ಕಾಸರಗೋಡು : ಕಾಸರಗೋಡಿನ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ನೀಡುವ ‘ಕಲಾ ಚೈತನ್ಯ’ ಪ್ರಶಸ್ತಿಗೆ ಸುಳ್ಯದ ಕಲಾ ಪ್ರತಿಭೆ ಅವನಿ ಎಂ. ಎಸ್. ಆಯ್ಕೆಯಾಗಿದ್ದಾಳೆ.
ದ.ಕ ಜಿಲ್ಲೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿಗಳಾದ ಮೋಂಟಡ್ಕ ಶಶಿಧರ ಎಂ. ಜೆ. ಮತ್ತು ರೇಷ್ಮಾ ದಂಪತಿಗಳ ಮುದ್ದಿನ ಪುತ್ರಿಯಾದ ಕು. ಅವನಿ ಎಂ. ಎಸ್. ಪ್ರಸ್ತುತ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಾಂಗಮಾಡುತ್ತಿದ್ದಾಳೆ.
ತನ್ನ ಒಂಬತ್ತನೆಯ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಇವಳು ಎಲ್.ಕೆ.ಜಿ ಓದುತ್ತಿರುವಾಗಲೇ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಸಂಗೀತ, ಯೋಗ, ನೃತ್ಯ, ಚೆಸ್, ಚಿತ್ರಕಲೆ ಭರತನಾಟ್ಯ, ನಟನೆ, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವಳ ಹವ್ಯಾಸವಾಗಿದೆ.
ತನ್ನ 4ನೇ ವಯಸ್ಸಿನಿಂದ ಸುಗಮ ಸಂಗೀತವನ್ನು ಗುರುಗಳಾದ ಡಾ. ಕಿರಣ್ ಕುಮಾರ್ ಗಾನಸಿರಿ ಪುತ್ತೂರು ಇವರಿಂದ ತರಬೇತಿಯನ್ನು ಪಡೆಯುತ್ತಿರುವ ಈಕೆ, ವಿದ್ವಾನ್ ಕಾಂಚನಾ ಈಶ್ವರ ಭಟ್ ಇವರ ಸುನಾದ ಸಂಗೀತ ಕಲಾಶಾಲೆ ಸುಳ್ಯ ಇಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಯೋಗಾಭ್ಯಾಸವನ್ನು ತನ್ನ 5ನೇ ವಯಸಿನಿಂದಲೇ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಯೋಗ ಗುರುಗಳಾದ ಶ್ರೀ ಸಂತೋಷ್ ಮುಂಡಕಜೆಯವರಿಂದ ಪಡೆಯುತ್ತಿದ್ದಾಳೆ. ಚಿತ್ರಕಲೆಯನ್ನು 1ನೇ ತರಗತಿಯಿಂದ ಕ್ರಿಯೇಟಿವ್ ಆರ್ಟ್ಸ್‌ನ ಪ್ರಸನ್ನ ಐವರ್ನಾಡು ಇವರಿಂದ ಹಾಗೂ ಭರತನಾಟ್ಯವನ್ನು ಕೇರಳದ ‘ಕಲಾಕ್ಷೇತ್ರ’ ಇದರ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಸುಜಾತ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.