ ಕಾವ್ಯಾ ಭಟ್, ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯಾಗಿದ್ದು, ನೂಲಿನಂತೆ ಸೀರೆ ಎಂಬ ಮಾತಿನಂತೆ ನೃತ್ಯದಲ್ಲಿ ಗುರುವಿನಂತೆ ಆಸಕ್ತಿ, ತುಡಿತ, ತೊಡಗಿಸಿಕೊಳ್ಳುವಿಕೆ ಅನೂಚಾನವಾಗಿ ಬಂದಿದೆ. ಭಾರತನಾಟ್ಯದಲ್ಲಿ ಎನ್ನಾದರೂ ಸಾಧಿಸಬೇಕು ಮತ್ತು ನೃತ್ಯದ ಬಗ್ಗೆ ಹೆಚ್ಚಿನ ಜ್ಞಾನ ಎಲ್ಲರಿಗೂ ದೊರೆಯಲಿ ಎಂಬ ಉತ್ಕಟವಾದ ಹಂಬಲವೇ ಈ ಕಾರ್ಯಾಗಾರದ ಉದ್ದೇಶವಾಗಿದೆ.