ಶಿರ್ವ : ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಐದನೆಯ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಸ್ಮರಣ ಸಂಚಿಕೆ ‘ಕಡಲು’ ಇದರ ಲೋಕಾರ್ಪಣೆ ಸಮಾರಂಭವು ದಿನಾಂಕ 01-03-2024ರಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ “ಕನ್ನಡ ಪರಿಶುದ್ಧವಾದ ಶ್ರೀಮಂತ ಭಾಷೆಯಾಗಿದ್ದು, ಬರೆದ ಹಾಗೆಯೇ ಓದುವ ಭಾಷೆಯಾಗಿದೆ. ಅಲ್ಪಪ್ರಾಣ, ಮಹಾಪ್ರಾಣದಲ್ಲಿ ವ್ಯತ್ಯಾಸ ಆದರೂ ಬೇರೆಯೇ ಅರ್ಥವನ್ನು ಕೊಡುತ್ತದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು.” ಎಂದು ನುಡಿದರು.
ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ “ಹೊಸ ತಾಲೂಕುಗಳ ರಚನೆಯ ಬಳಿಕ ಸತತ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ರಾಜ್ಯದ ಏಕೈಕ ತಾಲೂಕು ಕಾಪು ಆಗಿದ್ದು, ವೈಶಿಷ್ಟ್ಯಪೂರ್ಣ ಕಾಲಮಿತಿಯ ಸಾಹಿತ್ಯ ಚಟುವಟಿಕೆಗಳು ಜಿಲ್ಲೆಗೆ ಮಾದರಿಯಾಗಿದೆ.” ಎಂದು ಹೇಳಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಐದನೆಯ ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಆರ್. ಪಾಟ್ಕರ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠ ವಹಿಸಿದ್ದರು. ಸಮಾರಂಭದಲ್ಲಿ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮನೋಹರ್ ಪಿ, ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಕಾಲೇಜಿನ ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್, ಉಪನ್ಯಾಸಕ ಡಾ. ಭರತ್ ಭಟ್, ಕಸಾಪ ಕಾಪು ತಾಲೂಕು ಸಮಿತಿಯ ಪದಾಧಿಕಾರಿಗಳಾದ ಮಧುಕರ್ ಎಸ್. ಕಲ್ಯಾ, ಕೃಷ್ಣಕುಮಾರ್ ರಾವ್ ಮಟ್ಟು, ಯಶೋದಾ ಎಲ್ಲೂರು, ಸಾಹಿತಿ ಆರ್. ಡಿ. ಪಾಂಬೂರು ಉಪಸ್ಥಿತರಿದ್ದರು.