ಮಡಿಕೇರಿ : ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ದಿನಾಂಕ 17 ಡಿಸೆಂಬರ್ 2024ರಂದು ನಡೆಯಲಿದೆ ಎಂದು ಮೂರು ನಾಡಿನ ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಈಚೂರುವಿನ ದವಸ ಭಂಡಾರದ ಸಭಾಂಗಣದಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ಧದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಕೈಮುಡಿಕೆ ಕೋಲ್ ಮಂದ್ ನಡೆಸಲು ಒಮ್ಮತದ ತೀರ್ಮಾನ ಕೈಕೊಳ್ಳಲಾಯಿತು. ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿಯೂ ಕೈಮುಡಿಕೆ ಪುತ್ತರಿ ಕೋಲ್ ಮಂದನ್ನು ವಿಜೃಂಭಣೆಯಿಂದ ಸಾರ್ವಜನಿಕವಾಗಿ ಆಚರಿಸುವಂತೆ ಹಾಗೂ ವಿವಿಧ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲು ಸಭೆ ನಡೆಸುತ್ತಿರುವುದಾಗಿ ಹೇಳಿದರು.
ಅಂದು ಬೆಳಿಗ್ಗೆ 10-00 ಗಂಟೆಗೆ ಮೂರು ನಾಡಿನವರು ಮೂರು ಕಡೆಯಿಂದ ಓಡಿಬಂದು ಮಂದ್ ಮಧ್ಯೆದಲ್ಲಿರುವ ಅರಳಿ ಮರಕ್ಕೆ ಕೋಲು ಹೊಡೆಯುವ ಮೂಲಕ ಮಂದ್ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನಂತರ ವಿವಿಧ ಪೈಪೋಟಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪದವಿ ಪೂರ್ವ ಮತ್ತು ಪದವಿ ಹಾಗೂ ಸಾರ್ವಜನಿಕರು ಎಂದು ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪುತ್ತರಿ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಬಾಳೋಪಾಟ್, ಪರೆಯಕಳಿ, ವಾಲಗತ್ತಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ಸ್ಥಳೀಯ ಬುಡಕಟ್ಟು ಸಮುದಾಯದ ಜನರಿಗೆ ಯರವಾಟ್ ಪೈಪೋಟಿ ಇರುತ್ತದೆ.
ಕೈಮುಡಿಕೆ ಮಂದ್ ಕಾರ್ಯದರ್ಶಿ ನಾಳಿಯಮ್ಮನ ಉಮೇಶ್ ಕೇಚಮಯ್ಯ ಸ್ವಾಗತಿಸಿ, ಕಳೆದ ವರ್ಷದ ವರದಿಯನ್ನು ಓದಿ ಅನುಮೋದನೆ ಪಡೆದರು. ಈ ಸಂದರ್ಭದಲ್ಲಿ ಬೇರಳಿನಾಡ್ ತಕ್ಕರಾದ ಮಳವಂಡ ಭುವೇಸ್ ದೇವಯ್ಯ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಕೈಮುಡಿಕೆ ಮಂದ್ ಸಹಕಾರ್ಯದರ್ಶಿ ಅಪ್ಪಂಡೇರಂಡ ಮನು ಮೋಹನ್, ಹಿರಿಯರಾದ ತೀತಿಮಾಡ ಕುಶಾಲಪ್ಪ, ಮೂರು ನಾಡಿನ ವಿವಿಧ ಗ್ರಾಮಗಳ ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು. ಪೈಪೋಟಿಗೆ ಭಾಗವಹಿಸುವವರು ಅಂದು ಬೆಳಿಗ್ಗೆ 10-00 ಗಂಟೆಯ ಒಳಗೆ ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಚಮ್ಮಟೀರ ಪ್ರವೀಣ್ ಉತ್ತಪ್ಪ -9880967573 ಅಥವಾ ಅಪ್ಪಂಡೇರಂಡ ಮನು ಮೋಹನ್-9901262398 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.