ಮಂಗಳೂರು : ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಸಂಸ್ಥೆ ವತಿಯಿಂದ ಡಾ. ಕದ್ರಿ ಗೋಪಾಲನಾಥ್ ಅವರ 75ನೇ ಜನ್ಮ ಜಯಂತಿ ಪ್ರಯುಕ್ತ ‘ಕದ್ರಿ ಸಂಗೀತ ಸೌರಭ’ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2024ರ ಶನಿವಾರ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿದ್ಧ ಗುರುಪೀಠದ ಗುರು ಗೋಮತಿ ದಾಸ್ ಇವರು ಮಾತನಾಡಿ “ಡಾ. ಕದ್ರಿ ಗೋಪಾಲನಾಥ್ ಧರ್ಮಾತೃ, ಧರ್ಮ ಚಿಂತನೆಯುಳ್ಳ ಮಾನವತಾವಾದಿಯಾಗಿದ್ದರು. ಕದ್ರಿ ಎಂಬ ಪುಟ್ಟ ಊರಿನ ಹೆಸರನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಖ್ಯಾತಿ ಗೋಪಾಲನಾಥ್ ಅವರದ್ದು” ಎಂದು ಹೇಳಿದರು.



ಕಟೀಲು ದೇಗುಲದ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀ ಹರಿನಾರಾಯಣ ಆಸ್ರಣ್ಣ ಮಾತನಾಡಿ “ಸಂಗೀತದಲ್ಲಿ ಅತ್ಯಂತ ಸಾಧನೆಯ ಜತೆಗೆ ವಿಶೇಷ ಚಮತ್ಕಾರ ಮಾಡಿದ ಮಹಾನ್ ವ್ಯಕ್ತಿ ಕದ್ರಿ ಗೋಪಾಲನಾಥರು. ನೋವು ನುಂಗಿ ಖುಷಿ ಹಂಚುವುದು ಅವರ ಶ್ರೇಷ್ಠತನವಾಗಿತ್ತು.” ಎಂದರು. ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ “ದೇವಸ್ಥಾನ ಹಾಗೂ ಕದ್ರಿ ಗೋಪಾಲನಾಥರ ಸಾಧನೆಯಿಂದ ಶ್ರೀ ಕದ್ರಿ ಹೆಸರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ.” ಎಂದರು.

ತಂತ್ರಿ ಸಾಮ್ರಾಟ್ ಸಲೀಲ್ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಣಿ ಕೃಷ್ಣಸ್ವಾಮಿ ಅಕಾಡೆಮಿ ಇದರ ಕಾರ್ಯದರ್ಶಿ ನಿತ್ಯಾನಂದ ರಾವ್, ಗೋಮತಿದಾಸ್, ಡಾ. ಕದ್ರಿ ಗೋಪಾಲನಾಥ್ ಇವರ ಪತ್ನಿ ಸರೋಜಿನಿ ಉಪಸ್ಥಿತರಿದ್ದರು. ಗೋಪಾಲನಾಥ್ ಇವರ ಪುತ್ರ, ಟ್ರಸ್ಟ್‌ನ ಕಾರ್ಯದರ್ಶಿ ಮಣಿಕಾಂತ್ ಕದ್ರಿ ಸ್ವಾಗತಿಸಿ, ಭವಾನಿ ಲೋಕೇಶ್ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಪಂಡಿತ್ ವಿಶ್ವಮೋಹನ್ ಭಟ್ ಹಾಗೂ ಸಲೀಲ್ ಭಟ್ ಇವರಿಂದ ‘ಮೋಹನ ವೀಣಾ’ ಮತ್ತು ‘ಸಾತ್ವಿಕ ವೀಣಾ’ ಜುಗಲ್ ಬಂದಿ ಜರಗಿತು. ಇವರಿಗೆ ಪಂಡಿತ್ ಹಿಮಾಂಶು ಮಹಾಂತ್ ತಬಲಾದಲ್ಲಿ ಸಾಥ್ ನೀಡಿದರು. ಗೋಪಾಲನಾಥ್ ಅವರ ಶಿಷ್ಯರು, ಪ್ರತಿಭಾನ್ವಿತ ಹಾಗೂ ಉದಯೋನ್ಮುಖ ಕಲಾವಿದರಿಂದ ನಿರಂತರ ಗುರುವಂದನೆ ಕಾರ್ಯಕ್ರಮ ನಡೆಯಿತು. 2021ರಲ್ಲಿ ಪ್ರಶಸ್ತಿ ಪಡೆದಿದ್ದ ಗಾನ ಭೂಷಣ, ಮೋರ್ಚಿಂಗ್ ವಿದ್ವಾನ್ ಡಾ. ಎಲ್. ಭೀಮಾಚಾರ್, ಗಾನ ಸುಧಾಕರ ಮಹಾದೇವಪ್ಪ ಹುಳ್ಳಾಲ ಇವರಿಗೆ ನುಡಿ ಗಾನ ಶ್ರದ್ಧಾಂಜಲಿ ಅರ್ಪಣೆ ನಡೆಯಿತು. ಬಳಿಕ ಮಹಾಲಿಂಗಪ್ಪ ಮಹಾದೇವಪ್ಪ ಹುಳ್ಯಾಲ ಮತ್ತು ತಂಡದಿಂದ ದಾಸ ಹಾಗೂ ವಚನ ಸಾಹಿತ್ಯ, ಅನೀಶ್ ವಿ. ಭಟ್ ಹಾಗೂ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಡಾ. ಕದ್ರಿಯವರ ಅಮೆರಿಕದ ಶಿಷ್ಯ ಪ್ರಶಾಂತ್ ರಾಧಾಕೃಷ್ಣನ್ ಇವರಿಂದ ಸ್ಯಾಕ್ಸೋಫೋನ್ ವಾದನ, ಸುರ್ಮಣಿ ಮಹಾಲಕ್ಷ್ಮೀ ಶೆಣೈಯವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು.