ಬೆಂಗಳೂರು : ಅಂತರಂಗದಿಂದ ಬಹಿರಂಗದೆಡೆಗೆ ‘ಕೊಬಾಲ್ಟ್ ಕಲಾ ಸಂಪರ್ಕ’ ಕಾರ್ಯಕ್ರಮ ಇಂತಹ ಒಂದು ಅಭೂತಪೂರ್ವ ಅನುಭವವನ್ನು ನೀಡಿತ್ತು. ಸ್ವಚ್ಛಂದ ಹಸಿರಿನ ನಡುವೆ ಕಲಾ ರಚನೆ ಮುದ ನೀಡುವಂತಹುದು. ಕಲಾ ಸಂಪರ್ಕ ಇಂತಹ ಒಂದು ಪರಿಸರದಲ್ಲಿ ನಡೆದಿತ್ತು. ಕಲಾವಿದರು ಮತ್ತು ಕಲಾಕೃತಿಗಳು ಸಾರ್ವಜನಿಕರನ್ನು ತಲುಪಿದಷ್ಟು ಕಲೆ ಬೆಳೆಯುತ್ತದೆ. ಕಲಾಕೃತಿಗಳನ್ನು ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದಾಗ ಕಲಾವಿದನಿಗೂ ಸಮಾಧಾನ.
ಒಂದು ಕಲಾಕೃತಿ ರಚನೆ ಆಯ್ತು ಅಂದರೆ ಒಂದು ಸಂತಾನ ಆದ ಹಾಗೆ ಎಂಬ ಮಾತಿದೆ. ಹೆಣ್ಣು ಮಕ್ಕಳು ಹೇಗೆ ತವರು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಆ ಮನೆಯ ಪ್ರೀತಿ ವಿಶ್ವಾಸ ಗಳಿಸಿ ಆ ಕುಟುಂಬದವರಲ್ಲಿ ಒಬ್ಬಳಾಗಿ ಆ ಮನೆಯನ್ನು ಬೆಳಗುವ ಹಾಗೆ ಕಲಾವಿದನ ಕಲಾಕೃತಿಗಳು ಕೂಡ ಕಲಾಪ್ರಿಯರ ಮನೆ, ಮನ ಬೆಳಗುತ್ತ ಅಲಂಕಾರಗೊಳಿಸುತ್ತದೆ. ಆ ಕಲಾಕೃತಿಗಳ ಬಗ್ಗೆ ಮನೆಗೆ ಬಂದ ಅತಿಥಿಗಳ ಜೊತೆ ಪರಸ್ಪರ ವಿಚಾರ ವಿನಿಮಯ ನಡೆಯುತ್ತದೆ. ಅಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಂಡಿರುತ್ತದೆ. ಅದಕ್ಕೆ ಕಲಾವಿದ ಕಲಾಕೃತಿಗಳನ್ನು ರಚಿಸಿದ ಮೇಲೆ ತನ್ನದು ಅಂತ ಮೋಹ ಇಟ್ಟುಕೊಳ್ಳಬಾರದು. ಕೊಡುವುದರಲ್ಲೆ ಸಂತೋಷಪಡಬೇಕು. ಹಳೆಯ ನೀರು ಹೋಗಿ ಹೊಸ ನೀರು ಬರುವ ತೆರದಿ ಹೊಸ ಹೊಸ ಕಲಾಕೃತಿಗಳು ಮೂಡಬೇಕು.
ದಿನಾಂಕ 21-01-2024ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಪಾರ್ಕ್ ಕಲಾವಿದರಿಂದ ಮತ್ತು ಕಲಾ ಚಿಣ್ಣರಿಂದ ರಂಗು ರಂಗಾಗಿ ಕಂಗೊಳಿಸಿತ್ತು. ಕೊಬಾಲ್ಟ್ ಕಲಾ ಸಂಸ್ಥೆ ‘ಕಲಾ ಸಂಪರ್ಕ’ ಕಾರ್ಯಕ್ರಮವನ್ನು ಪಾರ್ಕ್ ನಲ್ಲಿ ಆಯೋಜನೆ ಮಾಡಿತ್ತು. ಪ್ರಸಿದ್ಧ ಕಲಾವಿದರು ಕೊಬಾಲ್ಟ್ ಕಲಾ ಸಂಪರ್ಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಚಿತ್ರ ರಚಿಸುತ್ತಾ ಸಾರ್ವಜನಿಕರ ಜೊತೆ ಸ್ಪಂದಿಸಿದ್ದು, ಇನ್ನೂರಕ್ಕೂ ಹೆಚ್ಚು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಉದ್ಯಾನವನದಲ್ಲಿ ಮಕ್ಕಳ ಕಲರವ ಮರೆಯಲಾಗದ ಅನುಭವ. ಕಲಾಕೃತಿಗಳನ್ನು ಕೊಳ್ಳುವಿಕೆಯಲ್ಲಿಯು ಜನರು ಆಸಕ್ತಿ ತೋರಿದ್ದು ವಿಶೇಷವಾಗಿತ್ತು. ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನೆಯ ನೆನಪಿಗೆ ಹಿಂದಿನ ದಿನ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮತ್ತು 22-01-2024 ದಿನದ ನೆನಪಿಗೆ 22 ಕಲಾವಿದರು ಭಾಗವಹಿಸಿದ್ದು ಒಂದು ವಿಶೇಷವಾಗಿತ್ತು.
ಎಕ್ಯೂರೆಕ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ರಾಮಮೋಹನ್ ಸಾಂಕೇತಿಕವಾಗಿ ರಾಮನ ಚಿತ್ರ ಬಿಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎಲ್ಲಾ ಕಲಾವಿದರು ರಾಮನ ಚಿತ್ರ ಬಿಡಿಸಿ ಸಾರ್ವಜನಿಕರ ಮನಸೂರೆಗೊಂಡರು. ವ್ಯಂಗ್ಯಚಿತ್ರ ಕಲಾವಿದ ಶ್ರೀ ಪ್ರಕಾಶ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಆಕರ್ಷಣೆಯ ಕೇಂದ್ರವಾಗಿತ್ತು. ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಮುಖ್ಯ ಅತಿಥಿಗಳಾದ ಹಿರಿಯ ಕಲಾವಿದರಾದ ಶ್ರೀ ಚಿ.ಸು. ಕೃಷ್ಣ ಸೆಟ್ಟಿಯವರು ಪ್ರಶಸ್ತಿ ನೀಡಿ ಶುಭ ಹಾರೈಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಗಣಪತಿ ಎಸ್. ಹೆಗಡೆ ಎಲ್ಲರನ್ನೂ ವಂದಿಸಿದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರ ತನಕ ಜನರ ಸ್ಪಂದನೆ ಅಮೋಘವಾಗಿತ್ತು. ‘ಕೊಬಾಲ್ಟ್ ಕಲಾ ಸಂಪರ್ಕ’ ಅದ್ಭುತ ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ಸಾರ್ವಜನಿಕರ ಮನಸೂರೆಗೊಂಡಿತು.
ಚಿತ್ರಲೇಖನ
ಗಣಪತಿ ಎಸ್. ಹೆಗಡೆ
ಕಲಾವಿದರು, ಕಲಾವಿಮರ್ಶಕರು