ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿಯ ದ್ವಿತೀಯ ಕಾರ್ಯಕ್ರಮವು ದಿನಾಂಕ 13 ಸೆಪ್ಟೆಂಬರ್ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆ ಕುಮಾರಿ ಪ್ರಣಮ್ಯ ಪಾಲೆಚ್ಚರ್ ಇವರ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಎ.ಪಿ. ಕೃಷ್ಣ ಇವರು “ಇಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರಿ ಮನ್ವಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕುಮಾರಿ ಸಾನಿಧ್ಯ ಇವರ ಓಂಕಾರನಾದ, ಕುಮಾರಿ ಶ್ರೀಲಕ್ಷ್ಮಿ ಇವರ ಶಂಖನಾದ, ಕುಮಾರಿ ಶ್ರೇಯ ಇವರ ಪಂಚಾಂಗ ಪಠಣ, ಕುಮಾರಿ ಪ್ರಾರ್ಥನಾ ಇವರಿಂದ ಹಸ್ತಗಳ ಬಗ್ಗೆ ವಿಷಯ ಮಂಡಣೆ ಹೆಚ್ಚಿನ ಮೆರುಗು ನೀಡಿತು. ಅತಿಥಿಗಳಿಗೆ ಸ್ಮರಣಿಕೆಯಾಗಿ ಮಕ್ಕಳು ನೆಟ್ಟ ಗಿಡ ಕೊಡುವ ಮೂಲಕ ಸಂಸ್ಥೆ ಪ್ರಕೃತಿಯ ಬಗ್ಗೆ ತನ್ನ ಕಾಳಜಿ ಮೆರೆಯಿತು. ಕಲಾಸೂರ್ಯ ನೃತ್ಯಾಲಯದ ಗುರು ವಿದುಷಿ ಸೌಜನ್ಯ ವಿ. ಪಡುವೆಟ್ನಾಯ ಸ್ವಾಗತಿಸಿ, ಸಂಚಾಲಕರಾದ ವಿಕ್ರಮ್ ಪಡುವೆಟ್ನಾಯ ವಂದಿಸಿ, ಕುಮಾರಿ ಸುಹಾನಿ ಕಾರ್ಯಕ್ರಮ ನಿರೂಪಿಸಿದರು.