ಮಂಗಳೂರು : ಪಾವಂಜೆ ಮೇಳದ ಕಲಾವಿದ, ಪ್ರಬಂಧಕ ‘ಯಕ್ಷ ರಾಮ’ ಬಿರುದಾಂಕಿತ ಮಾಧವ ಬಂಗೇರ ಕೊಳತ್ತಮಜಲು ಇವರಿಗೆ ಕದ್ರಿ ದೇವಸ್ಥಾನದಲ್ಲಿ ದಿನಾಂಕ 04 ನವೆಂಬರ್ 2025ರಂದು ನಡೆದ ಕದ್ರಿ ಯಕ್ಷ ಬಳಗದ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ‘ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಹಿರಿಯ ವೈದ್ಯ ಡಾ. ಜಯಶಂಕರ್ ಮಾರ್ಲ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ ಕುಮಾರ್ ಮೊಯ್ಲೊಟ್ಟು, ಸಂಜಯ್ ಕುಮಾರ್ ಗೋಣಿಬೀಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕದ್ರಿ ಯಕ್ಷ ಬಳಗದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಇವರು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿಯವರ ಸ್ಮರಣೆ ಮಾಡಿದರು. ಅರ್ಚಕ ಕದ್ರಿ ರವಿ ಅಡಿಗ ಅವರು ಶನೀಶ್ವರನ ಕಥೆಯ ‘ಛಾಯಾ ನಂದನ’ ನೂತನ ಪ್ರಸಂಗದ ಮೊದಲ ಪ್ರದರ್ಶನ ಆಕರ್ಷಣೀಯವಾಗಿ ಮೂಡಿ ಬಂದಿದ್ದು, ಸಾವಿರಾರು ಪ್ರದರ್ಶನಗಳನ್ನು ಕಾಣುವಂತಾಗಲಿ” ಎಂದು ಹರಸಿದರು. ಪ್ರಸಂಗ ಕರ್ತ ಕದ್ರಿ ನವನೀತ ಶೆಟ್ಟಿಯವರು ರಚಿಸಿದ ‘ಛಾಯಾ ನಂದನ’ ಕೃತಿಯ ಬಗ್ಗೆ ಮಾತನಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಕೊಳತ್ತಮಜಲು ಇವರನ್ನು ಅಭಿನಂದಿಸಿದರು.
ಪ್ರದೀಪ್ ಆಳ್ವ ಕದ್ರಿ ಇವರು ಸನ್ಮಾನಿತರನ್ನು ಅಭಿನಂದಿಸಿದರು. ಬಳಗದ ತಾರಾನಾಥ್ ಶೆಟ್ಟಿ ಬೋಳಾರ, ಲೀಲಾಕ್ಷ ಬಿ. ಕರ್ಕೇರ, ಶಿವಪ್ರಸಾದ್ ಎನ್. ಪ್ರಭು, ಗೋಕುಲ್ ಕದ್ರಿ, ಕೃಷ್ಣ ಶೆಟ್ಟಿ ತಾರೆಮಾರ್, ಜಯಶೀಲ ಅಡ್ಯಂತಾಯ, ಹರೀಶ್ ಕುಮಾರ್ ಚಿತ್ರಾಪುರ, ಎಲ್ಲೂರು ರಾಮಚಂದ್ರ ಭಟ್, ಮಹೇಶ್ ಪಾಟೀಲ್ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿ, ಸುಧಾಕರ ರಾವ್ ಪೇಜಾವರ ಧನ್ಯವಾದ ಸಮರ್ಪಿಸಿದರು.
