ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕವು ಕನ್ನಡದ ಶ್ರೇಷ್ಠ ಪ್ರಕಾಶಕ, ಪತ್ರಕರ್ತ, ಸಾಹಿತಿ ಹಾಗೂ ನಾಹಿತ್ಯೋಪಾನಕ ವಿ.ಬಿ. ಹೊಸಮನೆ ಅವರು ಸ್ಥಾಪಿಸಿದ ‘ಕಲಾದರ್ಶನ ದತ್ತಿ ಉಪನ್ಯಾಸ’ ಕಾರ್ಯಕ್ರಮವು ದಿನಾಂಕ 18 ಡಿಸೆಂಬರ್ 2024ರಂದು ಮಂಗಳೂರಿನ ವಾಮಂಜೂರಿನಲ್ಲಿರುವ ಸರಕಾರಿ ಪ್ರೌಢಶಾಲೆ ಮೂಡುಶೆಡ್ಡೆ ಇಲ್ಲಿ ನಡೆಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ದತ್ತಿ ದಾನಿ ವಿದ್ವಾನ್ ವಿ. ಬಿ. ಹೊಸಮನೆಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಕನ್ನಡನಾಡಿನ ಪ್ರಖ್ಯಾತ ಲೇಖಕಿ ಹಾಗೂ ನಿವೃತ್ತ ಅಧ್ಯಾಪಕಿಯಾದ ಬಿ .ಎಂ. ರೋಹಿಣಿ ಇವರು “ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ” ಎನ್ನುವ ವಿಷಯದಲ್ಲಿ ಸುಲಲಿತವಾಗಿ ಎಳೆಯ ಹೃದಯಗಳಿಗೆ ಮನಮುಟ್ಟುವಂತೆ ಮಾತನಾಡಿ ದತ್ತಿ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿ. ಬಿ. ಹೊಸಮನೆಯವರ ಸುಪುತ್ರ, ನಿವೃತ್ತ ಮುಖ್ಯೋಪಾಧ್ಯಾಯರಾದ ಭಾಸ್ಕರ ಹೊಸಮನೆ ತಮ್ಮ ತಂದೆಯವರು ಬಡತನದ ಬದುಕಿನಲ್ಲೂ ಬೆಳೆಸಿಕೊಂಡು ಬಂದ ಸಾಹಿತ್ಯ ಪ್ರೇಮದ ಬಗ್ಗೆ ನೆನಪಿಸಿಕೊಂಡರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಯರಾಮ ಕೊಟ್ಟಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಬಿ. ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ರೇವಣ್ಕರ್ ಸಭಾಧ್ಯಕ್ಷತೆ ವಹಿಸಿದ್ದರು. ಘಟಕದ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಗಣೇಶ ಪ್ರಸಾದ ಜೀ ನಿರೂಪಿಸಿ, ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.
ಖ್ಯಾತ ಸಾಹಿತಿ ಹಾಗೂ ಪರಿಷತ್ತಿನ ಪದಾಧಿಕಾರಿ ಬೆನೆಟ್ ಅಮ್ಮನ್ನರವರ ಸಮರ್ಥ ಸಂಯೋಜನೆಯಲ್ಲಿ ಕಾರ್ಯಕ್ರಮವು ರೂಪುಗೊಂಡಿತ್ತು. ಪರಿಷತ್ತಿನ ಬಿ. ಕೃಷ್ಣಪ್ಪ ನಾಯಕ್, ನಿಜಗುಣ ದೊಡ್ಡಮನಿ, ಶಾಲಾ ಅಧ್ಯಾಪಕ ವೃಂದದವರು ಹಾಗೂ ಸುಮಾರು 60 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.