ಮೈಸೂರು : ನಿರಂತರ ಫೌಂಡೇಷನ್ (ರಿ.) ಮೈಸೂರು ಆಯೋಜಿಸಿರುವ ಸಹಜರಂಗ 2023 ಇದರ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 14-10-2023 ಶನಿವಾರ ಸಂಜೆ 6-30ಕ್ಕೆ ಮೈಸೂರಿನ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಸಾದತ್ ಹಸನ್ ಮಾಂಟೋರವರ ಕಥೆಗಳ ಆಧಾರಿತ ಜೀವನ್ ಕುಮಾರ್ ಬಿ. ಹೆಗ್ಗೋಡು ಇವರ ನಿರ್ದೇಶನದಲ್ಲಿ ‘ಜಸ್ಟ್ ಎ ಮಿಸ್ಟೇಕ್’ ನಾಟಕ ಪ್ರದರ್ಶನಗೊಳ್ಳಲಿದೆ.
ಮತ್ತೆ ಬರುತ್ತಿದೆ ಸಹಜರಂಗ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈವಿಧ್ಯಮಯ ಚಟುವಟಿಕೆಗಳಿಗೇನು ಕೊರತೆ ಇಲ್ಲ. ವರ್ಷ ಪೂರ್ತಿ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಶ್ರಮಿಸುತ್ತಿವೆ. ಕಳೆದ ಎರಡುವರೆ ದಶಕಗಳಿಂದ
ಸಮಾಜದ ನಾನಾ ಕ್ಷೇತ್ರಗಳಲ್ಲಿ ಬದ್ಧತೆಯೊಂದಿಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಂಚೂಣಿ ಸಂಸ್ಥೆಗಳಲ್ಲಿ ನಗರದ ‘ನಿರಂತರ ಫೌಂಡೇಷನ್’ ಒಂದು. ನಿರಂತರ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ ಸ್ಪಷ್ಟ ಉದ್ದೇಶ ಮತ್ತು ಸಾಮಾಜಿಕ ಆಶಯದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಳೆದ 19 ವರ್ಷಗಳಿಂದ ಸಹಜರಂಗ ರಂಗ ತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. 1 ತಿಂಗಳ ಕಾಲ ನಡೆಯುವ ಈ ಶಿಬಿರದಲ್ಲಿ ರಂಗಭೂಮಿ ಇತಿಹಾಸ, ರಂಗ ಸಂಗೀತ, ಪರಿಸರ, ನಟನೆ, ಸಮರಕಲೆ ಸೇರಿದಂತೆ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತರಗತಿಗಳು ರೂಪುಗೊಂಡಿರುತ್ತವೆ. ನಾಡಿನ ಸಾಹಿತಿಗಳು, ವಿಷಯ ಪರಿಣಿತರು, ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರು ತರಗತಿಗಳನ್ನು ತೆಗೆದುಕೊಂಡು ಶಿಬಿರಾರ್ಥಿಗಳೊಂದಿಗೆ ಚರ್ಚೆ ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ಪ್ರಸ್ತುತ ವಿದ್ಯಮಾನಗಳ, ಆಗು ಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡು, ಇದಕ್ಕೆ ಪೂರಕವಾದ ನಾಟಕವನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಲಾಗುತ್ತದೆ. ಹಿಂದಿನ ಶಿಬಿರಗಳಲ್ಲಿ ದಾರಿ, ಭೋಮ, ಮಹಾತ್ಮರ ಪ್ರತಿಮೆ, ಇದೆ, ಇತ್ತು, ಇರುತ್ತದೆ.., ಮೆರವಣಿಗೆ ಮತ್ತು ಬರ ಅಂದ್ರೆ ಎಲ್ಲರಿಗೂ ಇಷ್ಟ, ಸಾಯೋಆಟ, ಬಹುಮುಖಿ ರಾಮಯಣ, ಗಾಂಧಿ ಆಲ್ಬಂ ಎಂಬ ನಾಟಕಗಳನ್ನು ರೂಪಿಸಿ ಪ್ರದರ್ಶನ ನೀಡಲಾಗಿದೆ. ಅಲ್ಲದೇ, ಮೈಸೂರಿನ ಪ್ರಮುಖ ಕಾಲೇಜುಗಳಲ್ಲಿ ಜಾಥಾ ಹಮ್ಮಿಕೊಂಡು ಈ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಅಷ್ಟೆ ಅಲ್ಲದೆ, ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಪ್ರದರ್ಶನ ನೀಡಲಾಗಿದೆ.
ಹಳೆಯ ಶಿಬಿರಾರ್ಥಿಗಳ ಅನಿಸಿಕೆಗಳು :
‘ಈ ಶಿಬಿರದಲ್ಲಿ ಭಾಗವಹಿಸಿದ್ದರಿಂದ ನನ್ನಲ್ಲಿದ್ದ ಕೀಳರಿಮೆಯ ಮನೋಭಾವ ಕಡಿಮೆಯಾಗಿದ್ದು, ಹೊಸ ಆಶಾಕಿರಣ ಮೂಡುವಂತಾಗಿದೆ. ನನ್ನ ಮುಂದಿನ ಜೀವನ ರೂಪಿಸಿಕೊಳ್ಳಲು ಈ ಶಿಬಿರ ಆದರ್ಶವಾಗಿದೆ.’ – ಸತೀಶ್.
‘ಬೌದ್ಧಿಕ ಚಿಂತನೆ ಬೆಳೆಸಿಕೊಳ್ಳಲು ‘ಸಹಜರಂಗ’ ಒಂದು ಒಳ್ಳೆಯ ವೇದಿಕೆ. ಈ ಶಿಬಿರದಿಂದಾಗಿ ನಾನು ರಂಗ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಲು ಕಾರಣವಾಯಿತು. ಇಲ್ಲಿ ಚರ್ಚಿಸಲಾದ ಅನೇಕ ವಿಚಾರಗಳು ನನಗೆ ಸ್ಫೂರ್ತಿ ತುಂಬಿವೆ.’ – ಸಾಗರ್.
ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಸಪ್ಟೆಂಬರ್ 20ರಿಂದ ಅಕ್ಟೋಬರ್ 15, 2023ರ ತನಕ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಪ್ರತಿದಿನ ಸಾಯಂಕಾಲ 5ರಿಂದ 8ರ ತನಕ ನಡೆಯುತ್ತದೆ. ನಿರಂತರ, ಕಾಂತರಾಜೇಅರಸ್ ರಸ್ತೆ. ಸರಸ್ವತಿಪುರಂ, ಮೈಸೂರು. ದೂರವಾಣಿ : 9980273167, 9611974424,9449271983
ಮಾಂಟೋನ ಕುರಿತು : ಕಾಶ್ಮೀರಿ ಮೂಲದವನಾದ ಮಾಂಟೋ ಹುಟ್ಟಿದ್ದು ಪಂಜಾಬಿನ ಲೂಧಿಯಾನ ಬಳಿಯ ಸಂಬ್ರಾಲಾದಲ್ಲಿ. 1912ರ ಮೇ 11ರಂದು ಹುಟ್ಟಿದ ಮಾಂಟೋ 1955ರ ಜನವರಿ 18ರಂದು ಸತ್ತಾಗ ಆತನಿಗೆ ನಲವತ್ತಮೂರು ವರ್ಷವೂ ತುಂಬಿರಲಿಲ್ಲ. ಅಷ್ಟರಲ್ಲೇ ಆತ 250ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತನ ಬದುಕು ಚಿಂತೆಗಳ ಯಾತನೆಯಿಂದ ತುಂಬಿತ್ತು.
ನಾಟಕದ ಕುರಿತು : ‘ಜಸ್ಟ್ ಎ ಮಿಸ್ಟೇಕ್’ ಮಾಂಟೋನ ‘ಒಂದು ಸಣ್ಣ ಮಿಸ್ಟೇಕ್’, ‘ತೆಗೆದು ಬಿಡು’ ಮತ್ತು ‘ಟೋಬ ಟೇಕ್ ಸಿಂಗ್’ ಕಥೆಗಳ ಆಧರಿತ ನಾಟಕ. ಭಾರತ ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೆ ಒಳಗಾದ ಮಾಂಟೋ ಆಗ ತಾನು ಕಂಡ ಕೋಮು ಗಲಭೆಗಳ ಅಮಾನವೀಯ ಕಾರ್ಯದಿಂದ ತತ್ತರಿಸಿ ಹೋದ. ಮಂಟೋ ತನ್ನ ಕಥೆಗಲ್ಲಿ ವಿಭಜನೆಯ ದುರಂತವನ್ನಷ್ಟೇ ಚಿತ್ರಿಸಲಿಲ್ಲ; ಇಡಿ ಪ್ರಕ್ರಿಯೆಯ ವಿವೇಚನಾಶೂನ್ಯ ಅಸಂಬದ್ಧತೆಯನ್ನೂ ಚಿತ್ರಿಸಿದ.
ಮಾಂಟೋಗೆ ಮಾನವನ ಕ್ರೌರ್ಯ, ಅದರ ವ್ಯಾಪ್ತಿ ತೀರ ಮನ ಕಲುಕಿತ್ತು. ಇದನ್ನು ನಾವು ಆತನ ಸಾಹಿತ್ಯದಲ್ಲಿ ಕಾಣಬಹುದು. ಮಾಂಟೋ ಒಮ್ಮೆ ಹೇಳುತ್ತಾರೆ “ಒಬ್ಬ ವ್ಯಕ್ತಿ ಸಾಯುವುದು ಸಾವು, ಲಕ್ಷಾಂತರ ಮಂದಿ ಸಾಯುವುದು ಹುಚ್ಚುತನ” ಎಂದು. ಇಂದು ನಾವು ಅದೇ ರೀತಿಯ ಒಂದು ವಿಚಿತ್ರ ಅಸ್ವಸ್ಥ ಸಮಾಜದಲ್ಲಿ ಬದುಕುತ್ತಿದ್ದೇವೆ. ದಿನಂಪ್ರತಿ ನಡೆಯುತ್ತಿರುವ ಮಾನವೀಯ ಮೌಲ್ಯಗಳ ಕಗ್ಗೊಲೆಯನ್ನು ನಾವು ಮಾಂಟೋವಿನ ಕಥೆಗಳಲ್ಲಿ ಕಾಣಬಹುದು. ಹಾಗಾಗಿ ನಿರಂತರ ಮಾಂಟೋ ಕಥೆಗಳನ್ನು ರಂಗರೂಪಕ್ಕೆ ತರಲು ಪ್ರಯತ್ನಿಸಿದೆ.
ಜೀವನ್ ಕುಮಾರ್ ಬಿ ಹೆಗ್ಗೋಡು : ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನವರು. 2002-03ನೇ ಸಾಲಿನಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮಾ ಮುಗಿಸಿ ನಂತರ ಮೈಸೂರಿನಲ್ಲಿ ಬಿ. ಡ್ರಾಮ ಪದವಿಯನ್ನು ಪೂರೈಸಿರುತ್ತಾರೆ. ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಹಾಗೂ ನೀನಾಸಂ ತಿರುಗಾಟದಲ್ಲಿ ನಾಡಿನ ಮತ್ತು ದೇಶ ವಿದೇಶದ ಖ್ಯಾತ ನಿರ್ದೇಶಕರುಗಳ ಅಭಿನಯದ ಗರಡಿಯಲ್ಲಿ ಪಳಗಿದ್ದಾರೆ. ಸಿ.ಆರ್.ಜಂಬೆ, ಕೆ.ವಿ. ಅಕ್ಷರ, ಕೆ.ಜಿ. ಮಹಬಲೇಶ್ವರ್, ವೆಂಕಟರಮಣ ಐತಾಳ್, ಪ್ರಕಾಶ್ ಬೆಳವಾಡಿ, ಬಹರುಲ್ ಇಸ್ಲಾಂ, ಅಭಿಲಾಷ ಪಿಳ್ಳೆ, ಹಾಲೆಂಡಿನ ಎವಿಲಿಯನ್ ಪೋಲೆನ್ಸ್, ಸ್ವೀಡನ್ನಿನ ರಂಗಕರ್ಮಿಗಳಾದ ಎರಿಕೆ ಬ್ರಾಸ್ಕರ್, ಮರಿಯಾ ವಿಸ್ಟಿ ಇವರುಗಳೊಂದಿಗೆ ಆಧುನಿಕ ರಂಗಭೂಮಿಯಲ್ಲಿ ನಟನ ಹೊಸ ಸಾಧ್ಯತೆಗಳ ಕುರಿತು ಅನೇಕ ನಾಟಕ ಪ್ರಯೋಗಗಳನ್ನು ಕರ್ನಾಟಕ, ಕೇರಳ, ಪ.ಬಂಗಾಳ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಹಾಗೂ ನೇಪಾಳ ರಾಷ್ಟ್ರದಲ್ಲಿ ನಟನಾಗಿ ಮತ್ತು ತಾಂತ್ರಿಕ ವಿಭಾಗದಲ್ಲಿ ಪ್ರದರ್ಶನ ನೀಡಿರುತ್ತಾರೆ.
2004ರಿಂದ 2007ರವರೆಗೆ ಮೈಸೂರಿನ ರಂಗಾಯಣದ ಮಕ್ಕಳ ರಂಗಭೂಮಿ ವಿಭಾಗದಲ್ಲಿ ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆ ಕುರಿತು ರಾಜ್ಯದ ಅನೇಕ ಶಿಕ್ಷಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಕೊಳೆಗೇರಿ ನಿವಾಸಿಗಳಿಗೆ ಶಿಕ್ಷಣ ಮಹತ್ವವನ್ನು ಕುರಿತು ಶಿಬಿರವನ್ನು ಸಂಯೋಜಿಸಿದ್ದಾರೆ. ಮೈಸೂರಿನ ಕಾರಾಗೃಹ ನಿವಾಸಿಗಳಿಗೆ ಮನಃ ಪರಿವರ್ತನ
ಶಿಬಿರದಲ್ಲಿ ಖೈದಿಗಳಿಂದಲೇ ರಂಗಪ್ರಯೋಗವನ್ನು ಪ್ರದರ್ಶಿಸಿದ್ದಾರೆ. ಈ ಪ್ರದರ್ಶನವು ಕರ್ನಾಟಕದ ಸುಮಾರು 18 ಜಿಲ್ಲೆಗಳಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆಯನ್ನು ಗಳಿಸಿದೆ. ಅಲ್ಲದೆ ಯುವಕರನ್ನು ರಂಗಭೂಮಿಗೆ ಸೆಳೆಯುವ ದೃಷ್ಟಿಯಿಂದ ಮೈಸೂರಿನ ಹೆಸರಾಂತ ರಂಗತಂಡಗಳಿಗೆ ಬೆಳಕಿನ ವಿನ್ಯಾಸಕಾರರಾಗಿ, ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಹಲವಾರು ಪೌರಾಣಿಕ, ಸಾಮಾಜಿಕ ಮತ್ತು ಸಮಕಾಲೀನ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿರುವ ಜೀ ಕನ್ನಡ ವಾಹಿನಿಯ ಡ್ರಾಮ ಜೂನಿಯರ್ ಮತ್ತು ಕಾಮಿಡಿ ಕಿಲಾಡಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.
ಮೈಸೂರಿನ ಪ್ರತಿಷ್ಠಿತ ಮ್ಯಾನ್ ಸಂಸ್ಥೆಯಲ್ಲಿ ಪರಿಸರ ಮತ್ತು ರಂಗ ಭೂಮಿ ಕುರಿತು ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಜೆಎಸ್‌ಎಸ್ ಸರಸ್ವತಿಪುರಂ ಪ್ರೌಢಶಾಲೆಯಲ್ಲಿ ರಂಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ನಿರಂತರ ರಂಗ ತಂಡಕ್ಕೆ ಮಾಂಟೋವಿನ ರಚನೆಯ ‘ಜಸ್ಟ್ ಎ ಮಿಸ್ಟೇಕ್’ ನಾಟಕವನ್ನು ನಿರ್ದೇಶಿಸಿದ್ದಾರೆ.