ಮಂಗಳೂರು : ದಿನಾಂಕ 02 ನವೆಂಬರ್ 2025ರಂದು ಕಲಾಂಗಣದಲ್ಲಿ ಅವಳಿ ಸಂಭ್ರಮ – 21ನೇ ಕಲಾಕಾರ್ ಪುರಸ್ಕಾರ ಹಾಗೂ 287ನೇ ತಿಂಗಳ ವೇದಿಕೆ. ಕೊಂಕಣಿ ರಂಗಭೂಮಿಗೆ ಹಿರಿಮೆ ತಂದುಕೊಟ್ಟ, ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲೂ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಗೆದ್ದ, ‘ಕಾಸರಗೋಡು ಚಿನ್ನಾ’ ಎಂದೇ ಖ್ಯಾತರಾದ ಶ್ರೀನಿವಾಸ ರಾವ್ ಎಸ್. ಇವರಿಗೆ 21ನೇ ಕಲಾಕಾರ್ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕಾರ್ವಾಲ್ಹೊ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ ಈ ಕಲಾಕಾರ್ ಪುರಸ್ಕಾರವನ್ನು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಇವರು ಹಸ್ತಾಂತರಿಸಿದರು. ಈ ಪ್ರಶಸ್ತಿಯು ಶಾಲು, ಹಾರ, ಫಲ-ತಾಂಬೂಲ, ಸ್ಮರಣಿಕೆ ಮತ್ತು ರೂ.50,000/- ನಗದು ಪುರಸ್ಕಾರವನ್ನು ಒಳಗೊಂಡಿದೆ.
 
 ಈ ಸಂದರ್ಭದಲ್ಲಿ ಮಾತನಾಡಿದ ಕಾಮತ್ “ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಕೊಂಕಣಿ ಸಮುದಾಯವು ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಇದರಲ್ಲಿ ಕಾಸರಗೋಡು ಚಿನ್ನಾ ಅವರಂತಹ ನಾಟಕಕಾರರ ಮತ್ತು ಎರಿಕ್ ಒಝಾರಿಯೊ ಅವರಂತಹ ಸಂಗೀತಗಾರರ ಕೊಡುಗೆಗಳು ಮಹತ್ತರದ್ದಾಗಿವೆ. ಈಗ ಲೋಕಸಭೆಯಲ್ಲೂ ಕೊಂಕಣಿ ಮಾತನಾಡಲು ಅವಕಾಶವಿದೆ. ನಾವೆಲ್ಲರೂ ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಕೊಂಕಣಿ ಭವನದ ಕಾಮಗಾರಿಯು ಸ್ಥಗಿತಗೊಂಡಿದೆ. ಅದನ್ನು ಪೂರ್ಣಗೊಳಿಸಲು ನಾನು ನನ್ನ ಸಹಕಾರವನ್ನು ನೀಡುತ್ತೇನೆ” ಎಂದರು.

ಸನ್ಮಾನ ಸ್ವೀಕರಿಸಿ ಕಾಸರಗೋಡು ಚಿನ್ನಾ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, “ನಾನೊಬ್ಬ ಕೊಂಕಣಿ ವ್ಯಕ್ತಿ. ನಾನು ತುಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ. ಭಾಷೆಗಳು ಹೃದಯಗಳನ್ನು ಮತ್ತು ಮನಸ್ಸುಗಳನ್ನು ಒಂದುಗೂಡಿಸಬೇಕು; ಅವು ದ್ವೇಷಕ್ಕೆ ಕಾರಣವಾಗಬಾರದು. ಹಲವಾರು ಸಂಘಟನೆಗಳು ಕೊಂಕಣಿ ಕೆಲಸ ಮಾಡುತ್ತಿವೆ. ಆದರೆ, ನಾನಾ ಕಾರಣಗಳಿಂದಾಗಿ, ಕ್ಯಾಥೊಲಿಕ್ ಕೊಂಕಣಿ ಜನರು ರಚಿಸಿದಷ್ಟು ಸಾಹಿತ್ಯವನ್ನು ಇತರ ಕೊಂಕಣಿ ಸಮುದಾಯಗಳು ರಚಿಸಿಲ್ಲ ಎಂಬುದು ಸತ್ಯ. ನಮಗೆ ಎರಡು ಕಣ್ಣುಗಳಿರಬಹುದು, ಆದರೆ ನಮ್ಮ ದೃಷ್ಟಿ ಒಂದಾಗಿರಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಕೊಂಕಣಿಗಾಗಿ ಮಾಡುವ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕು” ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಗೌರವ ಅತಿಥಿ, ಕಲಾ ಪೋಷಕ ಮತ್ತು ಒಮಾನ್‌ನಲ್ಲಿ ಕೊಂಕಣಿಯ ಆಧಾರಸ್ತಂಭವಾಗಿರುವ ಸ್ಟಾನ್ಲಿ ಫೆರ್ನಾಂಡಿಸ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ವಾಲೊ ಮನೆತನದ ಪ್ರತಿನಿಧಿ ಹಾಗೂ ಭಾಷಾ ತಜ್ಞ ವಂದನೀಯ ಡಾ. ಪ್ರತಾಪ್ ನಾಯಕ್ ಎಸ್.ಜೆ. ಇವರು ಈ ಪ್ರಶಸ್ತಿಯ ಉಗಮ ಮತ್ತು ಬೆಳವಣಿಗೆಯನ್ನು ವಿವರಿಸಿದರು. ಕಲಾಕುಲ್ ಸಹಪೋಷಕರಾದ ಮೈಕಲ್ ಡಿಸೋಜಾ (ದುಬೈ) ಮತ್ತು ಮಾಂಡ್ ಸೊಭಾಣ್ ಅಭಿಮಾನಿ ಜೆರಿ ಪಿಂಟೊ (ಕತಾರ್) ಇವರನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು. ಖಜಾಂಚಿ ಸುನಿಲ್ ಮೊಂತೇರೊ ಸನ್ಮಾನ ಪತ್ರ ವಾಚಿಸಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಲಾಂಗಣ್ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಕಾರ್ಯದರ್ಶಿ ರೊನಿ ಕ್ರಾಸ್ತಾ ಹಾಗೂ ಚಿನ್ನಾರವರ ಪತ್ನಿ ಅನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗಿತಾ ಬೆಳ್ಳಾರೆ ಸನ್ಮಾನ ಸಮಾರಂಭವನ್ನು ನಿರೂಪಿಸಿ, ಕೆರೋನ್ ಮಾಡ್ತಾ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ನಂತರ ತಿಂಗಳ ವೇದಿಕೆ ಸರಣಿಯ 287ನೇ ಕಾರ್ಯಕ್ರಮಕ್ಕೆ ದುಬೈ ಮೂಲದ ಉದ್ಯಮಿ ಫ್ರಾನ್ಸಿಸ್ ಡಿಸೋಜಾ ಇವರು ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಮೆಲೊಡಿ ಸ್ಟಾರ್ ಮ್ಯಾಕ್ಸಿಮ್ ಪಿರೇರಾ ಮತ್ತು ತಂಡದಿಂದ 17ನೇ ‘ಮ್ಯಾಕ್ಸಿಮ್ ನೈಟ್’ ಪ್ರಸ್ತುತಗೊಂಡಿತು. ಮ್ಯಾಕ್ಸಿಮ್ ಪಿರೇರಾ, ಶಿಲ್ಪಾ ಕುಟಿನ್ಹಾ, ಪ್ರಕಾಶ್ ಡಿಸೋಜಾ, ಸೋನಲ್ ಮೊಂತೇರೊ, ಪ್ರಿಯಾ ಮಿನೆಜಸ್, ವಿಲಿಯಂ ರೆಬೆಲ್ಲೊ, ಜೆನೇಲಿಯಾ ಸಲ್ಡಾನ್ಹಾ ಮತ್ತು ಡೆರಿಕ್ ಮಚಾದೊ ಅವರು ತಮ್ಮ ಹಾಡುಗಳಿಂದ ಮನ ರಂಜಿಸಿದರು. ‘ಜಿ-ಮೇಜರ್’ ಬ್ಯಾಂಡಿನ ಶೆಲ್ಡನ್ ಪಿರೇರಾ (ಬೇಸ್ ಗಿಟಾರ್), ಅಲಿಸ್ಟರ್ ಡಿಸೋಜಾ (ಲೀಡ್ ಗಿಟಾರ್), ವೀಕ್ಷಿತ್ (ತಬಲಾ), ಮಿಲ್ಟನ್ ಪಿರೇರಾ (ಡ್ರಮ್ಸ್), ಮ್ಯಾಕ್ಲಿನ್ ಡಿಸೋಜಾ (ಕೀಬೋರ್ಡ್) ಮತ್ತು ಸುನಿಲ್ ಕುಮಾರ್ (ಪಿಟೀಲು) ಸಂಗೀತ ನೀಡಿದರು. ‘ಮಸ್ಕಿರಿ ಮಂಗ್ಳುರ್’ ತಂಡದ ಜೋಸೆಫ್ ಡಿಸೋಜಾ ಮತ್ತು ನಿಲೇಶ್ ತಮ್ಮ ನಗೆಚಟಾಕೆಗಳಿಂದ ರಂಜಿಸಿದರು. ಶೆಲ್ಡನ್ ಕ್ರಾಸ್ತಾ ಮತ್ತು ಗ್ಲಾನಿ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.


									 
					