ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕೃಷ್ಣ ಭಟ್ ಮತ್ತು ಗಂಗಮ್ಮ ದಂಪತಿಗಳ ಸುಪುತ್ರಿಯಾಗಿರುವ ಕೆ. ಜಯಲಕ್ಷ್ಮೀ ಕುಮಾರ್ ಇವರು ಎಂ.ಎ. ಬಿ.ಇಡಿ. ಪದವೀಧರರಾಗಿದ್ದಾರೆ. ಪ್ರಸ್ತುತ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಡುಗಾರಿಕೆ, ಲೇಖನ, ಕಥೆ, ಕವನ, ನಾಟಕ ಇತ್ಯಾದಿಗಳನ್ನು ಬರೆಯುವುದು ಇವರ ಹವ್ಯಾಸ. ಕಾರ್ಯಕ್ರಮ ನಿರೂಪಣೆ, ಭಾಷಣ ಕಲೆಗಾರಿಕೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಇವರು ಬರೆದ ‘ಯಾರು ಹಿತವರು ನಿನಗೆ’ ನಾಟಕ ಹಲವು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ‘ನೆನಪುಗಳ ಸುಳಿಯಲ್ಲಿ’ ನಾಟಕವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಹಲವಾರು ವೇದಿಕೆಗಳಲ್ಲಿ ಅಭಿನಯಿಸಿರುತ್ತಾರೆ. ಮಡಿಕೇರಿ ಆಕಾಶವಾಣಿಯಲ್ಲಿ ಕ್ಯಾಶುವಲ್ ಅನೌನ್ಸರ್ ಆಗಿ ಕೆಲಸ ಮಾಡಿದ್ದಾರೆ.
ಭಾವಯಾನ ಸರಣಿ ಕಾರ್ಯಕ್ರಮದ ಜೊತೆಗೆ ಚಿಂತನೆಗಳು, ಸಂದರ್ಶನಗಳು, ಮಹಿಳಾ ಲೋಕದಲ್ಲಿ ಕಥೆ. ಕವನ, ವೈಚಾರಿಕ ಪ್ರಬಂಧಗಳು ಭಿತ್ತರಗೊಂಡಿವೆ. ಇವರು ಬರೆದು ರಾಗ ಸಂಯೋಜನೆ ಮಾಡಿರುವ ಮೂರು ಹಾಡುಗಳು ದ್ವನಿ ಸುರುಳಿಯಲ್ಲಿ ಮೂಡಿ ಬಂದಿದೆ. ತಮ್ಮ ‘ಪ್ರಜ್ಞಾ ಕಲಾ ಕೇಂದ್ರ’ ಎಂಬ ಸಾಂಸ್ಕೃತಿಕ ಸಂಸ್ಥೆಯ ಮೂಲಕ ಬಂಗಾರುಮಕ್ಕಿ, ಮಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೊಡವ ಸಂಸ್ಕೃತಿಯ ಕುರಿತಾದ ಪ್ರಬಂಧವನ್ನು ಮಂಡಿಸಿದ್ದಾರೆ. ಸಂಗೀತ, ನೃತ್ಯ, ಕಥೆ. ಪ್ರಬಂಧಗಳ ಕಲಿಕೆಗಾಗಿ ಸ್ಥಳೀಯ ಮಕ್ಕಳು ಮನೆಯಲ್ಲಿ ನೆರೆದಿರುತ್ತಾರೆ. ಸಮರ್ಥ ಕನ್ನಡಿಗರು (ನೋಂ.) ಸಂಸ್ಥೆಯ ಜಿಲ್ಲಾ ಸಂಚಾಲಕಿಯಾಗಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿರುವುದಲ್ಲದೆ ಇದುವರೆಗೂ 40ಕ್ಕೂ ಹೆಚ್ಚು ಕೊಡಗಿನ ಸಾಧಕರನ್ನು ಗುರುತಿಸಿ ಗೌರವಾರ್ಪಣೆ ಸಲ್ಲಿಸುವ ಕಾರ್ಯವನ್ನೂ ಮಾಡಿರುತ್ತಾರೆ. ಕರ್ನಾಟಕ ಜಾನಪದ ಪರಿಷತ್ತು ಕೊಡಗು ಜಿಲ್ಲೆ ಸಂಸ್ಥೆಯ ಸಂಚಾಲಕಿಯಾಗಿ ಸಕ್ರಿಯ ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನ ಸಾಹಿತ್ಯ ಚಿಗುರು ಬಳಗದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮೈಸೂರಿನ ಲೇಖಕಿಯರ ಬಳಗವು ನಡೆಸಿದ ರಾಜ್ಯ ಮಟ್ಟದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೆಂಗಳೂರಿನ ಬಸವೇಶ್ವರ ಬಳಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ಹಾಸನ ಮಹಿಳಾ ಲೇಖಕಿಯರ ಬಳಗದ ಕವನ ಸ್ಪರ್ಧೆಯಲ್ಲಿ ದ್ವಿತೀಯ, ಮಂಡ್ಯದ ರಾಜ್ಯ ಮಟ್ಟದ ಕುವೆಂಪು ವಿಚಾರಧಾರೆ – ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಶಿವಮೊಗ್ಗದಲ್ಲಿ ನಡೆದ ಯುವ ಮೇಳದಲ್ಲಿ ಶಾಸ್ತ್ರೀಯ ಗಾಯನ ವಿಭಾಗದಲ್ಲಿ ದ್ವಿತೀಯ ಹೀಗೆ ಹಲವಾರು ಸಂಘ ಸಂಸ್ಥೆಗಳ ಸ್ಪರ್ಧೆಗಳಲ್ಲಿ ಬಹುಮಾನಗಳು ಹಾಗೂ ಶಿಕ್ಷಕರಿಗಾಗಿ ಏರ್ಪಡಿಸಿದ ಆಶುಭಾಷಣ, ಏಕಪಾತ್ರಾಭಿನಯ, ಗಾಯನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಜಮಾತೆ ಇಸ್ಲಾಮಿ ಹಿಂದ್ ನಡೆಸಿದ್ದ ಅಂತರಾಷ್ಟ್ರೀಯ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 2019ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ‘ಗೆಜ್ಜೆ ಸಂಗಪ್ಪ’ ಆಶ್ರಯ ತಾಣದಲ್ಲಿದ್ದು, 21 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಾರೆ.
ಕಾಲೇಜಿನಲ್ಲಿ ಕನ್ನಡ ಉಪನ್ಯಾಸದ ಜೊತೆಗೆ ಕನ್ನಡ ಪರ ಚಟುವಟಿಕೆಗಳಿಗೆ ಮಕ್ಕಳನ್ನು ಸದಾ ಪ್ರೇರೇಪಿಸಿ ಪ್ರೋತ್ಸಾಹಿಸುತ್ತಾರೆ. 2023ರ ಮೇ ತಿಂಗಳಲ್ಲಿ ಮುಂಬಯಿಯ ಕನ್ನಡ ಬಳಗದಲ್ಲಿ ಲೋಕಾರ್ಪಣೆಗೊಂಡ ದಿ. ಚಂದ್ರಶೇಖರ್ ರಾವ್‌ರವರ ‘ಹರಟೆ’ ಕೃತಿ ಬಿಡುಗಡೆ ಮಾಡಿ ಮಾತಾಡಿದ್ದಾರೆ. ಇವರ ಲೇಖನಗಳು, ಕಥೆಗಳು, ಕವನಗಳು ಶಕ್ತಿ, ಆಂದೋಲನ, ಮೈಸೂರು ಮಿತ್ರ, ಪ್ರಜಾಸತ್ಯ, ಕಾವೇರಿ ಟೈಮ್ಸ್ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಇತ್ತೀಚಿಗಷ್ಟೇ ಇವರ ಕಿರು ಲೇಖನಗಳ ಸಂಗ್ರಹ ‘ಚಪ್ಪಾಳೆಗೂ ಬೆಲೆ ಇದೆ’ ಎಂಬ ಕೃತಿಯನ್ನು ರಚಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಇವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ‘ದಿ ಬೆಸ್ಟ್ ಲೆಕ್ಚರರ್ ಅವಾರ್ಡ್’, ರೋಟರಿ ವತಿಯಿಂದ ‘ನೇಷನ್ ಬಿಲ್ಡರ್ ಅವಾರ್ಡ್’, ವಿಶ್ವ ವಚನ ಫೌಂಡೇಶನ್ ವತಿಯಿಂದ ‘ಚಿನ್ಮಯ ಜ್ಞಾನಿ’ ಅವಾರ್ಡ್, ಸಿರಿಕನ್ನಡ ಸಂಸ್ಥೆ ವತಿಯಿಂದ ‘ಕನ್ನಡ ರತ್ನ’ ಅವಾರ್ಡ್, ಶಿವಮೊಗ್ಗದ ಶಿಕ್ಷಣ ಜ್ಞಾನ ಸಮಾವೇಶದಲ್ಲಿ ‘ಜ್ಞಾನ ಸಂಜೀವಿನಿ ಅವಾರ್ಡ್’ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.
“ನವಜಾತ ಶಿಶುವಿಗೆ ಮಾತೆಯ ಎದೆಹಾಲು ಎಷ್ಟು ಶ್ರೇಷ್ಠವೋ ಮಾತೃ ಭಾಷೆಯು ಮನುಜನಿಗೆ ಅಷ್ಟೇ ಶ್ರೇಷ್ಠ. ಇಂದಿನ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಕುಂಠಿತಗೊಳ್ಳದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿಯನ್ನು ಶಿಕ್ಷಕರು, ಪೋಷಕರು, ಸಂಘ ಸಂಸ್ಥೆಗಳು ನಿಭಾಯಿಸಬೇಕಾಗಿದೆ. ಕನ್ನಡಪರ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಕನ್ನಡ ಪುಸ್ತಕಗಳನ್ನು ಕೊಂಡು ಓದುವುದು, ಇತ್ಯಾದಿಗಳನ್ನು ಕನ್ನಡಿಗರು ಮಾಡಿದಾಗ ಕನ್ನಡ ಭಾಷೆ ಬಲಿಯುತ್ತದೆ” ಎಂದು ಇಂದಿನ ಸಾಹಿತ್ಯಾಸಕ್ತರಿಗೆ ಕಿವಿಮಾತು ಹೇಳುತ್ತಾರೆ.
ಪತಿ ಜಯಕುಮಾರ್, ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆಗಳಿಗೆ ಸದಾ ಸ್ಫೂರ್ತಿ ನೀಡುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮಗ ಮೋನಿಶ್ ಸಾಂಸ್ಕೃತಿಕ ಕ್ಷೇತ್ರದ ‘ಅಸಾಧಾರಣ ಪ್ರತಿಭೆ’ ಪ್ರಶಸ್ತಿ ಪುರಸ್ಕೃತ, ಮಗಳು ಮೌನ ರಾಜ್ಯ ಮಟ್ಟದ ‘ಕಲಾ ಶ್ರೀ’ ಪ್ರಶಸ್ತಿ ವಿಜೇತೆಯಾಗಿದ್ದಾರೆ. ಮಡಿಕೇರಿಯ ಡೈರಿ ಫಾರ್ಮ್ ನ ನಿಸರ್ಗ ಬಡಾವಣೆಯ ‘ಹೇರಂಬ’ದಲ್ಲಿ ವಾಸವಾಗಿರುವ ಇವರ ಮುಂದಿನ ಬದುಕು ಮತ್ತಿತರ ಚಟುವಟಿಕೆಗಳು ಇನ್ನಷ್ಟು ಜನಾನುರಾಗಿಯಾಗಲೆಂದು ಹಾರೈಸೋಣ.
ವೈಲೇಶ ಪಿ.ಎಸ್., ಬೋಯಿಕೇರಿ, ವಿರಾಜಪೇಟೆ, ಕೊಡಗು. 88614 05738