ಬನವಾಸಿ : ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ‘ಕದಂಬೋತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 12 ಮತ್ತು 13 ಏಪ್ರಿಲ್ 2025ರಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ, ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು ಹಾಗೂ ಕಲಾ ಸಂಭ್ರಮ ಪ್ರಸ್ತುತಗೊಳ್ಳಲಿವೆ.
ದಿನಾಂಕ 12 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಈ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಇವರು ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರಿಗೆ 2024-25ನೇ ಸಾಲಿನ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ನೃತ್ಯ ರೂಪಕ, ಜನಪದ ಗಾಯನ, ಭರತನಾಟ್ಯ, ಗೊಂಬೆಯಾಟ ಪ್ರದರ್ಶನ, ಸಂಗೀತ, ನೃತ್ಯ, ವಾದ್ಯ ಸಂಗೀತ ಜರಗಲಿವೆ.
ದಿನಾಂಕ 13 ಏಪ್ರಿಲ್ 2025ರಂದು ಬೆಳಿಗ್ಗೆ 11-00 ಗಂಟೆಗೆ ನಡೆಯಲಿರುವ ಕವಿ ಕುಂಚ ಗಾಯನ ಇತಿಹಾಸ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಾಗೂ ಕಾದಂಬರಿಕಾರರಾದ ಶ್ರೀಮತಿ ಭಾಗೀರಥಿ ಹೆಗಡೆ ಇವರು ವಹಿಸಲಿದ್ದು, ಕವಿಗಳು, ಗಾಯಕರು ಮತ್ತು ಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ. ಸಂಜೆ 4-30 ಗಂಟೆಗೆ ಭಕ್ತಿಗೀತೆ, ಯಕ್ಷ ನೃತ್ಯ, ಸುಗಮ ಸಂಗೀತ, ಭರತನಾಟ್ಯ, ಹಿಂದೂಸ್ತಾನಿ ಸಂಗೀತ, ಕಥಕ್ ನೃತ್ಯ, ಜಾದೂ ಪ್ರದರ್ಶನ, ನೃತ್ಯ ವೈಭವ, ಹಾಸ್ಯ ಸಂಜೆ, ವಾದ್ಯ ನಿನಾದ, ವಿಶೇಷ ಗಾಯನ ಕಾರ್ಯಕ್ರಮಗಳು ಹಾಗೂ ಸಂಜೆ 7-00 ಗಂಟೆಗೆ ಸಮಾರೋಪ ಸಮಾರಂಭ ಪ್ರಸ್ತುತಗೊಳ್ಳಲಿವೆ.