ಮಂಗಳೂರು : ಕದ್ರಿಯಲ್ಲಿ ದಿನಾಂಕ 08-12-2023ರಂದು ನಡೆದ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಕಟೀಲು ಮೇಳದ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ -2023’ನ್ನು ಪ್ರದಾನ ಮಾಡಲಾಯಿತು.
ಕದ್ರಿ ಯಕ್ಷ ಬಳಗದ ಅಧ್ಯಕ್ಷರಾದ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, “ಕಟೀಲು ಮೇಳದಲ್ಲಿ ಮೂರು ದಶಕಗಳ ತನ್ನ ಯಕ್ಷಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಮ್ಮುಂಜೆ ಮೋಹನ್ ಕುಮಾರ್ ಅವರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಗುಂಡಿಲ ಗುತ್ತು ಶಂಕರ ಶೆಟ್ಟಿ, ಪಡ್ರೆ ಚಂದು ಹಾಗೂ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಡಾ. ಕೊಳ್ಳೂರು ರಾಮಚಂದ್ರ ರಾವ್ ಅವರಿಂದ ನಾಟ್ಯ ಕಲಿತವರು, ಕುರಿಯ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪಟ್ಲ ಸತೀಶ್ ಶೆಟ್ಟಿ ಭಾಗವತರ ಮಾರ್ಗದರ್ಶನದ ರಂಗದಲ್ಲಿ ಮೆರೆದ ಖ್ಯಾತ ಪುಂಡು ವೇಷಧಾರಿ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡ, ಸುದರ್ಶನ, ಅಶ್ವತ್ಥಾಮ, ಹಿರಣ್ಯಾಕ್ಷ, ಋತುಪರ್ಣ, ಜಾಂಬವ, ರಕ್ತಬೀಜ ಮೊದಲಾದ ಪಾತ್ರಗಳಲ್ಲಿ ತನ್ನದೇ ಶೈಲಿಯಿಂದ ಮೆರೆಯುತ್ತಿರುವ ಸರಳ-ಸಜ್ಜನಿಕೆಯ ನಿಷ್ಠ ರಂಗ ಕಲಾವಿದ” ಎಂದು ಪ್ರಶಂಸಿಸಿದರು. ಸಮ್ಮಾನ ಸ್ವೀಕರಿಸಿದ ಅಮ್ಮುಂಜೆ ಮೋಹನ್ ಅವರು “ಮೇರು ಹಿರಿಯ ಕಲಾವಿದ ಕದ್ರಿ ವಿಷ್ಣು ಪ್ರಶಸ್ತಿಯು ನನ್ನ ಈವರೆಗಿನ ಸಮ್ಮಾನಗಳಲ್ಲಿ ಅತೀ ಸಂತಸ ಹಾಗೂ ಗೌರವದ ಪ್ರತೀಕ” ಎಂದರು.
ಲೀಲಾಕ್ಷ ಕರ್ಕೇರ, ನಿವೇದಿತಾ ಶೆಟ್ಟಿ ಪ್ರದೀಪ್ ಕುಮಾರ್ ಕಲ್ಕೂರ, ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರದೀಪ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರ್, ಸುರೇಶ್ ಶೆಟ್ಟಿ ಬೆಂಗಳೂರು, ಭುಜಬಲಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಗುಂಡಿಲ ಗುತ್ತು ಶಂಕರ್ ಶೆಟ್ಟಿ, ಸುಧಾಕರ ಪೇಜಾವರ, ರವೀಂದ್ರನಾಥ್ ಶೆಟ್ಟಿ, ಜನಾರ್ದನ ಅಮ್ಮುಂಜೆ, ಪಣಂಬೂರು ಶ್ರೀಧರ್ ಐತಾಳ್, ತಾರನಾಥ್ ಶೆಟ್ಟಿ ಬೋಳಾರ್, ಎಲ್ಲೂರು ರಾಮಚಂದ್ರ ರಾವ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.