ಬೆಂಗಳೂರು : ಹಿರಿಯ ಪತ್ರಕರ್ತ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ದೇವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ದಿನಾಂಕ 24-04-2024ರಂದು ಬೆಳಗ್ಗೆ ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಹುಟ್ಟೂರು ಚೌಡದೇವನಹಳ್ಳಿಯಲ್ಲಿ ಸಂಜೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು.
ಮೂಲತಃ ಕೋಲಾರ ಜಿಲ್ಲೆಯ ಚೌಡದೇವನಹಳ್ಳಿಯವರಾದ ಅವರು 80 ದಶಕದಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದರು. ಪ್ರಜಾವಾಣಿ, ತಾಯಿನಾಡು, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸಲ್ಲಿಸಿದ್ದ ಸೇವೆ ಅನನ್ಯವಾದದ್ದು. ಅವರು ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಕರ್ನಾಟಕ ಪತ್ರಕರ್ತರ ಅಕಾಡೆಮಿ (ಈಗಿನ ಮಾಧ್ಯಮ ಅಕಾಡೆಮಿ)ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು.