‘ಶಂಕಣ್ಣ ಭಟ್ಟರಿಗೆ ವಹಿವಾಟು ನೂರು/ಮನೆಯಿಂದ ಹೊರಟರೆ ಭಾರೀ ಕಾರ್ಬಾರು/ ಮಾತಿಗೆ ನಿಂತರೆ ಹೋದೀತು ಬೇಜಾರು/ ಮನೆಯಲ್ಲಿ ನೋಡಿದರೆ ಹೆಂಡತಿಯೇ ಜೋರು’, ಎಂದು ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರು ವೇದಿಕೆಯೇರಿ ಹೇಳುವಾಗ ಇಡೀ ಸಭೆಯೇ ನಗೆಗಡಲಲ್ಲಿ ತೇಲುತ್ತದೆ. ಕರತಾಡನ ಮೇರೆ ಮೀರುತ್ತದೆ. ಕೇವಲ ಹಾಸ್ಯಕ್ಕೆ ಸೀಮಿತವಾಗದೆ ಚುಟುಕು ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಅನೇಕ ರಚನೆಗಳೂ ಅವರ ಬತ್ತಳಿಕೆಯಲ್ಲಿದ್ದವು. ತಮ್ಮ ಪಾಡಿಗೆ ಸದ್ದಿಲ್ಲದೆ, ಇಳಿವಯಸ್ಸಿನಲ್ಲೂ ಮಕ್ಕಳ ಸಾಹಿತ್ಯ ಹಾಗೂ ಹಾಸ್ಯ ಸಾಹಿತ್ಯದ ಮೂಲಕ, ಅನಾರೋಗ್ಯವನ್ನೂ ಲೆಕ್ಕಿಸದೆ ಕ್ರಿಯಾಶೀಲರಾಗಿದ್ದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರು ನಮ್ಮೆಲ್ಲರನ್ನೂ ನಗಿಸುತ್ತಲೇ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ 21-06-2024ರಂದು ತಮ್ಮ ಸಾರ್ಥಕ ಬದುಕಿಗೆ ವಿದಾಯ ಹೇಳಿದರು. ಇದು ಅವರ ಆದರ್ಶದ ಬದುಕಿಗೊಂದು ಗೌರವದ ನುಡಿನಮನ.
ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮ ಪಂಚಾಯಿತಿನ ಕೊಟ್ಯಾಡಿ ಸಮೀಪದ ಕಕ್ಕೆಪ್ಪಾಡಿಯ ಶಂಕರನಾರಾಯಣ ಭಟ್ಟರು ಸಣ್ಣ ಪ್ರಮಾಣದ ಕೃಷಿಕರು, ಖ್ಯಾತ ಪಶು ನಾಟಿವೈದ್ಯರು, ಯಕ್ಷಗಾನ ಕಲಾವಿದರು, ಜನಮನ ಗೆದ್ದ ಹಾಸ್ಯ ಸಾಹಿತಿಯಾಗಿದ್ದವರು. ತಮ್ಮ ತಂದೆಯಿಂದ ಬಳುವಳಿಯಾಗಿ ದೊರೆತ ಪಶು ನಾಟಿ ವೈದ್ಯಕೀಯ ವೃತ್ತಿಯನ್ನು ಕಾಳಜಿಯಿಂದ ಸುಮಾರು 60ವರ್ಷಗಳ ಕಾಲ ಮಾಡುತ್ತಾ, ವಯಸ್ಸು 82 ಆದರೂ ತಾವೇ ಸಾಕಿದ ಮನೆಯ ದನಗಳಿಗೆ ತೋಟದಿಂದ ಹುಲ್ಲು ತಂದು ಆರೈಕೆ ಮಾಡುತ್ತಿದ್ದರು. ಇವರ ಎಲ್ಲಾ ಬಹುಮುಖೀ ವ್ಯಕ್ತಿತ್ವದ ಜತೆಗೆ ಸ್ಥಳದಲ್ಲೇ ಚುಟುಕು, ಹನಿಗವನ ಮೊದಲಾದ ಸಾಹಿತ್ಯ ಪ್ರಕಾರವನ್ನು ನಿಮಿಷಾರ್ಧದಲ್ಲಿ ರಚಿಸಿ, ಓದುಗರನ್ನು ಚಕಿತಗೊಳಿಸುವಂತಹ ಆಶುಕವಿತ್ವವೂ ಇತ್ತು ಮತ್ತು ಅನುಭವಿ ವಾಹನ ಚಾಲಕರೂ ಆಗಿದ್ದರು.
ಬದಿಯಡ್ಕದ ಸರ್ಕಾರಿ ಶಾಲೆ, ಅಗಲ್ಪಾಡಿ ಶಾಲೆ ಹಾಗೂ ಪಾಣಾಜೆಯಲ್ಲಿ ಇವರು ತಮ್ಮ ಶೈಕ್ಷಣಿಕ ಜೀವನವನ್ನು ಮುಗಿಸಿದರು. ಎಳವೆಯಲ್ಲಿ ಅವರು ಯಕ್ಷಗಾನದಲ್ಲಿ ನಿರ್ವಹಿಸುತ್ತಿದ್ದ ಹಾಸ್ಯ ಪ್ರಧಾನ ಪಾತ್ರಗಳೇ ಶಂಕರನಾರಾಯಣ ಭಟ್ಟರು ಹಾಸ್ಯ ಕವಿಯಾಗಿ ಪ್ರಸಿದ್ದರಾಗಲು ಕಾರಣವಾಗಿದೆ. ಹಾಸ್ಯ ಸೃಷ್ಟಿಯ ಶಾರೀರ ಮತ್ತು ಶರೀರ, ನಗು ಹೊಮ್ಮಿಸುವ ಅವರ ಅಭಿನಯ, ವಿಷಯದ ಮಂಡನೆ, ಮುಖಮುದ್ರೆಗಳು ಮಕ್ಕಳನ್ನು ಸುಲಭವಾಗಿ ಆಕರ್ಷಿಸುತ್ತವೆ. ಆದ್ದರಿಂದಲೇ ಅವರು ಸಾಹಿತ್ಯದ ಪಾಠಕ್ಕೆ ಶಾಲಾ ಮಕ್ಕಳನ್ನೇ ಆಯ್ದುಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ನೇಪಥ್ಯದಲ್ಲೇ ಹುದುಗಿದ್ದ ಅವರ ಚುಟುಕು ರಚನೆ, ಹಾಸ್ಯ ಪ್ರಜ್ಞೆ ಹೊರಬಂದದ್ದು ಕಾಸರಗೋಡಿನ ಎಡನೀರು ಸ್ವಾಮೀಜೀಸ್ ಶಾಲೆಯಲ್ಲಿ ಕಾಸರಗೋಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ಚುಟುಕು ಸಾಹಿತ್ಯ ಅಭಿಯಾನಕ್ಕೆ ವೀಕ್ಷಕರಾಗಿ ಬಂದಿದ್ದ ಕಕ್ಕೆಪ್ಪಾಡಿಯವರು, ಸ್ಥಳದಲ್ಲೇ ಸಕಾಲಿಕ ಚುಟುಕು ರಚಿಸಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಿದರು. ನಂತರ ನಡೆದ ಬಹುತೇಕ ಎಲ್ಲಾ ಅಭಿಯಾನಗಳಲ್ಲೂ ಕೂಡಾ ಅವರು ಹಾಜರಾಗುತ್ತಿದ್ದರು. ತಮ್ಮ ನವೀನ ಹಾಸ್ಯದ ತುಣುಕುಗಳನ್ನು ಮಂಡಿಸಿ, ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುತ್ತಿದ್ದರು.
ಈ ಕಾರ್ಯಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮೈಲುಗಟ್ಟಲೆ ದೂರದ ಶಾಲೆಗಳಿಗೆ ಶಂಕರನಾರಾಯಣ ಭಟ್ಟರು ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು. ಮಕ್ಕಳಿಗೆ ಕೆಲವೊಂದು ಸ್ಪರ್ಧೆಗಳನ್ನು ನಡೆಸಿ, ತಮಗೆ ಗೌರವ ರೂಪದಲ್ಲಿ ದೊರೆತ ಪುಸ್ತಕಗಳನ್ನು ಮತ್ತು ಶಾಲೆಯಿಂದ ಒತ್ತಾಯವಾಗಿ ನೀಡಿದ ಗೌರವಧನದಿಂದ ಉದಯೋನ್ಮುಖ ಸಾಹಿತಿಗಳ ಕೃತಿಗಳನ್ನು ಖರೀದಿಸಿ, ಮಕ್ಕಳಿಗೆ ಬಹುಮಾನ ರೂಪದಲ್ಲಿ ನೀಡುತ್ತಿದ್ದರು. ಒಟ್ಟಿನಲ್ಲಿ ಸಾಹಿತ್ಯದಿಂದ ದೊರೆತ ಮೊತ್ತವನ್ನು ಸಾಹಿತ್ಯಕ್ಕೆ ಬಳಸುತ್ತಿದ್ದರು.
ತಂದೆ ದಿವಂಗತ ಬೋಳುಕಟ್ಟೆ ನಾರಾಯಣ ಭಟ್ಟರು ಪ್ರಸಿದ್ಧ ಪಶು ನಾಟಿ ವೈದ್ಯರು ಮತ್ತು ತಾಯಿ ಗಂಗಮ್ಮ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರ ಆಂತರ್ಯದಲ್ಲಿದ್ದ ಕಲಾವಿದ ಪ್ರಜ್ಞೆಯನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಅರಳಿಸಿದರು. ಸುಮಾರು 6 ತಿಂಗಳ ಹಿಂದೆ ಕಕ್ಕೆಪ್ಪಾಡಿಯವರ ಪತ್ನಿ ಉಮಾದೇವಿ ನಿಧನರಾದ ನಂತರ ಮೂವರು ಪುತ್ರರು ಹಾಗೂ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಜತೆಯಲ್ಲಿ ಸದಾ ಚಟುವಟಿಕೆಯಲ್ಲಿದ್ದರು.
ಕಕ್ಕೆಪ್ಪಾಡಿಯವರು ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ, ಕವನವಾಚನ ಮಾಡಿದ್ದಾರೆ. ಅವರು ಕವನವಾಚನಕ್ಕೆ ವೇದಿಕೆ ಏರುತ್ತಿದ್ದಂತೆ, ಕೇಳುಗಳ ಕಿವಿಗಳು ಜಾಗೃತವಾಗಿ ಕೇಳುಗರ ಬಾಯಿಗಳು ನಗುವುದಕ್ಕೆ, ಮನಸ್ಸು ಆಹ್ಲಾದದತ್ತ ಸರಿಯಲು ಸಿದ್ಧವಾಗುತ್ತದೆ. ಇದು ಅವರ ಸಾಹಿತ್ಯದ ಮಾಂತ್ರಿಕ ಶಕ್ತಿಯಾಗಿದೆ. ಕಕ್ಕೆಪ್ಪಾಡಿಯವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ನಡೆದ ನಾಟಿವೈದ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ಅನೇಕ ಸನ್ಮಾನಗಳು ಅವರನ್ನರಸಿ ಬಂದವುಗಳು.
ಇದುವರೆಗೆ ಸುಮಾರು 2 ಸಾವಿರ ಶಾಲೆಗಳಲ್ಲಿ ಚುಟುಕು ರಚನಾ ತರಬೇತಿ ಮತ್ತು ಹಾಸ್ಯಗೋಷ್ಠಿಯನ್ನು ನಡೆಸಿದ್ದಾರೆ. ಇವರ ರಚನೆಗಳು ಚುಟುಕು ರಸಾಯನ, ಹಳಬರ ಜೋಳಿಗೆ, ಹೂ ಬಾಣ, ನೇಸರ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಶಾಲಾ ಮಕ್ಕಳಲ್ಲಿ ಕನ್ನಡ ಭಾಷಾ ಪ್ರೇಮ ಅರಳಿಸುವ ನಿಟ್ಟಿನಲ್ಲಿ ಅವರ ಕೆಲಸವು ಆದರ್ಶವಾಗಿತ್ತು. ದಣಿದಿದ್ದರೂ ದಣಿವು ತೋರದ, ಬಳಲಿದ್ದರೂ ಬಸವಳಿಯದ ಉತ್ಸಾಹದ ಕಕ್ಕೆಪ್ಪಾಡಿಯವರು ಭಾವೀ ಜನಾಂಗದ ಮಾನಸಿಕ ಸಿರಿತನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಹಳ್ಳಿಗಾಡಿನ ಅವಕಾಶ ವಂಚಿತ ಮಕ್ಕಳನ್ನು ಕೇಂದ್ರೀಕರಿಸಿ ಇವರ ಸಾಹಿತ್ಯ ಶಿಬಿರಗಳು ನಡೆಯುತ್ತಿದ್ದುವು. ಇವರಿಂದ ಸಾಹಿತ್ಯದ ಗೀಳು ಹಚ್ಚಿಸಿಕೊಂಡು ಮಕ್ಕಳು, ಅದನ್ನು ಮತ್ತೆ ಬಿಡದೆ, ಮುಂದುವರಿಸುತ್ತಾರೆ ಎಂಬ ನಂಬಿಕೆ ಅವರದ್ದು. ಕಕ್ಕೆಪ್ಪಾಡಿಯವರ ಇನ್ನೊಂದು ಚುಟುಕಿನ ಝಲಕ್ ಹೀಗಿದೆ. ‘ಕೋಪ ಬಂದಿದೆ/ ಹೊಡೆಯಲು ಹೆಂಡತಿ ಸಿಗಲಿಲ್ಲ/ ಹೆಂಡತಿ ಎದುರಿಗೆ ಸಿಕ್ಕಾಗ/ ಕೋಪವೇ ಇರಲಿಲ್ಲ/ ಹೆಂಡತಿಯೂ, ಕೋಪವೂ ಜತೆಗೇ ಬಂದರೆ/ ನಾನೇ ಅಲ್ಲಿ ಇರಲಿಲ್ಲ’ ಎಂದು ನಗುತ್ತಾರೆ. ಸದಾ ಸಾಹಿತ್ಯಾಸಕ್ತರನ್ನು ನಗಿಸುತ್ತಲೇ, ಎಲ್ಲರಿಗೂ ಬೇಕಾಗಿದ್ದ, ಹಿರಿಯರಾದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರನ್ನು ಮರೆಯಲು ಸಾಧ್ಯವಿಲ್ಲ. ವಿಶೇಷವಾದ ಪ್ರಚಾರಕ್ಕೆ ಬರದಿದ್ದರೂ, ನೇಪಥ್ಯದಲ್ಲೇ ಇದ್ದುಕೊಂಡು ಫಲಾಪೇಕ್ಷೆ ಇಲ್ಲದೆ, ಅವರು ಮಾಡಿದ ಜಾನುವಾರುಗಳ ಸೇವೆ, ಸಾಹಿತ್ಯ ಸೇವೆಯು ಅನನ್ಯ. ಸಾರ್ವಕಾಲಿಕ ಆದರ್ಶ.
ವಿರಾಜ್ ಅಡೂರು
ಲೇಖಕ, ವ್ಯಂಗ್ಯಚಿತ್ರಗಾರ