ಬದಿಯಡ್ಕ : ಮಂಗಳೂರು ರಥಬೀದಿಯಲ್ಲಿರುವ ‘ಕಡಬ ಸಂಸ್ಮರಣಾ ಸಮಿತಿ’ಯ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನದಲ್ಲಿ ಮೆರೆದು ಖ್ಯಾತರಾಗಿ ಆಗಲಿದ ದಿ. ಕಡಬ ನಾರಾಯಣ ಆಚಾರ್ಯ ಮತ್ತು ದಿ. ಕಡಬ ವಿನಯ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31 ಆಗಸ್ಟ್ 2025ರಂದು ಎಡನೀರು ಮಠದಲ್ಲಿ ನಡೆಯಿತು.
ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ದಂಪತಿಗೆ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ರಜತ ಪದಕದೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅರ್ಪಿಸಿ ಗೌರವಿಸಲಾಯಿತು. ಈ ವೇಳೆ ಕಡಬ ಸಂಸ್ಮರಣಾ ಸಮಿತಿ ಪದಾಧಿಕಾರಿಗಳು ಮತ್ತು ಕಡಬ ಕುಟುಂಬದವರು ಉಪಸ್ಥಿತರಿದ್ದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಿ “ಕಡಬ ಪ್ರಶಸ್ತಿ ಪಡೆದ ದಿನೇಶ್ ಅಮ್ಮಣ್ಣಾಯರಿಗೆ ಇನ್ನಷ್ಟು ಕಲಾ ಸೇವೆ ಮಾಡುವ ಯೋಗ ಭಾಗ್ಯ ಒದಗಲಿ” ಎಂದು ಆಶಿಸಿದರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ ಉದ್ಘಾಟಿಸಿ “ದಕ್ಷಿಣ ಕನ್ನಡ ಸಹಿತ ಕರಾವಳಿಯಲ್ಲಿ ಇತ್ತೀಚಿನ ಗಣೇಶೋತ್ಸವ ಸಂದರ್ಭಗಳಲ್ಲಿ ರಾತ್ರಿ 10ರ ಬಳಿಕ ಯಕ್ಷಗಾನ ಪ್ರದರ್ಶನದ ಧ್ವನಿ ವರ್ಧಕ ಬಳಕೆ ನಿಷೇಧಿಸಿರುವುದು ವಿಷಾದಕರ ಮತ್ತು ಆಘಾತಕಾರಿ ಬೆಳವಣಿಗೆ. ಧ್ವನಿವರ್ಧಕ ನಿಯಂತ್ರಣ ಕಾನೂನು ಕಾಯಂ ಆದರೆ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಲಿದೆ. ಶಿಸ್ತಿನ ಬದುಕಿನಿಂದ ಆರೋಗ್ಯ ಸಾಮರ್ಥ್ಯ ಕಾಪಾಡಿಕೊಂಡರೆ ಮಾತ್ರ ಕಲಾವಿದರಿಗೆ ಸುದೀರ್ಘ ರಂಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ” ಎಂದರು. ತಾಳಮದ್ದಳೆ ಕ್ಷೇತ್ರದ ಖ್ಯಾತ ಅರ್ಥಧಾರಿ, ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿ “ಯಕ್ಷಗಾನ ರಂಗದಲ್ಲೇ ಅತ್ಯಪೂರ್ವ ನಿಷ್ಠೆ, ಶಿಸ್ತು ಮತ್ತು ರಂಗದಲ್ಲಿ ಭಾವ ತರಂಗವನ್ನೆಬ್ಬಿಸುವ ಅಪರೂಪದ ಭಾಗವತ ದಿನೇಶ ಅಮ್ಮಣ್ಣಾಯರು” ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಕಡಬದ್ವಯರ ಸಂಸ್ಮರಣಾ ಭಾಷಣ ಮಾಡಿದರು. ಮಂಗಳೂರು ಕಡಬ ಸಂಸ್ಮರಣಾ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಕೀಲ ಶ್ರೀಧರ ಶೆಟ್ಟಿ ಪುಳಿಂಚ, ಮೂಲ್ಕಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ, ಆರ್.ಎಸ್.ಎಸ್. ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪಿ. ಭಂಡಾರಿ, ಕಟಪಾಡಿ ಆನೆಗುಂದಿ ಪೀಠದ ಪ್ರಧಾನ ಕಾವ್ಯದರ್ಶಿ ಎಂ.ಬಿ. ಲೋಕೇಶ ಆಚಾರ್ಯ ಪಾಲ್ಗೊಂಡರು, ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು. ಸಂಸ್ಮರಣಾ ಸಮಿತಿ ಕಾರ್ಯದರ್ಶಿ ಗಿರೀಶ್ ಕಾವೂರು ಸ್ವಾಗತಿಸಿ, ಸಮಿತಿ ಗೌರವಾಧ್ಯಕ್ಷ ಜಿ.ಟಿ. ಆಚಾರ್ಯ ಮುಂಬಯಿ ಪ್ರಾಸ್ತಾವಿಕ ಮಾತನಾಡಿದರು. ಜತೆ ಕಾರ್ಯದರ್ಶಿ ಜಗದೀಶ್ ಬೇಲಾಡಿ ವಂದಿಸಿದರು. ವಾದಿರಾಜ ಕಲ್ಲೂರಾಯ ಕನ್ನಿಕಂಬಳ ಕಾರ್ಯಕ್ರಮ ನಿರೂಪಿಸಿದರು.