ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕಕ್ಕೆ ವಿಶೇಷ ಸಂಭ್ರಮದ ಕ್ಷಣ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ರಾಯಭಾರಿ ಡಾ. ಮುರಲೀ ಮೋಹನ್ ಚೂಂತಾರ್ ಇವರ ಮನೆ ‘ಸರೋಜಿನಿ’ಯಲ್ಲಿ ‘ಜೂರಿಕ್ ನಲ್ಲಿ ಕನ್ನಡ ಡಿಂಡಿಮ’ ಎಂಬ ಸಂಭ್ರಮದ ಕಾರ್ಯಕ್ರಮವನ್ನು ದಿನಾಂಕ 26 ಡಿಸೆಂಬರ್ 2024ರಂದು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಸ್ವಿಟ್ಜರ್ಲೆಂಡ್ ಜೂರಿಕ್ ಕನ್ನಡ ಕೂಟದ ಸಂಚಾಲಕರಾದ ಡಾ. ಪ್ರಭಿತಾ ಇವರು ಆಗಮಿಸಿದ್ದರು. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಗಮಿಸಿದ್ದ ಇವರು ಹಿಂತಿರುಗುವ ಹಾದಿಯಲ್ಲಿ ದ.ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಭೇಟಿ ನೀಡಿದರು. ನಗರದ ಬಿಜೈ ‘ಸರೋಜಿನಿ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿ, ಕಾರ್ಯಕ್ರಮವನ್ನು ಪ್ರಾಯೋಜಿಸಿ ಆತಿಥ್ಯ ವಹಿಸಿಕೊಂಡಿದ್ದ ಡಾ. ಮುರಲೀ ಮೋಹನ್ ಚೂಂತಾರ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ತಿನ ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಜೂರಿಕ್ ಕನ್ನಡ ಕೂಟದ ಸಂಚಾಲಕರಾದ ಡಾ. ಪ್ರಭಿತಾರವರು ಅಲ್ಲಿನ ಕನ್ನಡ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಕನ್ನಡ ಉಳಿಸಿ ಬೆಳೆಸಲು ಪರಿಷತ್ತಿನ ಸಹಕಾರ ಕೋರಿದರು. ಪರಿಷತ್ತು ವತಿಯಿಂದ ಅವರನ್ನು ಶಾಲು, ಪೇಟ, ಹಾರ, ಪುಸ್ತಕ ಸ್ಮರಣಿಕೆಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಗಳೊಂದಿಗೆ ಸಾಹಿತ್ಯ ಸಂವಾದ ನಡೆಯಿತು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ವಂದಿಸಿದರು. ಪರಿಷತ್ತಿನ ಸುಖಲಾಕ್ಷಿ ಸುವರ್ಣ, ಸನತ್ ಕುಮಾರ್ ಜೈನ್, ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ, ರವೀಂದ್ರನಾಥ್ ಕೆ.ಪಿ., ಗುರುಪ್ರಸಾದ್, ಡಾ. ರಾಜಶ್ರೀ ಮೋಹನ್, ಸಿರಿ ಮತ್ತಿತರ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.