ವಿರಾಜಪೇಟೆ : ಮೊಗರಗಲ್ಲಿಯಲ್ಲಿ ಸಾಧಿಕ್ ಆರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕಲಾ ಉತ್ಸವ ಕೊಡಗು -2023’ ವರ್ಣಚಿತ್ರಗಳು, ಶಿಲ್ಪಗಳು, ಅನುಸ್ಥಾಪನ ಕಲೆ, ಛಾಯಾಗ್ರಹಣ ಇವುಗಳ ತಯಾರಿಕೆ ಮತ್ತು ಪ್ರದರ್ಶನವು ದಿನಾಂಕ 11-11-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ದಿನಾಂಕ 31-12-2023ರ ತನಕ ನಡೆಯಲಿದೆ.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಈ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ “ಕೊಡಗು ರಮ್ಯ ಪರಿಸರದ, ಪ್ರಕೃತಿ ಸೊಬಗಿನ ನಾಡು. ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೇ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾ ಚಿತ್ರ ಮೂಡಿ ಬರುತ್ತದೆ. ಆದ್ದರಿಂದ ಕಲಾವಿದರಿಗೆ ಒತ್ತಾಸೆ ನೀಡುವಂತಹ ತಾಣಗಳನ್ನು ಆರಿಸಿ ಚಿತ್ರಕಲಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ. ವಿದ್ಯಾವಂತರಿದ್ದರೂ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬರುವುದಿಲ್ಲ ಹಾಗೂ ಪ್ರೋತ್ಸಾಹ ನೀಡುವುದಿಲ್ಲ. ಕಲಾವಿದರಿಗೆ ಪ್ರೋತ್ಸಾಹ ನೀಡಿ ವೇದಿಕೆ ಒದಗಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕೊಡಗು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿದರು. ಶಿಬಿರ ಆಯೋಜಕ ಚಿತ್ರ ಕಲಾವಿದ ಸಾಧಿಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಮಾಲ್ದಾರೆಯ ಬಾವ, ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಸಾಹಿತಿಗಳಾದ ರಜಿತ ಕಾರ್ಯಪ್ಪ ಪಾಲ್ಗೊಂಡಿದ್ದರು. ಬೆಂಗಳೂರಿನ ಮಂಜುಗೌಡ ಹಲವರ ಭಾವಚಿತ್ರವನ್ನು ಸ್ಥಳದಲ್ಲೇ ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.
ಕಲಾ ಉತ್ಸವ ಕೊಡಗು 2023 ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 03-12-2023ರಂದು ಬೆಳಗ್ಗೆ 10:30 ಗಂಟೆಗೆ ವಿರಾಜಪೇಟೆ ನಗರದಲ್ಲಿ ನಡೆಯುತ್ತಿರುವ ಕಲಾ ಪ್ರದರ್ಶನದ ಸ್ಥಳದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ಕಲಾ ಉತ್ಸವ ಸಮಿತಿ ‘ಸಮೂಹದ ಕವಿಗೋಷ್ಠಿ’ ಮತ್ತು ‘ಜಾನಪದ ಗೀತ ಗಾಯನ’ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಗಿರೀಶ್ ಕಿಗ್ಗಾಲು ದೂರವಾಣಿ ಸಂಖ್ಯೆ 98452 97300, ಭಾಗ್ಯವತಿ ಅಣ್ಣಪ್ಪ ಟಿ.ವಿ. 9845475153, ಸುಪ್ರೀತ ದಿಲೀಪ್ 9632202820, ವೈಲೇಶ ಪಿ.ಎಸ್. ಕೊಡಗು 8861405738 ಮತ್ತು ಸಾಧಿಕ್ ಹಂಸ 9845820257 ಇವರ ಚರವಾಣಿಗಳಿಗೆ ಕರೆ ಅಥವಾ ಸಂದೇಶಗಳನ್ನು ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.