ಮಂಚಿ : ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರಿಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸುವ ನೆಲೆಗಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ, ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’ ಇದರ 4ನೇ ಪ್ರಸ್ತುತಿ ದಿನಾಂಕ 21 ಡಿಸೆಂಬರ್ 2025ರ ಭಾನುವಾರ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಸೇವಾ ಟ್ರಸ್ಟ್ (ರಿ.) ಮಂಚಿ ಇವರ ಸಹಯೋಗದಲ್ಲಿ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಕುಮಾರಿ ದಿವ್ಯ ಇವರು ಓಂಕಾರ ಮತ್ತು ಕುಮಾರಿ ಲಿಖಿತ ಶಂಖನಾದಗಳ ಮೂಲಕ ವಾತಾವರಣ ಶುದ್ಧವಾಗಿಸಿ, ಬಳಿಕ ಕುಮಾರಿ ಲಹರಿ ಬಿ. ಶೆಟ್ಟಿ ಪ್ರಾರ್ಥಿಸಿದರು. ಕುಮಾರಿ ದೀತ್ಯ ನಿತ್ಯ ಪಂಚಾಂಗ ವಾಚಿಸಿದರು, ಕುಮಾರಿ ಪ್ರಿಯಾಂಶಿ ಸುಭಾಷಿತ ನುಡಿದರು. ಕಾರ್ಯಕ್ರಮದ ಅಭ್ಯಾಗತರಾಗಿ ಬಾ. ನಾಗವೇಣಿ ಮಂಚಿ ಇವರು ಆಗಮಿಸಿದ್ದು, ಇವರನ್ನು ಕುಮಾರಿ ಶ್ರೀತಲ್ ಪರಿಚಯಿಸಿದರು. ಬಳಿಕ ದೀಪ ಪ್ರಜ್ವಲನೆಗೈದ ಅಭ್ಯಾಗತರು ನೃತ್ಯ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕಲಾವಿದೆಯಾದ ಮಾತಂಗಿ, ಅಕ್ಷರಿ ಕೆ. ಮತ್ತು ಸನ್ನಿಧಿ ಇವರನ್ನು ಕುಮಾರಿ ಪ್ರಾಪ್ತಿ ಪರಿಚಯಿಸಿ, ಕುಮಾರಿ ಅವನಿ ಟಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ನೃತ್ಯ ಕಾರ್ಯಕ್ರಮದ ಮೊದಲ ಪ್ರಸ್ತುತಿ ಭರತನಾಟ್ಯದ ಮಾರ್ಗ ಪದ್ಧತಿಯ ಮೊದಲ ನೃತ್ಯ ಬಂಧ ಅಲರಿಪು – ಚತುರಶ್ರ ಜಾತಿಯ ಅಲರಿಪು ಉತ್ತಮ ವಾತಾವರಣ ಸೃಷ್ಟಿಸಿತು. ಮೂವರೂ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಕಾರ್ಯಕ್ರಮಕ್ಕೆ ಸಿದ್ಧರಾದರು. ನಂತರ ರಾಮಾಯಣದ ಯುದ್ಧದ ಸನ್ನಿವೇಶ ವರ್ಣಿಸುವ ಅಲ್ಲಿ ನೋಡಲು ರಾಮ ದೇವರನಾಮದಲ್ಲಿ ಬಹಳ ಉತ್ಸಾಹದಿಂದ ಮೂವರು ಮಕ್ಕಳು ಅಭಿನಯಿಸಿದರು. ರಾಮನು ಯುದ್ಧಭೂಮಿಯಲ್ಲಿ ಮಾಡಿದ ಪವಾಡದ ಅದ್ಭುತವನ್ನು ರಸವತ್ತಾಗಿ ತೋರಿಸಿದರು. ಮೂರನೇ ನೃತ್ಯ ದೇವಿಯ ಸ್ತುತಿ – ಓಂಕಾರ ಬಿಂದು ಮಧ್ಯ ನಿಲಯೇ. ಇದರಲ್ಲಿ ದೇವಿಯನ್ನು ಸ್ತುತಿಸಿ ದುಷ್ಟ ಮಹಿಷಾಸುರನನ್ನು ಸಂಹರಿಸಿದ ಚಾಮುಂಡೇಶ್ವರಿಯ ಸನ್ನಿವೇಶವನ್ನು ಬಹಳ ರಸವತ್ತಾಗಿ, ತಾಳಕ್ಕೆ ಸರಿಯಾದ ಹೆಜ್ಜೆಗಾರಿಕೆಯಲ್ಲಿ ಪ್ರಸ್ತುತಪಡಿಸಿದರು.

ನಾಲ್ಕನೇ ನೃತ್ಯ ಪುರಂದರದಾಸರ ‘ಗುಮ್ಮನ ಕರೆಯದಿರೆ’ ದೇವರನಾಮದಲ್ಲಿ ಅಕ್ಷರಿ ಮತ್ತು ಸನ್ನಿಧಿ ಕೃಷ್ಣನ ತುಂಟಾಟ ಇನ್ನು ಮನೋಜ್ಞವಾಗಿ ಅಭಿನಯಿಸಿದರು. ಐದನೆಯದಾಗಿ ಮಾತಂಗಿ ಪ್ರಸ್ತುತಪಡಿಸಿದ ಸುಳಿವಿನ ಸ್ತುತಿ ಆನಂದ ನಟಮಿಡುಂ ಫಾರಿನ್ ಬಹಳ ಸುಂದರವಾಗಿ, ಕರಾರುವಾಕ್ಕಾಗಿ ಮಾತಂಗಿಯ ಪ್ರತಿಭೆ ಅನಾವರಣಗೊಳಿಸಿತು. ಕೊನೆಯದಾಗಿ ‘ಆಡಲು ಪೋಗೋಣ’ ನೃತ್ಯದಲ್ಲಿ ಮೂವರೂ ಮಕ್ಕಳು ಬಹಳ ಅದ್ಭುತ ಅಭಿನಯ ನೀಡಿ ಕೃಷ್ಣನ ಜೊತೆಗಿರುವ ಗೋಪಾಲಕರ ಒಡನಾಟವನ್ನು ಚಿತ್ರಿಸಿದರು. ಕಾರ್ಯಕ್ರಮದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್ ರವರು ವಿವರಣೆ ನೃತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಸಹಕಾರಿಯಾಯಿತು.

ನೃತ್ಯ ಪ್ರಸ್ತುತಿ ಬಳಿಕ ಮಾತನಾಡಿದ ಡಾ. ನಾಗವೇಣಿ ಮಂಚಿ ಇವರು ಕಲೆಯ ಮಹತ್ವ, ಅಭ್ಯಾಸದ ಕ್ರಮ ಇತ್ಯಾದಿಗಳ ಬಗ್ಗೆ ತಿಳಿಸಿ ಅಂದಿನ ಪುಟ್ಟ ಮಕ್ಕಳು, ಕಲಾ ಗುರುಗಳು ವಿದ್ವಾನ್ ದೀಪಕ್ ಕುಮಾರ್ ಹಾಗೂ ಕಲಾಪೋಷಕರಾದ ಲ. ಡಾ. ಗೋಪಾಲ ಆಚಾರ್ ಹಾಗೂ ಶ್ರೀಮತಿ ರಮಾ ಜಿ. ಆಚಾರ್ ಅಭಿನಂದಿಸಿದರು. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಪ್ರಯತ್ನವನ್ನು ಶ್ಲಾಘಿಸಿದರು. ಸ್ವತಃ ಕಲಾವಿದರೂ, ಸಂಶೋಧಕರೂ ಆಗಿರುವ ಇವರು ಸುಮಾರು 1.3೦ ಗಂಟೆಗಳ ಈ ಕಾರ್ಯಕ್ರಮವನ್ನು ಪೂರ್ತಿಯಾಗಿ ಆಸ್ವಾದಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಹಸಿರು ಗಿಡದ ಸ್ಮರಣಿಕೆ ನೀಡಿ, ಹಸಿರೇ ಉಸಿರಾಗಲಿ ಎನ್ನುವ ಸಂದೇಶದೊಂದಿಗೆ ಕಲಾಧಾರಾ 4 ಯಶಸ್ವಿಯಾಗಿ ಮುಕ್ತಾಯಗೊಂಡಿತು.
