ಮುಂಬೈ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಆಯೋಜಿಸಿದ್ದ ಅಭಿಜಿತ್ ಪ್ರಕಾಶನ ಪ್ರಕಟಿಸಿದ ಡಾ. ಮರಿಯಪ್ಪ ನಾಟೇಕರ್ ಇವರ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಸಾಂತಾಕ್ರೂಜ್ (ಪೂ) ವಿದ್ಯಾನಗರಿ ಕಲೀನಾದ ಇಂಗ್ಲೀಷ್ ವಿಭಾಗದ ನೆಲಮಹಡಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ಮಾತನಾಡಿ “ಶೋಷಣೆಗೆ ಒಳಗಾದ ದನಿ ಇಲ್ಲದ ದಲಿತ ಸಮುದಾಯದ ಅಂತರಂಗದ ಪ್ರತಿಧ್ವನಿಯಾಗಿ ‘ಕಾಗೆ ಬಣ್ಣದ ಕವಿತೆ’ ಮೂಡಿಬಂದಿದೆ. ಡಾ. ಮರಿಯಪ್ಪ ನಾಟೇಕರ್ ಅವರು ಸೂಕ್ಷ್ಮ ಸಂವೇದನೆಯ ಕವಿ. ಅವರ ಈ ಸಂಕಲನ ವಿಶಿಷ್ಟ ರೂಪಕ ಪ್ರತಿಮೆಗಳ ಮೂಲಕ ಅಲಕ್ಷಿತ ಸಮುದಾಯದ ಬದುಕನ್ನು ಲೋಕಮುಖಕ್ಕೆ ಪರಿಚಯಿಸುವ ಪರಿ ಅನನ್ಯವಾದದ್ದು. ಓದುಗರ ಅಂತರಂಗ ಪ್ರವೇಶಿಸಿ ಚಿಂತನ ಮಂಥನ ನಡೆಸುವಂತೆ ಈ ಕೃತಿ ನಮ್ಮನ್ನು ಕಾಡುತ್ತದೆ, ಕನ್ನಡ ದಲಿತ ಸಾಹಿತ್ಯಕ್ಕೆ ಇದೊಂದು ಮೌಲಿಕ ಕೊಡುಗೆ” ಎಂದು ಹೇಳಿದರು.

ಸಂಘಟಕ, ಉದ್ಯಮಿ ಪೇಟೆಮನೆ ಪ್ರಕಾಶ ಶೆಟ್ಟಿ ಇವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ “ಡಾ. ಮರಿಯಪ್ಪ ನಾಟೇಕರ್ ಇವರ ಕಾವ್ಯ ಬಹುಕಾಲ ಓದುಗರ ಮನದಲ್ಲಿ ನಿಲ್ಲುವಂತದ್ದು. ಈ ಕೃತಿಯಿಂದ ದಲಿತ ಸಾಹಿತ್ಯದ ಬಣ್ಣ ಬನಿಯನ್ನು ಹೆಚ್ಚಿಸಿದ್ದಾರೆ. ಕಾವ್ಯ ಲೋಕದಲ್ಲಿ ಒಳ್ಳೆಯ ಹೆಸರು ಮಾಡಿರುವ ಇವರು ಇನ್ನೂ ಹೆಚ್ಚಿನ ಪುಸ್ತಕಗಳನ್ನು ಬರೆಯುವಂತಾಗಲಿ. ನಾಟೇಕರರಿಂದ ಸಾಹಿತ್ಯ ವಲಯ ಶ್ರೀಮಂತವಾಗಲಿ” ಎಂದು ಶುಭ ಹಾರೈಸಿದರು.

ಲೇಖಕಿ ಕಲಾ ಭಾಗ್ವತ್ ಇವರು ಕೃತಿ ಪರಿಚಯ ಮಾಡಿ “ಮರಿಯಪ್ಪ ನಾಟೇಕರ್ ಅವರ ಕಾವ್ಯ ಓದುತ್ತ ಹೋದಂತೆ ನಮ್ಮನ್ನು ಹೊಸ ಆಲೋಚನದೆಡೆಗೆ ಕೊಂಡೊಯ್ಯುತ್ತದೆ.ಈ ಕವನ ಸಂಕಲನದ ಹೆಸರು ಕೇಳಿದರೆ ಗಂಭೀರವಾದ ಚಿಂತನೆಯನ್ನು ತನ್ನ ಒಡಲೊಳಗೆ ಅಡಗಿಸಿಕೊಂಡಿದೆ ಎನಿಸುತ್ತದೆ. ನಿರ್ಲಕ್ಷ್ಯಕ್ಕೆ ಒಳಗಾದ ಕಾಗೆ ಮತ್ತು ಅದರ ಬಣ್ಣ ದಮನಿತರ ರೂಪಕವಾಗಿ ಇಲ್ಲಿ ಮೂಡಿ ಬಂದಿದೆ. ಕಾವ್ಯ ಕಟ್ಟುವ ಕಲೆ ಇವರಿಗೆ ಸಿದ್ದಿಸಿದೆ. ಸ್ಥಾಪಿತ ಸಿದ್ದಾಂತಗಳನ್ನು ಮುರಿದು ಕಟ್ಟುವ ಕಾರ್ಯ ಈ ಕೃತಿ ಮಾಡುತ್ತದೆ. ಓದುಗರಲ್ಲಿ ನವೀನ ಆಲೋಚನೆ ಮೂಡುವಂತೆ ಮಾಡುವ ಬಹು ವಿಶಿಷ್ಠವಾದ ಕಾವ್ಯ ಮರಿಯಪ್ಪ ನಾಟೇಕರ್ ಅವರು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರಿಂದ ಇನ್ನಷ್ಟು ಕೃತಿಗಳು ಬೆಳಕು ಕಾಣಲಿ” ಎಂದರು.
ಡಾ. ಭರತಕುಮಾರ ಪೊಲಿಪು ಓಂದಾಸ ಕಣ್ಣಂಗಾರ ಹಾಗೂ ಎಸ್.ಕೆ. ಸುಂದರ ಇವರು ಡಾ. ಮರಿಯಪ್ಪ ಇವರ ವ್ಯಕ್ತಿತ್ವದ ವಿವಿಧ ಮುಖಗಳನ್ನು ತೆರೆದಿಟ್ಟರು. ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.
