08 ಮಾರ್ಚ್ 2023, ಮಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸರೋಜಿನಿ ಶೆಟ್ಟಿಯವರು ಕೈಯಾಡಿಸದ ರಂಗವಿಲ್ಲ ಅನ್ನೋ ಮಾತು ಸರೋಜಿನಿ ಶೆಟ್ಟಿಯವರಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತದೆ. ರಂಗಭೂಮಿಯನ್ನು ಅನೇಕ ಕಲಾವಿದರು ತಮ್ಮ ಅಭಿನಯದಿಂದ ಶ್ರೀಮಂತ ಗೊಳಿಸಿದ್ದಾರೆ. ಇಂತವರ ಸಾಲಿನಲ್ಲಿ ಮಿನುಗುತ್ತಿರುವ ತಾರೆ ಸರೋಜಿನಿ ಶೆಟ್ಟಿಯವರು, ಬಹುಭಾಷಾ ಅಭಿನೇತ್ರಿ, ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳು, ಸನ್ಮಾನಗಳು, ದಕ್ಷಿಣೋತ್ತರ ಮೇರು ಕಲಾವಿದರೊಂದಿಗೆ ಅಭಿನಯಿಸಿದ ಕೀರ್ತಿ, ಒಂದರ್ಥದಲ್ಲಿ ರಂಗವನ್ನಾಳಿದ ನಟಿಯಾದರೂ ಗತ್ತಿಲ್ಲ, ಅಹಂಕಾರವಿಲ್ಲ, ಸೊಡುಕಿನ ಮಾತಿಲ್ಲ, ಸಾಧನೆಯ ಶಿಖರವೇರಿದ್ದರೂ ಇನ್ನೂ ತಳದಲ್ಲೇ ಇದ್ದೇನೆಂಬ ವಿನೀತ ಭಾವನೆ, ವಿಧೇಯತೆ, ಮೃದುವಾದ ಮಾತು. ಇದು ಸರೋಜಿನಿ ಶೆಟ್ಟಿಯವರು.
ಅಪರೂಪದಲ್ಲಿ ಅಪರೂಪ ಅನ್ನಬಹುದಾದ ಮೃಣ್ಮಯ ಮೂರ್ತಿ ಪೊಳಲಿಯ ಶ್ರೀ ರಾಜ ರಾಜೇಶ್ವರಿ ತಾಯಿಯ ಸನಿಹದ ಬೊಳ್ಳೂರು ಎಂಬಲ್ಲಿ ತಿಮ್ಮಪ್ಪ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಅಕ್ಕರೆಯ ಮಗಳಾಗಿ ಜನಿಸಿದ ಸರೋಜಿನಿ ಶೆಟ್ಟಿಯವರು ತಮ್ಮ ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಪದವಿಪೂರ್ವ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದರು.
ಇವರ ನಿಜವಾದ ಹೆಸರು ಶರ್ವಾಣಿ ಶೆಟ್ಟಿ ಎಂದಾಗಿತ್ತು. ಮುಂದೆ ತುಳುನಾಡ ಸಿರಿ ತುಳು ಚಲನ ಚಿತ್ರದಲ್ಲಿ ಶರ್ವಾಣಿ ಹೆಸರನ್ನು ಸರೋಜಿನಿ ಶೆಟ್ಟಿ ಎಂದು ಬದಲಾಯಿಸಲಾಯಿತು. ಮುಂದೆ ಸರೋಜಿನಿ ಶೆಟ್ಟಿ ಹೆಸರಲ್ಲೇ ಖ್ಯಾತಿ ಪಡೆದರು. ಇವರ ವಿವಾಹವು ಪ್ರತಿಷ್ಠಿತ ಬಡಿಲ ಗುತ್ತು ಶ್ರೀ ಸುಬ್ಬಣ್ಣ ಶೆಟ್ಟಿಯವರೊಂದಿಗೆ ನಡೆಯಿತು. ಸುಮಧುರ ದಾಂಪತ್ಯದ ಫಲವಾಗಿ, ಹರಿ ಪ್ರಸಾದ್ ಎಂಬ ಪುತ್ರ ರತ್ನವನ್ನು ಪಡೆದರು, ಮಗ ಬೆಳೆದು ವಯಸ್ಕನಾದಾಗ ದಿವ್ಯಶೀ ಶೆಟ್ಟಿಯವರು ಸೊಸೆಯಾಗಿ ಮನೆ ಮನ ತುಂಬಿದರು. ಆರ್ಯನ್ ಮತ್ತು ಆರ್ಮಿಕಾ ಇಬ್ಬರು ಮೊಮ್ಮಕ್ಕಳೊಂದಿಗೆ ಸದ್ಯ ಇವರ ವಾಸ್ತವ್ಯ ಮಂಗಳೂರಿನ ಶಕ್ತಿ ನಗರದಲ್ಲಿದೆ. ಸರೋಜಿನಿ ಶೆಟ್ಟಿಯವರು ನಿರಂತರ ರಂಗಭೂಮಿಯಲ್ಲಿ ಕಲಾ ಸೇವೆ ಮಾಡುತ್ತಾ ಸಾರ್ಥಕ್ಯ ಕಂಡವರು.
ತುಳು ರಂಗಭೂಮಿಯಲ್ಲಿ ಅಭಿನಯಿಸುತ್ತಾ ಶ್ರೇಷ್ಟ ಕಲಾವಿದೆಯಾಗಿ ಅನೇಕಾನೇಕ ನಾಟಕಗಳಲ್ಲಿ ಪಾತ್ರಕ್ಕೆ ಜೀವ ತುಂಬಿ, ತನ್ನ ನೈಜ ಅಭಿನಯದೊಂದಿಗೆ 2500 ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ನೀಡಿ ಕಲಾಭಿಮಾನಿಗಳ ಕಲಾ ತೃಷೆಯನ್ನು ನೀಗಿಸಿದ ಮಹಾನ್ ಕಲಾವಿದೆ.ಅವರು ಅಭಿನಯಿಸಿದ ತುಳು ನಾಟಕಗಳು: ಕಂಡನೆ ಬುಡೆದಿ, ಕಾಸ್ ದಾಯೆ ಕಂಡನೆ,ತಮ್ಮಲೆ ಅರ್ವತ್ತನ ಕೋಲ,ಏರ್ ಮಲ್ತಿನ ತಪ್ಪು ವಿಶ್ವಾ ಮಿತ್ರ ಮೇನಕೆ, ಪೊರ್ತು ಕಂತ್ಂಡ್, ತೆಲ್ಪರೆ ಕಲ್ಪಿ,ನೆತ್ತೆರಾ ನೀರಾ, ಪಂಥ, ಕುಂಕುಮ ಬಂಗಾರ್ ಬಾಲೆ,ಅಜ್ಜಿನ ಗೌಜಿ, ಎರು ಮೈಂದೆ, ಮಿನಿಷ್ಟರ್ ಮುಂಡಪ್ಪೆ, ಫ್ರೊಫೆಸರ್ ಬರ್ಪೆರ್,ಸತ್ಯ ಸಯ್ಯಂದ್, ಕಾನೂನ್ದ ಕಣ್ಣ್,ಗಂಟೇತಾಂಡ್ ಈರ್ ದೂರ.ತೆಲಿಕೆದ ಬರ್ಸೊಲು, ಬಲೇ ಚಾ ಪರ್ಕ,ತೂ ತುಡರ್, ಕೌನ್ಸಿಲರ್ ಕೊಗ್ಗಣ್ಣೆ, ಕಟೀಲ್ದಪ್ಪೆ ಉಳ್ಳಾಲ್ದಿ.ಕಟೀಲ್ದಪ್ಪೆ ಉಳ್ಳಾಲ್ದಿ ನಾಟಕ ದಲ್ಲಿ 300 ಕ್ಕೂ ಹೆಚ್ಚು ಬಾರಿ ಅಪ್ಪೆ ಉಳ್ಳಾಲ್ದಿ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲೂ ತನ್ನ ಅಭಿನಯ ಚತುರತೆಯನ್ನು ಚೋಮನ ದುಡಿ ಶುಭ ಮಂಗಳ ಶಿವ ಶಂಕರ,ಅರ್ಜುನ, ಮಾತೃ ವಾತ್ಸಲ್ಯ ಗೋಲಿಬಾರ್, ಲವ್, ಪುಟ್ಟ ಹೆಂಡತಿ, ಈ ಜೀವ ನಿನಗಾಗಿ, ಕೃಷ್ಣಾ ನೀ ಬೇಗನೆ ಬಾರೋ, ಹಳ್ಳಿಯಾದರೇನು ಶಿವ, ಚೆಲ್ಲಾ ಪಿಲ್ಲಿ ಇಂತಾ ಹೆಸರಾಂತ ಸಿನೆಮಾಗಳಲ್ಲಿ ಸಾಬೀತು ಪಡಿಸಿದ ಪ್ರತಿಭಾವಂತೆ.
ಹಿಂದಿ ಸಿನಿ ಜಗತ್ತಿಗೂ ಲಗ್ಗೆ ಇಟ್ಟ ಈಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಗಂಗಾ ಯಮುನಾ ಸರಸ್ವತಿ ಚಲನ ಚಿತ್ರದಲ್ಲಿ ಬಿಗ್ ಬಿ ಯೊಂದಿಗೆ ನಟಿಸಿ ಸೈ ಅನ್ನಿಸಿಕೊಂಡವರು. ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳ ಚಿತ್ರ ವಿಧೇಯನ್ ನಲ್ಲಿ ಮಲಯಾಳ ಚಿತ್ರರಂಗದ ದಂತಕತೆ ಮುಮ್ಮಟ್ಟಿಯವರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಸರೋಜಿನಿ ಶೆಟ್ಟಿಯವರದ್ದು.
ನಟಿಸಿದ ದಾರವಾಹಿಗಳು: ಮಾಂಗಲ್ಯ ನೇಣಲ್ಲ, ಜೀವನ್ಮುಖಿ,ಚಿರಸ್ಮರಣೆ,ಸರಸಮ್ಮನ ಸಮಾದಿ,ಬರವುದ ಬಂಡಸಾಲೆ, ಇರುಳು. ದಾರವಾಹಿಗಳಲ್ಲಿ ನಟಿಸಿ ಮನೆ ಮಾತಾದವರು
ಅಭಿನಯಿಸಿದ ಕನ್ನಡ ನಾಟಕಗಳು: ಮಣ್ಣಿನ ಮಗಳು, ಬೆಳವಡಿ ಮಲ್ಲಮ್ಮ,ವೀರ ರಾಣಿ ಅಬ್ಬಕ್ಕ, ಕಿತ್ತೂರ ರಾಣಿ ಚೆನ್ನಮ್ಮ, ವೀರ ಎಚ್ಚಮ ನಾಯಕ, ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಶನಿ ಪ್ರಭಾವ.
ತುಳು ರಂಗಭೂಮಿಯಲ್ಲಿ ನಟಿಸಿದ ನಾಟಕ ತಂಡಗಳು: ಶ್ರೀ ಗಣೇಶ್ ನಾಟಕ ಸಭಾ, ಚಾ ಪರ್ಕ ಕಲಾವಿದರು ಮಂಗಳೂರು, ಲಲಿತೆ ಕಲಾವಿದರು ಮಂಗಳೂರು. ಶರವು ಕಲಾವಿದರ ತಂಡ. ಅಲ್ಲದೇ ತುಳು ಸಿನೆಮಾ ರಂಗದಲ್ಲೂ ತಮ್ಮ ಅಭಿನಯದ ಛಾಪನ್ನು ಮೂಡಿಸಿ ಶ್ರೇಷ್ಟ ಅಭಿನೇತ್ರೆ ಎಂಬ ಹೊಗಳಿಕೆಗೆ ತುಳು ಸಿನೆಮಾಗಳಾದ.ತುಳುನಾಡ ಸಿರಿ, ಬಂಗಾರ್ ಪಟ್ಲೆರ್, ಸಂಗಮ ಸಾಕ್ಷಿ ಬೊಳ್ಳಿದೋಟ,ದಾರೆದ ಸೀರೆ,ಸೆಪ್ಟೆಂಬರ್8 , ಮಾರಿ ಬಲೆ,ಚಂಡಿ ಕೋರಿ, ತೆಲಿಕೆದ ಬೊಳ್ಳಿಲು, ಅರೆ ಮರ್ಲೆರ್,ಏರೆಗಾವುಯೇ ಕಿರಿ ಕಿರಿ, ಬದಿ, ಚಾಲಿ ಪೋಲಿಲು, ದಬಕ್ ದಬ ಐಸ, ರಿಕ್ಷಾ ಡ್ರೈವರ್, ಜೈ ತುಳುನಾಡ್ ಗಳಲ್ಲಿ ಅಭಿನಯ.
ಗೌರವ ಪ್ರಶಸ್ತಿ ನೀಡಿದ ಸಂಸ್ಥೆಗಳು:
1984 ರ ಪ್ರಥಮ ತುಳು ವಿಶ್ವ ಸಮ್ಮೇಳನದಲ್ಲಿ ರಾಜರ್ಷಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪೂಜ್ಯ ಖಾವಂದರಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಮತ್ತು ಆಗಿನ ಸಹಾಯಕ ಗ್ರಹ ಸಚಿವರಾದ ಪಿ.ಎಂ ಶಹೀದ್ ಉಪಸ್ಥಿತಿಯಲ್ಲಿ ಸನ್ಮಾನಗೊಂಡ ಅದೃಷ್ಟವಂತ ಕಲಾವಿದೆ ಶ್ರೀಮತಿ ಸರೋಜಿನಿ ಎಸ್ ಶೆಟ್ಟಿ.ಅಲ್ಲದೇ2011 ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ವಜ್ರ ಮಹೋತ್ಸವ ಸಲುವಾಗಿ ನಡೆದ ಕಲೋತ್ಸವದಲ್ಲಿ ಕಟೀಲ್ದಪ್ಪೆ ಉಳ್ಳಾಲ್ದಿ ನಾಟಕದ ನಟನೆಗಾಗಿ ಶ್ರೇಷ್ಟ ನಟಿ ಪ್ರಶಸ್ತಿ. ತುಳುವೆರೆ ಆಯನೋ ಸಂದರ್ಭದಲ್ಲಿ ಜೀವಮಾನ ಸಾಧನಾ ಪ್ರಶಸ್ತಿ.
ಅಭಿನಯಿಸಿದ ರಾಜ್ಯ ಮತ್ತು ರಾಷ್ಟ್ರಗಳು: ಕೇರಳ, ಚೆನ್ನೈ, ಬೆಂಗಳೂರು,ಬೆಳಗಾಂ, ಮೈಸೂರು,ಮುಂಬೈ ಕರ್ನಾಟಕ, ಮಹಾರಾಷ್ಟ್ರ,ಗುಜರಾತ್ ದೆಹಲಿಗಳಲ್ಲದೆ, ಗಲ್ಫ್ ರಾಷ್ಟ್ರಗಳಾದ ದುಬೈ,ಅಬುದಾಬಿ, ಬಹ್ರೆಯ್ನ್, ಓಮನ್.
ಸನ್ಮಾನಿಸಿದ ಸಂಸ್ಥೆಗಳು: ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ತು,ತುಳು ನಾಟಕ ಕಲಾವಿದರ ಒಕ್ಕೂಟ(ರಿ.)ಮಂಗಳೂರು. ಬಂಟರ ಸಂಘ ಮುಂಬೈ,ಕದಿರೆಯ ಕಲಾವಿದರು ಕದ್ರಿ ಮಂಗಳೂರು.ಸೌಜನ್ಯ ಮಹಿಳಾ ಮಂಡಲ(ರಿ.) ಉರ್ವ.ರಂಗಭೂಮಿ ಉಡುಪಿ. ದೆಹಲಿ ಕರ್ನಾಟಕ ಸಂಘ.ವಿಶ್ವ ತುಳುವೆರೆ ಆಯನೊ,ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಪದವಿನಂಗಡಿ.ಶ್ರೀ ಗುರುದೇವ ದತ್ತ ಸಂಸ್ಥಾನಮ್ ಒಡಿಯೂರು.ಶಿವಶಕ್ತಿ ತರುಣ ವೃಂದ ಶಕ್ತಿನಗರ ಮಂಗಳೂರು.ಕಡಲ ನಾಡ ಕಲಾವಿದರು ಮಂಗಳೂರು.ವೀರ ರಾಣಿ ಅಬ್ಬಕ್ಕ ಸಮಿತಿ ಉಳ್ಳಾಲ.
ಸರೋಜಿನಿ ಶೆಟ್ಟಿಯವರಿಗೆ ದೊರಕಿದ ಪ್ರಮುಖ ಬಿರುದುಗಳು: ಅಭಿನಯ ಅಭಿನೇತ್ರಿ, ರಂಗ ಶಾರದೆ. ಕಲಾ ಕೌಸ್ತುಭ.
ಪ್ರಮುಖ ಪ್ರಶಸ್ತಿಗಳು:
ರಂಗಭೂಮಿ ಪ್ರಶಸ್ತಿ1989
ಉದಯವಾಣಿ ವಿಂಶತಿ ಪ್ರಶಸ್ತಿ 1990
ವೀರರಾಣಿ ಅಬ್ಬಕ್ಕ ಪ್ರಶಸ್ತಿ 1999
ತೌಳವ ಪ್ರಶಸ್ತಿ2003
ತುಳು ಸಿರಿ ಪ್ರಶಸ್ತಿ2005
ದೆಹಲಿಯ ರಂಗ ಭಾರತಿ ಪ್ರಶಸ್ತಿ2007
ಸ್ವರ್ಣಕಮಲ ಪ್ರಶಸ್ತಿ2008
ದಿ.ಎಂ ವಿಷ್ಣುಮೂರ್ತಿ ಸ್ಮಾರಕ ಪ್ರಶಸ್ತಿ2010
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ2011.2020-21 ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
ರಂಗಭೂಮಿಯ ಪ್ರವೇಶ: ತಾನು ಕಲಿತ ಶಾಲೆಯ ಐದನೇ ತರಗತಿಯಲ್ಲಿ ಕಂಸ ನ ಪಾತ್ರದ ಮೂಲಕ.
ಡಾ ಶಿವರಾಮ ಕಾರಂತರು ರಚಿಸಿ, ಬಿ.ವಿ ಕಾರಂತರು ನಿರ್ದೇಶಿಸಿದ ಚೋಮನ ದುಡಿ ಚಲನ ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶ.
ಹೀಗೆ ಬಹು ಭಾಷಾ ನಟಿಯಾಗಿ, ಎಲ್ಲಾ ರಂಗಗಳಲ್ಲೂ ಪಳಗಿದ ಅಭಿನಯ ವಿಶಾರದೆ, ಕಲಾ ಸಾಮ್ರಾಜ್ಞಿ ನಮ್ಮ ಹೆಮ್ಮೆಯ ಸರೋಜಿನಿ ಎಸ್ ಶೆಟ್ಟಿ.
- ನೀತಾ ರಾಜೇಶ್ ಶೆಟ್ಟಿ
2 Comments
congratulations
Happy women’s day and congratulations