ಮಂಚಿ : ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರೀಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’. ಇದರ 3ನೇ ಪ್ರಸ್ತುತಿ ದಿನಾಂಕ 30 ನವೆಂಬರ್ 2025ರ ಭಾನುವಾರ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ) ಮಂಚಿ ಇವರ ಸಹಯೋಗದಲ್ಲಿ ಲಯನ್ಸ್ ಸೇವಾ ಮಂದಿರ ಮಂಚಿ ಇಲ್ಲಿ ನಡೆಯಿತು.

ಕುಮಾರಿ ಸಿಂಚನ ಇವರ ಓಂಕಾರ – ಶಂಖನಾದಗಳ ಮೂಲಕ ವಾತಾವರಣ ಶುದ್ಧವಾಗಿಸಿದ ಬಳಿಕ ಕುಮಾರಿಯರಾದ ಆದ್ಯ ಹಾಗೂ ನಿಹಾರಿಕಾ ಎಸ್. ಪಾಲನ್ ಪ್ರಾರ್ಥಿಸಿದರು. ಕುಮಾರಿ ಭೂಮಿಕಾ ನಿತ್ಯ ಪಂಚಾಂಗ ವಾಚಿಸಿದ ನಂತರ ಕುಮಾರಿ ಯಜ್ಞ ಸುಭಾಷಿತ ನುಡಿದರು. ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿದ ಲ| ಸದಾನಂದ ಉಪಾಧ್ಯಾಯ ಎಂ.ಜೆ.ಎಫ್. ಇವರನ್ನು ಕುಮಾರಿ ಮಾನ್ಯ ಪರಿಚಯಿಸಿದರು. ಅಭ್ಯಾಗತರು ದೀಪ ಪ್ರಜ್ವಲನೆಗೈದು ನೃತ್ಯ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕಲಾವಿದೆಯಾದ ವಿದುಷಿ ನಿಧಿ ಪುತ್ತೂರು ಇವರನ್ನು ಕುಮಾರಿ ಅವನಿ ಪಿ.ಎಸ್. ಪರಿಚಯಿಸಿದರು. ಕುಮಾರಿ ಸಮೃದ್ಧಿ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ನೃತ್ಯ ಕಾರ್ಯಕ್ರಮದ ಮೊದಲ ಪ್ರಸ್ತುತಿ ಭೋಗೇಂದ್ರ ಶಾಯಿನಂ. ಕುಂತಲವರಾಳಿ ರಾಗ ಖಂಡ ಛಾಪು ತಾಳದಲ್ಲಿ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿಯ ಸುಂದರ ವರ್ಣನೆಯ ಅನುರೂಪ ಸಂಚಾರದ ಈ ಕೃತಿಯು ಕಲಾವಿದೆ ಬಹಳ ಅಚ್ಚುಕಟ್ಟಾಗಿ ದೇವಾಲಯ ಮತ್ತು ಸ್ವಾಮಿಯ ಗರ್ಭಗುಡಿಯ ದೃಶ್ಯವನ್ನು ಕಲಾರಸಿಕರ ಮುಂದೆ ತೆರೆದಿಟ್ಟರು.

ನಂತರ ಭರತನಾಟ್ಯದ ಹಿರಿತನವನ್ನು ಒಳಗೊಂಡ ಪದವರ್ಣ, ಶ್ರೀರಾಮನ ಲೀಲೆಗಳನ್ನು ಒಳಗೊಂಡ ಪ್ರಸ್ತುತಿಯು ರಾಮಪ್ರಿಯ ರಾಗ ಮತ್ತು ಆದಿತಾಳದಲ್ಲಿ ರಚನೆಗೊಂಡಿದ್ದು, ಸಂಪೂರ್ಣ ರಾಮಾಯಣದ ವಿಶೇಷ ಸಂದರ್ಭಗಳ ಸಂಕ್ಷಿಪ್ತ ವಿವರಣೆ ನೀಡುವ ವಿದ್ವಾನ್ ದೀಪಕ್ ಕುಮಾರ್ ಇವರ ನೃತ್ಯ ಸಂಯೋಜನೆಯು ನೃತ್ಯ ರಸಿಕರ ಮನ ಗೆದ್ದಿತ್ತು. ಕಲಾವಿದೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೇಕ್ಷಕರ ಮನ ಹಿಡಿದಿಡುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಕ್ಷೇತ್ರಜ್ಞನ ಪದಂ ಮೂಲಕ ನಾಯಕಿ ಭಾವದ ಅತ್ಯಂತ ಸೊಗಸಾದ ಪ್ರಸ್ತುತಿ. ಖಂಡಿತ ನಾಯಕಿಯು ತನ್ನ ವ್ಯಂಗ್ಯಗಳ ಮೂಲಕ ನಾಯಕನನ್ನು ಜರೆಯುವ ರೀತಿಯು ಸುಂದರವಾಗಿತ್ತು.


ನೃತ್ಯ ಪ್ರಸ್ತುತಿ ಬಳಿಕ ಮಾತನಾಡಿದ ಶ್ರೀ ಸದಾನಂದ ಉಪಾಧ್ಯಾಯ ಇವರು ಕಲಾವಿದೆ ವಿದುಷಿ ನಿಧಿ, ಕಲಾ ಗುರುಗಳು ವಿದ್ವಾನ್ ದೀಪಕ್ ಕುಮಾರ್ ಹಾಗೂ ಕಲಾ ಪೋಷಕರಾದ ಲ. ಡಾ. ಗೋಪಾಲ ಆಚಾರ್ ಹಾಗೂ ಶ್ರೀಮತಿ ರಮಾ ಜಿ. ಆಚಾರ್ ಇವರುಗಳನ್ನು ಅಭಿನಂದಿಸಿ, ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಪ್ರಯತ್ನವನ್ನು ಶ್ಲಾಘಿಸಿದರು. ಸ್ವತಃ ಕಲಾವಿದರೂ ಆಗಿರುವ ಇವರು ಸುಮಾರು ಒಂದೂವರೆ ಗಂಟೆಗಳ ಈ ಕಾರ್ಯಕ್ರಮವನ್ನು ಪೂರ್ತಿಯಾಗಿ ಆಸ್ವಾದಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಹಸಿರು ಗಿಡದ ಸ್ಮರಣಿಕೆ ನೀಡಿ, ಹಸಿರೇ ಉಸಿರಾಗಲಿ ಎನ್ನುವ ಸಂದೇಶದೊಂದಿಗೆ ಶಾಂತಿ ಮಂತ್ರದ ಮೂಲಕ ‘ಕಲಾಧಾರಾ 3’ ಯಶಸ್ವಿಯಾಗಿ ಮುಕ್ತಾಯಗೊಂಡಿತು.

