ಪ್ರೇಕ್ಷಕರ ಮನಸೂರೆಗೊಂಡ ಲಾವಣ್ಯ ಮಕ್ಕಳ ನಾಟಕ ತಂಡ ಪ್ರದರ್ಶಿಸಿದ ‘ಜುಂ ಜುಂ ಆನೆ ಮತ್ತು ಪುಟ್ಟಿ’, ನಾಟಕದ ರಚನೆ ವೈದೇಹಿ ಹಾಗೂ ನಿರ್ದೇಶನ ಗಣೇಶ್ ಕಾರಂತ್. ಪ್ರತಿ ವರ್ಷ ಲಾವಣ್ಯ ಕಲಾ ತಂಡ ಮಕ್ಕಳಿಗಾಗಿ ನಾಟಕ ರಂಗ ತರಬೇತಿ ಶಿಬಿರವನ್ನ ಆಯೋಜಿಸುತ್ತದೆ. ಹಲವಾರು ಶಾಲೆಯ ಮಕ್ಕಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಕೂಡಿ ಕಲಿಯುವ ವಿಶೇಷ ಅನುಭವವನ್ನು ಪಡೆಯುತ್ತಾ ಕಲಿಕೆಗೆ ಪೂರಕವಾದಂತ ಸಾಕಷ್ಟು ಪಠ್ಯೇತರ ಚಟುವಟಿಕೆಗಳನ್ನು ಇಲ್ಲಿ ಪಡೆಯುತ್ತಾರೆ. ಲಾವಣ್ಯ ಬೈಂದೂರು ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ರಂಗ ತರಬೇತಿಯನ್ನು ಆಯೋಜಿಸುತ್ತಾ ಹಲವಾರು ವರ್ಷಗಳಿಂದ ಜನರ ಪ್ರೀತಿಗೆ ಪಾತ್ರವಾದ ತಂಡವಾಗಿ ಗುರುತಿಸಿದೆ. ಈ ವರ್ಷ ತರಬೇತಿಯ ಜೊತೆಯಲ್ಲೇ ಪ್ರದರ್ಶನಗೊಂಡಂತಹ ನಾಟಕ ‘ಜುಮ್ ಜುಮ್ ಆನೆ ಮತ್ತು ಪುಟ್ಟಿ’. ಮಕ್ಕಳ ನಾಟಕ ರಂಗದ ಮೇಲೆ ಮಕ್ಕಳು ಹಬ್ಬದ ರೀತಿಯಲ್ಲಿ ಆಚರಿಸಬೇಕೆನ್ನುವುದು ಖ್ಯಾತ ರಂಗ ಚಿಂತಕ ಬಿ.ವಿ ಕಾರಂತರ ಅನಿಸಿಕೆ. ಗಣೇಶ್ ಕಾರಂತರು ಮತ್ತು ಜೊತೆಯಾಗಿ ಸಹಕರಿಸಿದ ರೋಶನ್ ಬೈಂದೂರು ಇವರು ಮಕ್ಕಳ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಹೆಜ್ಜೆ, ಸಂಗೀತ ಪರಿಕರ, ಬಣ್ಣ ಮತ್ತು ವಸ್ತ್ರಲಂಕಾರ ಮುಂತಾದವುಗಳನ್ನ ರಂಗದ ಮೇಲೆ ಒದಗಿಸಿದ್ದಾರೆ. ಹತ್ತಾರು ಮಕ್ಕಳು ಕೂಡಿ ಕಲಿಯುವಾಗ ಹೊಸ ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಕಲಿಕೆಗೆ ಬೇಕಾದಂತಹ ಸುಲಭ ಮಾರ್ಗವನ್ನು ಕಂಡುಕೊಳ್ಳುತ್ತಾರೆ.ಇದು ಮಕ್ಕಳ ರಂಗಭೂಮಿಯ ವಿಶೇಷವಾದಂತಹ ಗುಣ. ಮಕ್ಕಳು ರಂಗಭೂಮಿಯಲ್ಲಿ ಕೇವಲ ನಾಟಕವನ್ನು ಮಾತ್ರ ಕಲಿಯುವುದಿಲ್ಲ ಜೊತೆಯಲ್ಲಿ ಸಾಹಿತ್ಯ, ಹಾಡು, ಕುಣಿತ, ಚಿತ್ರ ಕರಕುಶಲ ವಸ್ತುಗಳು, ಕಥೆ ಕಟ್ಟುವುದು, ಇದೆಲ್ಲವನ್ನ ಪರಸ್ಪರ ಚರ್ಚೆಯ ಮೂಲಕ ಅಭ್ಯಾಸ ಮಾಡುತ್ತಾ ಹೋಗುತ್ತಾರೆ. ಮಕ್ಕಳ ನಾಟಕ ಸಾಮಾನ್ಯವಾಗಿ ಮಕ್ಕಳು ಖುಷಿಪಟ್ಟಾಗಲೇ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಹಾಗಾಗಿ ಮಕ್ಕಳ ನಾಟಕದಲ್ಲಿ ಗಂಭೀರವಾದ ಸಾಹಿತ್ಯ ಮತ್ತು ಗಂಭೀರವಾದಂತ ನಟನೆ ಇದ್ದರೆ ಅದು ದೊಡ್ಡವರಿಗಾಗಿ ಮಕ್ಕಳ ನಾಟಕವಾಗುತ್ತದೆ. ಅದು ಮಕ್ಕಳ ಕಲಿಕೆಯ ದೃಷ್ಟಿಯಲ್ಲಿ ಉತ್ತಮ ಪರಿಣಾಮ ಬೀರುವಂತಹ ಸಂದರ್ಭಗಳು ಹುಟ್ಟಿಕೊಳ್ಳುವುದಿಲ್ಲ. ಯಾಕೆಂದರೆ ಮಕ್ಕಳು ಅನುಭವಿಸಿ ಅಭಿನಯಿಸುವ ಸಂದರ್ಭ ಬರುವುದಿಲ್ಲ. ದೊಡ್ಡವರು ಮಕ್ಕಳಿಗಾಗಿ ನಾಟಕವಾಡಬಹುದು. ಆದರೆ ಮಕ್ಕಳು ದೊಡ್ಡವರಿಗಾಗಿ ಆಡುವ ನಾಟಕ ಮಕ್ಕಳ ನಾಟಕವಾಗಿ ಉಳಿಯುವುದಿಲ್ಲ. ಜುಂ ಜುಂ ಆನೆ ಮತ್ತು ಪುಟ್ಟಿ ನಾಟಕದಲ್ಲಿ ಪ್ರಕೃತಿ ಮತ್ತು ಮನುಷ್ಯರ ನಡುವೆ ಸಂಬಂಧವನ್ನು ಬಹಳ ಹತ್ತಿರ ಮಾಡುವುದು. ಪ್ರಕೃತಿಯಲ್ಲಿನ ಎಲ್ಲಾ ಜೀವಿಗಳನ್ನು ಮನುಷ್ಯ ಪ್ರೀತಿಸುವಂತಾಗಬೇಕು ಮತ್ತು ಅವುಗಳ ಇರುವಿಕೆಗೆ ಸಹಕಾರ ನೀಡುವಂತಹ ಮನೋಭಾವವನ್ನ ಮನುಷರಲ್ಲಿ ಬೆಳೆಯಬೇಕು ಎನ್ನುವುದು ಕಥೆಯ ಮುಖ್ಯ ಅಂಶ. ಪಳಗಿಸಿದ ಆನೆಯ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಹಣವನ್ನು ಗಳಿಸುತ್ತಿದ್ದ ಮಾವುತ ತನ್ನ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ. ಪುಟ್ಟಿ ತನ್ನ ತಂದೆ ತಾಯಿ ಜೊತೆಯಲ್ಲಿರುವಾಗ ತನ್ನನ್ನು ಆನೆಯ ಮೇಲೆ ಕೂರಿಸಿ ಸುತ್ತಾಡಿಸುವಂತೆ ಹಠ ಮಾಡುತ್ತಾಳೆ. ಹಾಗೆ ಆನೆಯ ಮೇಲೆ ತಿರುಗಾಡುವಾಗ ಮಾವುತ ಆನೆಗೆ ಜೋರಾಗಿ ತಿವಿಯುತ್ತಾನೆ. ಆನೆ ಜೋರಾಗಿ ಕಿರುಚುತ್ತಾ ಸುತ್ತಲೂ ಓಡಾಡುತ್ತದೆ. ಆಗ ಅಲ್ಲಿದ್ದವರೆಲ್ಲ ಚಲ್ಲಾ ಪಿಲ್ಲೆಯಾಗಿ, ಬೇರೆ ಬೇರೆಯಾಗುತ್ತಾರೆ. ಆನೆಯೂ ಕಾಡಿನ ದಾರಿ ಹಿಡಿಯುತ್ತದೆ ಹಾಗೆ ಪುಟ್ಟಿಯೂ ಕೂಡ ಕಾಡನ್ನು ಸೇರುತ್ತಾಳೆ. ಕಾಡಿನಲ್ಲಿರುವ ಪುಟ್ಟಿಯನ್ನು ಮನುಷ್ಯರು ಗುರುತಿಸಬಾರದೆಂದು ಪುಟ್ಟಿಯ ತಲೆಗೆ ಆನೆಯ ಮುಖವಾಡವನ್ನು ಹಾಕಿ ಇಟ್ಟುಕೊಳ್ಳುತ್ತಾರೆ. ಕಾಡಿನಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳೂ ಪುಟ್ಟಿಗೆ ಸಹಾಯ ಮಾಡುತ್ತವೆ. ಊರಿನವರೆಲ್ಲ ಸೇರಿ ಪುಟ್ಟಿಯನ್ನು ಹುಡುಕುತ್ತಾರೆ. ಕೊನೆಗೆ ಕಾಡಿನಲ್ಲಿ ಪುಟ್ಟಿ ಸಿಗುತ್ತಾಳೆ. ಈ ನಾಟಕದ ಕಥೆಯನ್ನು ಕೇಳಿದಾಗ ಮಕ್ಕಳು ತುಂಬಾ ಖುಷಿಪಡುತ್ತಾರೆ. ಮಕ್ಕಳು ಖುಷಿಪಡುವಂತಹ ಕಥೆಯೇ ಮಕ್ಕಳ ನಾಟಕವಾಗಬೇಕು. ವೈದೇಹಿಯವರು ಬರೆದಿರುವ ಎಲ್ಲಾ ನಾಟಕದ ಕಥೆಗಳು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗಾಗಿ ರಂಗದ ಮೇಲೆ ರಂಜನೀಯವಾಗಿ ಮಕ್ಕಳು ಪ್ರೇಕ್ಷಕರನ್ನ ತಲುಪುತ್ತಾರೆ. ಜುಮ್ ಜುಮ್ ಆನೆ ನಾಟಕದ ಅನೇಕ ಸಂದರ್ಭಗಳಲ್ಲಿ ಹಾಸ್ಯಗಳು ಹುಟ್ಟಿಕೊಳ್ಳುತ್ತವೆ. ನಾಟಕದಲ್ಲಿ ಪ್ರತಿಯೊಂದು ಪಾತ್ರಗಳು ವಿಶಿಷ್ಟವಾಗಿ ಗುರುತಿಸಲ್ಪಡುತ್ತದೆ. ಹಾಗಾಗಿ ನಾಟಕ ಆರಂಭದಿಂದ ಕೊನೆಯವರೆಗೆ ಪ್ರೇಕ್ಷಕರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಗಣೇಶ್ ಕಾರಂತರು ಮತ್ತು ರೋಷನ್ ಇವರು ಮಕ್ಕಳ ಜೊತೆಯಲ್ಲಿ ಕೆಲಸ ಮಾಡುವುದರಿಂದ, ನಾಟಕ ಕಟ್ಟುವಾಗ ಎಲ್ಲ ರೀತಿಯ ಆಯಾಮಗಳನ್ನು ಮಕ್ಕಳು ಇಷ್ಟಪಡುವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ.. ಫ್ಯಾಂಟಸಿಯಾದ ರಂಗ ಪರಿಕರ, ರಂಗಸಜ್ಜಿಯು ರಂಗದ ಮೇಲೆ ಕಾಣುತ್ತದೆ. ಹಾಗೆ ನಾಟಕಕ್ಕೆ ಪೂರಕವಾದ ಸಂಗೀತ ಸಂಯೋಜನೆಯಾಗಿದೆ. ನಾಟಕ ಮುಗಿದರು ಪ್ರೇಕ್ಷಕರ ಮನದಲ್ಲಿ ಹಾಡು ಹಾಗೆ ಉಳಿದುಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ “ನಮಗೂ ಸ್ವಾತಂತ್ರ್ಯ ಬೇಕು” ಎನ್ನುವ ಇನ್ನೊಂದು ಕಿರು ನಾಟಕವನ್ನು ಮಕ್ಕಳು ಪ್ರದರ್ಶನ ಪ್ರದರ್ಶನ ಮಾಡಿರುತ್ತಾರೆ. ಸಾನ್ವಿ ಎಸ್. ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಮಣಿಪಾಲ. ಆನೆ ಪಾತ್ರದಲ್ಲಿ ಆದ್ಯ ಎಂ. ಬೈಂದೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ಕಳ್ಳನ ಪಾತ್ರದಲ್ಲಿ ಶ್ರೇಯ, ಚಂದ್ರನ ಪಾತ್ರದಲ್ಲಿ ರಿಷಿಕಾ, ಪೊಲೀಸ್ ಪಾತ್ರದಲ್ಲಿ ದಾಮೋದರ್ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ಮನಸ್ವಿ ಸರ್ಕಾರಿ ಮಾದರಿ ಶಾಲೆ ಉಪ್ಪುಂದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿಬಿರದ ನಾಟಕದಲ್ಲಿ ಭಾಗವಹಿಸಿದ ಪುಟಾಣಿಗಳು ಸುವಿಧಾ, ನಿಧಿ, ನಿನಾಶ್ರೀ, ತೇಜಸ್, ಸ್ಪಂದನ, ಸಾನ್ವಿ ಡಿ., ನಿಧಿ ಕೆ., ಮನ್ವಿತ್, ಸಾಗರ್, ಮನಸ್ವಿ, ವಿಕ್ಷಾ, ಅಕ್ಷರ, ಸಮೀಕ್ಷಾ, ಶ್ರಾವ್ಯ, ವೈಷ್ಣವಿ ನಾಯಕ್, ಸುರಕ್ಷಾ, ಸೃಷ್ಟಿ, ಸನ್ನಿಧಿ ಯು., ಶ್ರಾವಣಿ, ತೇಜಸ್, ಗೌತಮ್, ಪ್ರೀತಂ, ನಿತೀಶ್, ಪ್ರಣಿತ್, ತನ್ಮಯ್, ಶ್ರೀಜಿತ್, ನೇಹಾ, ಆಪ್ತ ಬಿಜೂರು, ಅದ್ವಿಕ್, ರಿತನ್ಯ, ಶಮಿಕಾ, ದೀಪಾ, ಸನ್ನಿಧಿ. ಪ್ರತೀ ಮಗು ಪ್ರತೀ ಪಾತ್ರದಲ್ಲಿ ಉತ್ತಮವಾದಂತಹ ಅಭಿನಯವನ್ನು ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ರಂಗ ತರಬೇತಿ ಶಿಬಿರಕ್ಕೆ ಪ್ರತಿ ವರ್ಷ ಪ್ರಧಾನ ಪೋಷಕರಾಗಿ ರಾಮಕೃಷ್ಣ ಶೇರುಗಾರ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ ಲಾವಣ್ಯದ ಮಕ್ಕಳ ‘ರಂಗತರಬೇತಿ ಶಿಬಿರ’ಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಹಾಗೆ ಲಾವಣ್ಯದ ಪ್ರತಿಯೊಬ್ಬ ಕಲಾವಿದರೂ ಈ ತರಬೇತಿ ನಾಟಕ ಯಶಸ್ವಿಯಾಗುವಲ್ಲಿ ಸಹಕಾರವನ್ನು ನೀಡಿರುತ್ತಾರೆ. ನಾಟಕದ ಸಂಗೀತ ಸಂಯೋಜನೆ ಮೂರ್ತಿ ಬೈಂದೂರು ಮತ್ತು ಚಂದ್ರ ಬಂಕೇಶ್ವರ, ತಬಲ ಗೋಪಾಲಕೃಷ್ಣ ಜೋಶಿ, ರಿದಮ್ ಪ್ಯಾಡ್ ಸತೀಶ್ ಆಚಾರ್ಯ, ಬೆಳಕಿನ ವಿನ್ಯಾಸವನ್ನು ರಾಮ್ ಟೈಲರ್ ಬೈಂದೂರು, ಬಿ. ನಾಗರಾಜ್ ಕಾರಂತ್ ಹಾಗೂ ಸುಮಂತ ಆಚಾರ್ ಮಾಡಿರುತ್ತಾರೆ. ಧ್ವನಿ ಉದಯ ಆಚಾರ್, ರಂಗ ಸಜ್ಜಿಕೆ, ಪರಿಕರ, ವಸ್ತ್ರಾಲಂಕಾರ ಮತ್ತು ಮುಖವರ್ಣಿಕೆ ತ್ರಿವಿಕ್ರಮ ಉಪ್ಪುಂದ ಇವರು ನಿರ್ವಹಿಸಿದ್ದಾರೆ. ಎನ್. ಶಶಾಂಕ, ಸುದರ್ಶನ, ಶ್ವೇತ, ಸಂಜನಾ ಸಹಕರಿಸಿದ್ದಾರೆ.
- ಸತ್ಯನಾ ಕೊಡೇರಿ, ರಂಗಕರ್ಮಿ
ಸತ್ಯನಾ ಕೊಡೇರಿ ನೀನಾಸಂ ಪದವೀಧರರು, ವೃತ್ತಿಯಲ್ಲಿ ಶಿಕ್ಷಕರು. ಕಳೆದ 3 ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ನಿರ್ದೇಶನಕ್ಕೆ ಪ್ರಶಸ್ತಿ ದೊರತಿದೆ.