ಮಂಗಳೂರು : ಮಾಂಡ್ ಸೊಭಾಣ್ ಆಯೋಜಿಸಿದ ಮಕ್ಕಳ ವಸತಿಯುತ ರಜಾ ಶಿಬಿರ ‘ಕಾಜಳ್’ (ಕಣ್ಣ ಕಾಡಿಗೆ) ಇದರ ಸಮಾರೋಪ ದಿನಾಂಕ 04 ಮೇ 2025ರಂದು ಕಲಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿ ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವೆನಿಸ್ಸಾ ಎ.ಸಿ. ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ‘ಒಂದೆರಡು ದಿನ ಶಿಬಿರ ನಡೆಸುವಾಗ ಸುಸ್ತಾಗುವ ಸಂದರ್ಭದಲ್ಲಿ ಹತ್ತು ದಿನ ವಸತಿ ಶಿಬಿರ ನಡೆಸುವುದು ಬಹು ದೊಡ್ಡ ಸಂಗತಿ. ಶಿಬಿರದಲ್ಲಿ ಮಾತೃಭಾಷೆ ಕೊಂಕಣಿಗೆ ಮಹತ್ವ ನೀಡಿದ್ದಾರೆ. ವಿವಿಧ ಸ್ಥಳಗಳಿಂದ ಬಂದ ನೀವು ಒಬ್ಬರನ್ನೊಬ್ಬರು ಅರಿತು ತಂಡದ ಮನೋಭಾವ ಬೆಳೆಸಿದ್ದೀರಿ. ನಿಮಗಿದು ಮುಂದಿನ ಜೀವನದಲ್ಲಿ ಸಹಕಾರಿಯಾಗಲಿ. ನಿಮಗೂ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗೆ ಶುಭ ಹಾರೈಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಯೊನಾ ಡಿಸೋಜ ಕೆಲರಾಯ್ (ಕೊಂಕಣಿ ಶ್ರೇಷ್ಟ), ಪ್ರಿನ್ಶೆಲ್ ಪಿರೇರಾ ಕುಲ್ಶೇಕರ್ (ನೃತ್ಯ ಶ್ರೇಷ್ಟ), ಸಿಯೊನಾ ಡಿಕುನ್ಹಾ ಕುಲ್ಶೇಕರ್ (ನಾಟಕ ಶ್ರೇಷ್ಟ), ಆಸ್ಟನ್ ಲೆಸ್ಟರ್ ಫೆರ್ನಾಂಡಿಸ್ ಅಮ್ಮುಂಜೆ (ಗಾಯಾನ ಶ್ರೇಷ್ಟ) ಮತ್ತು ಏಂಜಲ್ ಡಿಸೋಜ ಮುಕ್ಕ (ಶಿಬಿರ ಶ್ರೇಷ್ಟ / ಉದಯೋನ್ಮುಖ ಪ್ರತಿಭೆ) ಆಯ್ಕೆಯಾದರು. ಇವರಿಗೆ ರೆನ್ವರ್ ಡಿಸೋಜ ಪ್ರಾಯೋಜಿತ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು. ವಿಭಾಗ ಶ್ರೇಷ್ಟರಿಗೆ ತಲಾ ರೂ.3,500/- ಹಾಗೂ ಶಿಬಿರ ಶ್ರೇಷ್ಟ ರೂ.6,000/- ನಗದು ಲಭಿಸಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ನೊರೀನ್ ಮೆಂಡೊನ್ಸಾ ಗೌರವಾರ್ಥ ನಡೆಯುವ ಶಿಬಿರದ ಗೌರವ ಅತಿಥಿಗಳಾಗಿ ರೊನಾಲ್ಡ್ ಮೆಂಡೊನ್ಸಾ ಮುಂಬಯಿ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಉಪಾಧ್ಯಕ್ಷ ನವೀನ್ ಲೋಬೊ ಮತ್ತು ಕಾರ್ಯದರ್ಶಿ ಕೇರನ್ ಮಾಡ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಮಕ್ಕಳು 281ನೇ ತಿಂಗಳ ವೇದಿಕೆ ಸರಣಿಯ ಸಾಂಸ್ಕೃತಿಕ ಕಾರ್ಯಕ್ರಮ ಮುನ್ನಡೆಸಿದರು. ತಾವು ಶಿಬಿರದಲ್ಲಿ ಕಲಿತ ಹಾಡು, ನೃತ್ಯಗಳ ಪ್ರದರ್ಶನ ನೀಡಿದರು. ನಂತರ ಅರುಣ್ ರಾಜ್ ರೊಡ್ರಿಗಸ್ ಅನುವಾದಿಸಿ, ವಿಕಾಸ್ ಕಲಾಕುಲ್ ನಿರ್ದೇಶಿಸಿದ ‘ಚಿಂಟು ಟೈಲರ್ – ಚಡ್ಡಿ ಸ್ಪೆಶಲಿಶ್ಟ್’ ನಾಟಕ ಪ್ರದರ್ಶನಗೊಂಡಿತು.