ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ ಆಶ್ರಯದಲ್ಲಿ ದಿನಾಂಕ 10-10-2023ರಂದು ಪುತ್ತೂರು ಬಾಲವನದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮದಿನೋತ್ಸವ ನಡೆಯಲಿದೆ. ಈ ಸಂದರ್ಭ ನೀಡಲಾಗುವ ಕೋಟ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಖ್ಯಾತ ವರ್ಣ ಚಿತ್ರಕಲಾವಿದ ಬೆಂಗಳೂರಿನ ಕೆ.ಚಂದ್ರನಾಥ ಆಚಾರ್ಯ ಆಯ್ಕೆಯಾಗಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಸಾಹಿತಿ ಡಾ.ವರದರಾಜ ಚಂದ್ರಗಿರಿ, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಹಾಗೂ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಸುಳ್ಯದ ಲಿಬರಲ್ ಅಕಾಡೆಮಿ ಆಫ್ ಎಜುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಹೆಸರಿನಲ್ಲಿ ಸ್ಥಾಪನೆಯಾದ ಶಾಶ್ವತ ನಿಧಿಯಲ್ಲಿ ಪ್ರತೀ ವರ್ಷ ಕಾರಂತ ಬಾಲವನ ಪ್ರಶಸ್ತಿ ನೀಡಲಾಗುತ್ತಿದೆ.
ಕೆ.ಚಂದ್ರನಾಥ ಆಚಾರ್ಯ :
ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಅಪಾರವಾಗಿ ಪ್ರಭಾವಿತರಾದ ಚಂದ್ರನಾಥ ಆಚಾರ್ಯರು, ಮಹಾನ್ ಕಲಾವಿದ ಆರ್.ಎಂ. ಹಡಪದರ “ಕೆನ್ ಸ್ಕೂಲ್ ಆಫ್ ಆರ್ಟ್”ಗೆ ಸೇರಿದ್ದು ಅವರ ಬದುಕಿನ ಬಹು ಮುಖ್ಯ ಅಧ್ಯಾಯವಾಯಿತು. ಚಂದ್ರನಾಥ ಆಚಾರ್ಯರ ಕಲೆಗಳಲ್ಲಿ ಪೌರಾಣಿಕ, ತಾಂತ್ರಿಕ ಹಾಗೂ ಸಾಮಾಜಿಕಕ್ಕೆ ಸಂಬಂಧಿಸಿದಂತೆ, ಜನ ಸಾಮಾನ್ಯರಿಂದ ಕಲಾಶ್ರೇಷ್ಠರವರೆಗೆ, ಎಲ್ಲರೂ ತಲೆದೂಗುವಂತಹ ಸರಳ ರೇಖೆಗಳ, ಆಕರ್ಷಕ ಬಣ್ಣಗಳ ಭಾರತೀಯ ಶೈಲಿಯ ಚಿತ್ರಗಳು ಮತ್ತು ವಿಶಿಷ್ಟ ವರ್ಣ ಸಂಯೋಜನೆಗಳು ಕಂಡುಬರುತ್ತವೆ. ಭಾರತೀಯ ಕಲೆ, ಪಾಶ್ಚಾತ್ಯ ನವ್ಯಕಲೆಯ ಸಮ್ಮಿಶ್ರಣದ ಕಲಾಕೃತಿಗಳು, ತೈಲವರ್ಣ, ಜಲವರ್ಣ, ಅಕ್ರಾಲಿಕ್, ಪೆನ್ಸಿಲ್ ಮಾಧ್ಯಮಗಳು ಹೀಗೆ ಎಲ್ಲ ನಮೂನೆಗಳಲ್ಲೂ ಚಂದ್ರನಾಥ ಆಚಾರ್ಯರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಮಹತ್ವದ ಏಕವ್ಯಕ್ತಿ ಕಲಾಪ್ರದರ್ಶನ ಮತ್ತು ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇವರ ಕಲಾ ಸಾಧನೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕಲಾಲೋಕದಲ್ಲಿನ ಶ್ರೇಷ್ಠ ಸಾಧನೆಗಾಗಿ ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ ಅಲ್ಲದೆ ಹಲವಾರು ಗೌರವ ಪುರಸ್ಕಾರಗಳು ಇವರನ್ನರಸಿ ಬಂದದ್ದು ವರ್ಣಚಿತ್ರ ಕಲಾವಿದನಾಗಿ ಇವರ ಸಮರ್ಪಣಾ ಭಾವದ ಶ್ರಮಕ್ಕೆ ಸಂದ ಗೌರವ.