ಕೋಲಾರ ವೆಂಕಟೇಶ ಅಯ್ಯರ್ ಇವರು ಕೆ.ವಿ.ಅಯ್ಯರ್ ಎಂದೇ ಪ್ರಸಿದ್ಧಿ ಪಡೆದ ಕನ್ನಡ ನಾಡು ಕಂಡ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಬಂದವರು. 1898 ಜನವರಿ 8 ರಂದು ಕೋಲಾರ ಜಿಲ್ಲೆಯ ದೇವರಾಯ ಸಮುದ್ರ ಎಂಬಲ್ಲಿ ಇವರ ಜನನವಾಯಿತು.
ಪ್ರೌಢ ಶಿಕ್ಷಣ ಪಡೆದ ನಂತರ ಬಡತನದದಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದು ವಿಷಾದದ ಸಂಗತಿ. ಉತ್ತಮ ವ್ಯಾಯಾಮ ಶಿಕ್ಷಕರಾದ ಇವರು ಛಾಯಾಗ್ರಹಕರು, ರೇಡಿಯೋ ರಿಪೇರಿ ಇತ್ಯಾದಿಗಳಲ್ಲಿ ನಿಪುಣರು. ನಾಟಕದಲ್ಲಿ ಆಸಕ್ತಿ ಹೊಂದಿರುವ ಇವರು “ರವಿ ಕಲಾವಿದರು” ಎನ್ನುವ ನಾಟಕ ಸಂಸ್ಥೆಯ ಅಧ್ಯಕ್ಷರಾಗಿ ದುಡಿದರು. ದೇಹದಾರ್ಢ್ಯತೆಯಲ್ಲಿ ಸ್ವತಃ ಆಸಕ್ತಿಯಿರುವ ಕಾರಣ ವ್ಯಾಯಾಮ ಶಾಲೆ ನಡೆಸುತ್ತಿದ್ದರು ಇವರ ವ್ಯಾಯಾಮ ಶಾಲೆಗೆ ಮಹಾರಾಜ ಕೃಷ್ಣರಾಜ ಒಡೆಯರು ಮಾತ್ರವಲ್ಲದೆ, ಟಿ.ಪಿ. ಕೈಲಾಸಮ್ ಬಂದು ಮಾರ್ಗದರ್ಶನ ನೀಡುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲ್ಯದಲ್ಲಿ ಹೋಟೆಲುಗಳಲ್ಲಿ ಇಡ್ಲಿ ದೋಸೆ ಹಿಟ್ಟನ್ನು ದೊಡ್ಡ ಗಾತ್ರದ ರುಬ್ಬುಕಲ್ಲಲ್ಲಿ ರುಬ್ಬುತ್ತಿದ್ದು, ಅಡುಗೆಗೆ ಬೇಕಾದ ಭಾರಿ ಗಾತ್ರದ ನೂರಾರು ಕೊಡ ನೀರನ್ನು ಹೆಗಲಲ್ಲಿ ಹೊತ್ತು ತರುತ್ತಿದ್ದರು. ಇವರ ದೈಹಿಕ ಶ್ರಮ ವನ್ನು ಕಂಡ ಹೋಟೆಲ್ ಮಾಲೀಕರೊಬ್ಬರು ಇವರನ್ನು ವ್ಯಾಯಾಮ ಶಾಲೆಗೆ ಸೇರಿಸಿದ್ದು ಇವರ ಜೀವನಕ್ಕೆ ಸಿಕ್ಕ ದೊಡ್ಡ ತಿರುವು. ಇಲ್ಲಿ ತರಬೇತಿ ಪಡೆದು, ತಾನೇ ಸ್ವತಹ ವ್ಯಾಯಾಮ ಶಾಲೆ ಸ್ಥಾಪಿಸಿದ್ದು ಅಯ್ಯರ್ ಅವರ
ಸಾಧನೆ, ಬದ್ಧತೆ, ಛಲಗಳಿಗೆ ಸಾಕ್ಷಿಯಾಗಿದೆ.
ಆಯತಪ್ಪಿ ಚರಂಡಿಗೆ ಬಿದ್ದ ಎತ್ತಿನ ಗಾಡಿಯೊಂದಿಗಿದ್ದ ಎತ್ತು ಅಸಹಾಯಕ ಸ್ಥಿತಿಯಲ್ಲಿದ್ದಾಗ ಮನೆಯಿಂದ ನೀರು ಸೇರುವ ದಪ್ಪ ಹಗ್ಗ ತಂದು ಬಲವನ್ನೆಲ್ಲ ಸೇರಿಸಿ “ಜೈ ಭಜರಂಗಬಲಿ” ಎನ್ನುತ್ತಾ ಚರಂಡಿಯಿಂದ ಎತ್ತನ್ನು ಮೇಲಕ್ಕೆತ್ತಿ ರಸ್ತೆಯ ಮೇಲೆ ಇಳಿಸಿದ್ದು ಇವರ ದೇಹದಾಢ್ಯತೆಗೆ ಉತ್ತಮ ನಿದರ್ಶನವಾಗಿದೆ.
ಭಾರತೀಯ ಸಂಗೀತದ ಬೇರೆ ಬೇರೆ ಪ್ರಕಾರಗಳ ಅನುಭವಿದ್ದ ಅಯ್ಯರ್, ರಂಗ ಗೀತೆಗಳನ್ನು ಕಂಠಪಾಠ ಮಾಡಿ ನಿರರ್ಗಳವಾಗಿ ಹಾಡುತ್ತಿದ್ದರು. ರಾಮಕೃಷ್ಣ ಪರಮಹಂಸರಲ್ಲಿ ಅಪಾರ ಭಕ್ತಿ ಹೊಂದಿದ ತಾನು ಜೀವನದಲ್ಲಿ ಗಳಿಸಿದ್ದನ್ನೆಲ್ಲ ಶ್ರೀರಾಮಕೃಷ್ಣ ಆಶ್ರಮಕ್ಕೆ ದಾನ ಮಾಡಿದವರು.
ಇವರ ರಚನೆಯ “ಶಾಂತಲಾ” ಒಂದು ಅದ್ವಿತೀಯ ಹಾಗೂ ಬಹಳಷ್ಟು ಕನ್ನಡಿಗರು ಓದಿದ ಕೃತಿ. ಇದರ “ಕುವರ ವಿಷ್ಣುವಿನ ಕನಸು” ಎಂಬ ಒಂದು ಅಧ್ಯಾಯ ಎಂಬತ್ತರ ದಶಕದಲ್ಲಿ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಂಡು ಪಠ್ಯವಾಗಿತ್ತು. ಕನ್ನಡ ನಾಡು ನುಡಿಯ ವಿವಿಧ ರೀತಿಯ ವರ್ಣನೆಯ ಸೌಂದರ್ಯ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿದೆ. ಡಾಕ್ಟರ್ ರಾಜಕುಮಾರ್ ಅಭಿನಯದಲ್ಲಿ “ಶಾಂತಲಾ” ಕಾದಂಬರಿಯನ್ನು ಚಲನಚಿತ್ರಕ್ಕೆ ತರಬೇಕೆಂಬುದು ಅಯ್ಯರ್ ಇವರ ಬಹುದೊಡ್ಡ ಆಸೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ನಡೆಯಲಿಲ್ಲ. ಡೈಜೆಸ್ಟ್ ನಲ್ಲಿ ಬಂದ ಒಂದು ಸಣ್ಣ ಸುದ್ದಿಯ ತುಣುಕಿನಿಂದ ಪ್ರೇರಿತಗೊಂಡು ಬರೆದ ಕಾದಂಬರಿಯೇ “ರೂಪದರ್ಶಿ”. “ಲೀನಾ”ಅವರ ಲೇಖನಿಯಿಂದ ಮೂಡಿ ಬಂದ ಇನ್ನೊಂದು ಮೌಲ್ಯಯುತ ಕಾದಂಬರಿ. “ಸಮುದ್ಯತಾ” ಕಥಾ ಸಂಕಲನ. ದೈಹಿಕ ಶಿಕ್ಷಣದ ಕುರಿತು ಉತ್ತಮ ಮಾಹಿತಿ ಕೊಡುವ ಹಲವಾರು ಕೃತಿಗಳ ರಚನೆಯೂ ಇವರಿಂದಾಗಿದೆ.
ಇವರ ಸತ್ವಪೂರ್ಣ ಸಾಹಿತ್ಯ ರಚನೆಗೆ 1979ರಲ್ಲಿ “ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”, ಮತ್ತು” 1994 ರಲ್ಲಿ ಪ್ರೊಫೆಸರ್ ಕೆ.ವಿ. ಅಯ್ಯರ್ ಸ್ಮರಣಾರ್ಥ ಗ್ರಂಥವೂ ಪ್ರಕಟಗೊಂಡಿದೆ. ಸಾಹಿತ್ಯದ ಮೂಲಕ ಓದುಗರ ಮನೆ ಮನ ಪ್ರವೇಶಿಸಿದ ಕೆ.ವಿ.ಅಯ್ಯರ್ 3 ಜನವರಿ 1980 ರಂದು ತಮ್ಮ 82 ನೆಯ ವಯಸ್ಸಿನಲ್ಲಿ ದೈವಾಧೀನರಾದರು.
– ಅಕ್ಷರೀ