ಕಾರ್ಕಳ : ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ತಿಂಗಳ ಉಪನ್ಯಾಸ ಮಾಲೆ’ ಕಾರ್ಯಕ್ರಮವು ದಿನಾಂಕ 13-01-2024 ರಂದು ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರಾಗಿರುವ ಪ್ರೊ. ರಾಮಚಂದ್ರ ಜಿ. ಭಟ್ “ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ವಿಜ್ಞಾನದ ವಿವರಣೆಯೊಂದಿಗೆ ಕರಾರುವಕ್ಕಾಗಿ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಅಲ್ಲಿರುವ ವಿವರಣೆಗಳು ವೈಜ್ಞಾನಿಕವಾಗಿಯೂ ಸತ್ಯ ಎಂಬುದು ಸಾಬೀತಾಗಿದೆ.” ಎಂದು ತಿಳಿಸಿದರು.
ವೇದ ಮೂಲವಾಗಿ 108 ಉಪನಿಷತ್ತುಗಳಿದ್ದರೂ ಅದರಲ್ಲಿ ವೇದಮಂಥನದಿಂದ ರೂಪತಾಳಿದ ದಶ ಉಪನಿಷತ್ತುಗಳು ಮುಖ್ಯವಾಗಿರುವಂಥಾದ್ದು. ಉಪನಿಷತ್ತುಗಳಲ್ಲಿ ವಿದ್ಯೆಯ ಬಗ್ಗೆ ವಿಶೇಷ ಉಲ್ಲೇಖವಿದ್ದು ಇಂತಹ ಉಪನಿಷತ್ತುಗಳು ಇಂದು ಪ್ರವಚನಕ್ಕಷ್ಟೇ ಸೀಮಿತವಾಗಿದ್ದು ಶಿಕ್ಷಣದಲ್ಲಿಯೂ ಇದು ಸೇರ್ಪಡೆಗೊಂಡು ಎಲ್ಲರೂ ಇದನ್ನು ಅಧ್ಯಯನ ನಡೆಸಿ ತಮ್ಮ ಜೀವನವನ್ನು ಉತ್ತಮಗೊಳಿಸಬಹುದು ಎಂಬುದಾಗಿಯೂ ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಬಿ.ಭಾಸ್ಕರ ರಾವ್ ಅವರ ‘ಮನುಸ್ಮೃತಿ – ಒಂದು ವಿಶೇಷ ಕೃತಿ’ ಅನ್ನುವ ಪುಸ್ತಕವನ್ನು ಪ್ರೊ. ರಾಮಚಂದ್ರ ಜಿ.ಭಟ್ ಅವರು ಲೋಕಾರ್ಪಣೆಗೊಳಿಸಿದರು. ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಮತ್ತು ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾನಂದ ನಾರಾವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಾಲತಿ ಜಿ.ಪೈ ಕಾರ್ಯಕ್ರಮ ನಿರೂಪಿಸಿ, ಮಿತ್ರಪ್ರಭಾ ಹೆಗ್ಡೆ ವಂದಿಸಿದರು.